ಕೊರೋನಾ ಸೋಂಕು ತಡೆಗೆ ಸರಳ ಮಾರ್ಗಸೂಚಿ ಅನುಸರಿಸಿ ಆರೋಗ್ಯವಾಗಿರಿ: ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ, ಅಕ್ಟೋಬರ್ 16:  ಕೋವಿಡ್ ಸೋಂಕಿನಿಂದ ದೂರವಿರಲು ಸರಳ ಮಾರ್ಗೋಪಾಯಗಳಾದ ಮುಖಗವಸು ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು, ಕೈತೊಳೆಯುವುದು ಸೇರಿದಂತೆ ಶುಚಿತ್ವ ಕಾಪಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕೋವಿಡ್- 19 ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ಕಾಗಿ ಸಂಬಂಧಿಸಿ ಕೋವಿಡ್-19 ತೀವ್ರ ಪ್ರಚಾರಾಂದೋಲನ ಕಾರ್ಯ ಕ್ರಮ ಅನುಷ್ಟಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ರೋಗ ಬಂದು ಅದಕ್ಕೆ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಒಳಿತು.
ಕೊರೋನಾ ರೋಗದಿಂದ ದೂರ ಉಳಿಯಲು ಸಾರ್ವಜನಿಕರು ಸುಲಭ ಮಾರ್ಗೋಪಾಯಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಆಗಾಗ ಕೈ ತೊಳೆಯುವುದು ಸೇರಿದಂತೆ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿ ಚಾಚು ತಪ್ಪದೇ ಪಾಲಿಸಬೇಕು ಎಂದರು.
ಸರಕಾರಿ ನೌಕರರು ಕೋವಿಡ್ ಪ್ರತಿಜ್ಞೆ ಸ್ವೀಕರಿಸಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವುದರೊಂದಿಗೆ ಜನಸಾಮಾನ್ಯ ರಿಗೆ ಮಾದರಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಮೇಲೆ ತಿಳಿಸಿದ ಮಾರ್ಗಸೂಚಿಯನ್ನು ಪಾಲಿಸುವ ರೀತಿಯಲ್ಲಿ ಕೋವಿಡ್-19 ಜನಜಾಗೃತಿ ಅಂದೋಲನವನ್ನು ನಡೆಸಬೇಕು ಎಂದರು. ಸರ್ಕಾರದ ಎಲ್ಲಾ ಇಲಾಖೆಯ ಕಾರ್ಯಕ್ರಮ ಗಳು ನಡೆಯುವಾಗ ಕೋವಿಡ್ ಜಾಗೃತಿ ಮೂಡಿಸುವ ಕೆಲಸವಾಗಬೇಕು, ಅಲ್ಲದೇ ದೈನಂದಿನ ಕೆಲಸ-ಕಾರ್ಯಗಳ ಪತ್ರದಲ್ಲಿಯೂ ಕೊರೋನಾ ಜಾಗೃತಿ ಮೂಡಿಸುವ ಬಗ್ಗೆ ನಮೂದಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಅಂಗಡಿ-ಮುಂಗಟ್ಟು, ಹೋಟೆಲ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಲೀಕರು ಮತ್ತು ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದೇ ಇರುವುದು ಕಂಡು ಬರುತ್ತಿದು, ಅವರುಗಳಿಗೆ ತಿಳಿ ಹೇಳಬೇಕು, ಅದನ್ನು ಪಾಲಿಸದೇ ಇದ್ದಲ್ಲಿ ತಾತ್ಕಾಲಿಕವಾಗಿ ಅಂಗಡಿ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಅಧಿಕಾ ರಿಗಳಿಗೆ ಸೂಚನೆ ನೀಡಿದರು.
ಬಸ್ಸುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಪ್ಪದೇ ಮಾಸ್ಕ್‍ಗಳನ್ನು ಧರಿಸುವಂತೆ ಬಸ್ಸಿನನಿರ್ವಾಹಕರು ಎಚ್ಚರ ವಹಿಸಬೇಕೆಂದ ಅವರು ಸಾರ್ವಜನಿಕರು ಓಡಾಡುವ ಬಸ್ಸುಗಳನ್ನು ಪ್ರತೀ ದಿನ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದರು. ಜಿಲ್ಲೆಯ ಪ್ರತಿಯೊಂದು ದೇವಸ್ಥಾನದಲ್ಲಿ ಹಾಗೂ ಪ್ರೇಕ್ಷಣಿಯ ಸ್ಥಳಗಳಲ್ಲಿ ಬರುವ ಪ್ರವಾಸಿಗರು ಮುಖಗವಸು ಹಾಕದಿದ್ದಲ್ಲಿ ಅವರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್-19 ತಡೆಗೆ ಸರ್ಕಾರವು ನೀಡಿರುವ ಮಾರ್ಗ ಸೂಚಿಗಳನ್ನು ನಿರ್ಲಕ್ಷಿಸಿ ಜನಸಾಮಾನ್ಯರು ಓಡಾಡುತ್ತಿದ್ದರೆ ಅಂಥವರ ವಿರುದ್ಧ ದಂಡ ಶುಲ್ಕವನ್ನು ವಿಧಿಸಬೇಕೆಂದು ಸೂಚನೆ ನೀಡಿದರು.

ಶಾಲೆಗಳ ಆನ್‍ಲೈನ್ ತರಗತಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೊರೋನಾ ಸೋಂಕು ತಡೆಯ ಮಾರ್ಗ ಸೂಚಿಯನ್ನು ಬೋಧಿಸಬೇಕು, ಅಲ್ಲದೇ ಪೋಷಕರು ಸೇರಿದಂತೆ ನೆರೆಹೊರೆಯವರಿಗೆ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ತಿಳಿಸಿದರು. ಮಲ್ಪೆ ಹಾಗೂ ಗಂಗೊಳ್ಳಿಯ ಬಂದರಿನ ಮೀನು ಮಾರುಕಟ್ಟೆ, ಎ.ಪಿ.ಎಂ .ಸಿ ಮಾರುಕಟ್ಟೆಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸುವ ಕೆಲಸವಾಗಬೇಕಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನ  ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply