ಮಂಗಳೂರು ದಸರಾಕ್ಕೆ ಚಾಲನೆ ನೀಡಲಿದ್ದಾರೆ ಡಾ. ಆರತಿಕೃಷ್ಣ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.17ರಿಂದ 26ರ ತನಕ ಮಂಗಳೂರು ದಸರಾ ನಡೆಯಲಿದೆ. ಈ ಮಹೋತ್ಸವಕ್ಕೆ ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಶನಿವಾರದಂದು ಚಾಲನೆ ನೀಡಲಿದ್ದಾರೆ.

ಈ ಬಾರಿಯ ದಸರಾ ಮಹೋತ್ಸವವು ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯಲಿದ್ದು, ‘ನಮ್ಮ ದಸರಾ-ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ನಡೆಯಲಿದೆ.

ನಾಳೆ ಮುಂಜಾನೆ 9.30ಕ್ಕೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠಾಪನೆ, 12ಕ್ಕೆ ದಸರಾಕ್ಕೆ ಚಾಲನೆ, 12.30ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠಾಪನೆ, 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, 1 ಗಂಟೆಗೆ ಅನ್ನ ಪ್ರಸಾದ ವಿತರಣೆ, ಸಂಜೆ 7 ರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ9 ರಿಂದ ದೇವಿ ಪುಷ್ಪಾಲಂಕಾರ ಪೂಜೆ ನೆರವೇರಲಿದೆ.

ಈ ವರ್ಷದ ದಸರಾ ಉದ್ಘಾಟಿಸಲಿರುವ ಆರತಿಕೃಷ್ಣ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಹುಟ್ಟಿದ್ದು ಉಡುಪಿಯಲ್ಲಿ. ಇವರ ತಂದೆ ಬೇಗಾನೆ ರಾಮಯ್ಯ, ತಾಯಿ ಸೀತಾ ಬಿ.ರಾಮಯ್ಯ. ತಂದೆ ಶೃಂಗೇರಿ ಎನ್.ಆರ್.ಪುರದಲ್ಲಿ ವಕೀಲರಾಗಿದ್ದು, ಶೃಂಗೇರಿ ಶಾಸಕರಾಗಿ, ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಡಾ.ಆರತಿಕೃಷ್ಣ ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರಿಗೆ ಸ್ಪಂದಿಸಿದ್ದು, 6 ತಿಂಗಳಿಂದ ಇಲ್ಲಿಯವರೆಗೆ 40 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರು ವಿದೇಶದಿಂದ ಭಾರತಕ್ಕೆ ಮರಳುವಲ್ಲಿ ಸಹಾಯ ಮಾಡಿದ್ದಾರೆ.

ಪ್ರತಿ ಬಾರಿಯಂತೆ ಈ ವರ್ಷವೂ ಕುದ್ರೋಳಿ ಕ್ಷೇತ್ರದಲ್ಲಿ ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜಯ ಸಿ.ಸುವರ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ವರ್ಚುವಲ್ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದ ನೇರ ವೀಕ್ಷಣೆಗೆ ಅವಕಾಶವಿಲ್ಲ. ದೇವಸ್ಥಾನ ಪ್ರಾಂಗಣದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳ ಮೂಲಕ ಹಾಗೂ ನಮ್ಮ ಕುಡ್ಲ ವಾಹಿನಯ ಮುಖಾಂತರ ನೇರ ಪ್ರಸಾರ ಮಾಡಲಾಗುವುದು ಎಂದು ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply