ಮೈಸೂರು: ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆಯನ್ನು ಅಕ್ಟೋಬರ್ 25ರಿಂದ ಆರಂಭಿಸಲು ಏರ್ ಇಂಡಿಯಾ ನಿರ್ಧಾರ ಮಾಡಿದೆ. ಸದ್ಯ ಟ್ರಯಲ್ ರನ್ ನಂತರ ಕಾರ್ಯಸಾಧ್ಯತಾ ವರದಿ ಮುಂದಿಟ್ಟು ಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮತ್ತು ಕೆಲವು ಕೈಗಾರಿಕೋದ್ಯಮಿಗಳು ರಾಜ್ಯದ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಆರಂಭಿಸುವಂತೆ ವೈಮಾನಿಕ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಇದೀಗ ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳೂರಿಗೆ ಬೆಳಿಗ್ಗೆ 6.50 ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆಗೆ ತಿರುಗಿಸುವ ಮಾಹಿತಿ ದೊರೆತಿದೆ. ಈ ವಿಮಾನ ಬೆಳಿಗ್ಗೆ 7.55 ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50 ಕ್ಕೆ ಮಂಗಳೂರು ಸೇರಲಿದೆ.