ಸಿಎಂ ಯಡಿಯೂರಪ್ಪ ದೆಹಲಿಯಲ್ಲಿ ಪ್ರಮುಖರ ಭೇಟಿ/ಮನವಿ 

ನವದೆಹಲಿ: ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಕಾರ ಕೋರುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಗಳನ್ನು ಸಲ್ಲಿಸಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಶುಕ್ರವಾರ ಪ್ರಧಾನಿ ಅವರನ್ನು ಭೇಟಿ ಮಾಡಿ 15 ನಿಮಿಷ ಮಾತುಕತೆ ನಡೆಸಿದ ಸಿಎಂ, ರಾಜ್ಯದಲ್ಲಿ ವ್ಯಾಪಕ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿ ಅಡಿಯಲ್ಲಿ ಹೆಚ್ಚಿನ ಅನುದಾನಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ವಿನಂತಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಮತ್ತು ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೊಷಿಸುವ ಜತೆಗೆ ಮಹತ್ವದ ಮೇಕೆದಾಟು ಮತ್ತು ಕಳಸಾ ಬಂಡೂರಿ ನೀರಾವರಿ ಯೋಜನೆ ಜಾರಿಗೆ ಎದುರಾಗಿರುವ ಅಡೆತಡೆಗಳನ್ನು ಸರಿಪಡಿಸಬೇಕು ಎಂದು ಕೋರಿದರು. ನವೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಸಮಾವೇಶವನ್ನು ತಾವು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಬೇಕು ಎಂದು ಮೋದಿ ಅವರಿಗೆ ಆಹ್ವಾನ ನೀಡಲಾಯಿತು. ಇದಕ್ಕೆ ಮೋದಿ ಒಪ್ಪಿಗೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ. ರಾಜ್ಯದಲ್ಲಿನ ಕರೊನಾ ಪರಿಸ್ಥಿತಿ, ಹಣಕಾಸು ಸ್ಥಿತಿಗತಿ ಸೇರಿ ಹಲವು ವಿಷಯಗಳ ಬಗ್ಗೆಯೂ ಯಡಿಯೂರಪ್ಪ ಪ್ರಧಾನಿ ಜತೆ ಮಾತುಕತೆ ನಡೆಸಿದ್ದಾರೆ.

ಕರೊನಾ ಕಾರಣಗಳಿಗಾಗಿ ಸಿಎಂ ಯಡಿಯೂರಪ್ಪ ಮತ್ತು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮಾತ್ರ ಪ್ರಧಾನಿ ಭೇಟಿಗೆ ಅವಕಾಶ ನೀಡಲಾಗಿತ್ತು. ನೀರಾವರಿ ಯೋಜನೆಗೆ ಸಂಬಂಧಿಸಿದ ಮನವಿಯನ್ನು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೂ ಸಲ್ಲಿಸಲಾಯಿತು. ಪರಿಸರ ಸಚಿವ ಪ್ರಕಾಶ್ ಜಾವಡೇಕರ್ರನ್ನು ಭೇಟಿ ಮಾಡಿ, ಮೇಕೆದಾಟು ಮತ್ತು ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದ ಅಗತ್ಯ ಪರಿಸರ ಸಮ್ಮತಿ ನೀಡುವ ಕುರಿತು ವಿವರಣೆ ನೀಡಿದರು.

ಕರೊನಾ ಸಂದರ್ಭದಲ್ಲಿ ಕರ್ತವ್ಯ ಪ್ರಜ್ಞೆಗೆ ಕಿಂಚಿತ್ತೂ ಚ್ಯುತಿಬಾರದಂತೆ ಕಾರ್ಯನಿರ್ವಹಿಸುತ್ತಿರುವ ಯಡಿಯೂರಪ್ಪ ಬಗ್ಗೆ ಮೋದಿ ಪ್ರೀತಿಯಿಂದ ಮಾತನಾಡಿದ್ದಾರೆ. ಶುಕ್ರವಾರ ಭೇಟಿ ಸಂದರ್ಭದಲ್ಲಿ, ‘ನೀವು ಯಾಕಿಷ್ಟು ಓಡಾಡುತ್ತೀರಿ? ಕರೊನಾ ಬಗ್ಗೆ ಎಚ್ಚರಿಕೆ ಇರಲಿ. ಆರೋಗ್ಯ ಮುಖ್ಯ ಯಡಿಯೂರಪ್ಪನವರೇ. ಬಹಳ ಎಚ್ಚರಿಕೆಯಿಂದ ಇರಿ. ರಾಜ್ಯ ಸರ್ಕಾರದ ಕೆಲಸಕ್ಕೆ ನಮ್ಮ ಸಹಕಾರ ಇದೆ’ ಎಂದು ಅಕ್ಕರೆಯಿಂದ ಮಾತನಾಡಿಸಿದರು 

ನವದೆಹಲಿ: ನಗರ ಪಾಲಿಕೆಗಳಿಗೆ ಕೇಂದ್ರದಿಂದ ಬಾಕಿ ಇರುವ 29520 ಲಕ್ಷ ರೂ. ಪರ್ಫಾರ್ವೆನ್ಸ್ ಗ್ರಾಂಟ್ ಅನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪೂರಿ ಅವರಿಗೆ ಬಿಎಸ್ವೈ ಮನವಿ ಸಲ್ಲಿಸಿದ್ದಾರೆ. ಬಳ್ಳಾರಿ, ಕಲಬುರಗಿ, ಮೈಸೂರು, ವಿಜಯಪುರ ನಗರ ಪಾಲಿಕೆಗಳನ್ನು ಸ್ಮಾರ್ಟ್ಸಿಟಿ ವ್ಯಾಪ್ತಿಗೆ ತರಬೇಕು ಎಂದೂ ಒತ್ತಾಯಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜತೆ ಶುಕ್ರವಾರ ರಾತ್ರಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಶಿರಾ ಉಪ ಚುನಾವಣೆ ಬಗ್ಗೆ ಮಾತನಾಡಿದ್ದೇವೆ. ಈ ಬಾರಿ ಅಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply