ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ; ಕಾರ್ಯಕರ್ತ ಸಾವು!

ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ.

ಕೆಆರ್ ಪುರದ ಗಣೇಶ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಮೃತನನ್ನು ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಇವರು ಕೆಆರ್ ಪುರ ನಿವಾಸಿ. 

ನಿಂತಿದ್ದ ಶೋಭಾ ಕರಂದ್ಲಾಜೆ ಅವರ ಕಾರಿನ ಡೋರ್ ಒಪನ್ ಮಾಡುತ್ತಿದ್ದಾಗ ಬೈಕ್ ಏಕಾಏಕಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕೆಆರ್ ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.

ಘಟನೆ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇವತ್ತು ನಮ್ಮ ಪಕ್ಷದ ರ‍್ಯಾಲಿ ಇತ್ತು. ಎಲ್ಲರೂ ರ‍್ಯಾಲಿ ಮುಗಿಸಿಕೊಂಡು ಬರುವಾಗ ಕೆಆರ್ ಪುರಂ ಸರ್ಕಲ್ ಬಳಿ ಕಾರು ನಿಲ್ಲಿಸಿದ್ವಿ. ನಮ್ಮ ಕಾರ್ಯಕರ್ತ ಹಿಂಬದಿಯಿಂದ ಬಂದು ಗುದ್ದಿಕೊಂಡಿದ್ದಾನೆ. ಕಾರ್ ನಮ್ಮದೇ, ಡೋರ್ ತೆಗೆದಾಗ ಬಿದ್ದಿದ್ದಾರೆ. ನಂತರ ಅವರ ಮೇಲೆ ಬಸ್ ಹರಿದಿದೆ. ಪೋಸ್ಟ್ ಮಾರ್ಟಮ್ ವರದಿ ಬಂದ ನಂತರ ಎಲ್ಲವೂ ತಿಳಿಯುತ್ತೆ ಎಂದು ಶೋಭಾ ಹೇಳಿದರು.

ಪ್ರಕಾಶ್ ಸಾವು ಸಂಭವಿಸಿರೋದು ನಿಜಕ್ಕೂ ದುರ್ದೈವ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ನಾವು ಅವರ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತೀವಿ. ಅವರ ಕುಟುಂಬದ ಜೊತೆಗೆ ನಾವೀದ್ದೇವೆ. ಅಲ್ಲದೇ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ನಮ್ಮ ಪಕ್ಷ ನಿರ್ಧರಿಸುತ್ತೆ ಎಂದು ಹೇಳಿದರು. 

 
 
 
 
 
 
 
 
 
 
 

Leave a Reply