ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ದ್ವಾರಕೆಯ ಕೃಷ್ಣಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಠೆಗೈದು ದ್ವಾಪರದ ಕೃಷ್ಣನನ್ನು ಕಲಿ ಯುಗದ ಭಕ್ತರಿಗೆ ಸಿಗುವಂತೆ ಅನುಗ್ರಹಿಸಿದ್ದಾರೆ. ಈ ಮೂಲಕ ಸಾಕ್ಷಾತ್ ಕೃಷ್ಣನೇ ತನ್ನ ಮಡದಿ ರುಕ್ಮಿಣಿಗೆ ದೇವಶಿಲ್ಪಿ ವಿಶ್ವಕರ್ಮ ನಿಂದ ನಿರ್ಮಾಣಗೈಸಿದ ತನ್ನದೇ ಪ್ರತಿಮೆಯ ಮೂಲಕ ತನ್ನ ಉಪಾಸನೆಗೈಯುವ ಮಹಾಭಾಗ್ಯವನ್ನು ನಮಗೆಲ್ಲಾ ಕರುಣಿ ಸಿದ್ದಾನೆ. ಕಾಲಕಾಲಕ್ಕೆ ಆಚಾರ್ಯರ ಎಂಟು ಜನ ಸಂನ್ಯಾಸಿ ಶಿಷ್ಯರ ಭವ್ಯಪರಂಪರೆ ಪರ್ಯಾಯಕ್ರಮದಲ್ಲಿ ಈ ಕೃಷ್ಣದೇವರ ಆರಾಧನೆಯನ್ನು ನಡೆಸಿ, ಮಧ್ವಾಚಾರ್ಯರ ಭಕ್ತಿ ಸಿದ್ಧಾಂತವನ್ನು ಪಸರಿಸಿ, ಭಕ್ತರೆಲ್ಲರನ್ನು ಹರಸುತ್ತಾ ಬಂದಿದ್ದಾರೆ. ಇತಿಹಾಸವನ್ನು ಪರಿಕಿಸಿದಾಗ ಅನೇಕ ಸಾಧಕರಾಜ-ಮಹಾರಾಜರು ಅಷ್ಟಮಠದ ಯತಿಶ್ರೇಷ್ಠರಿಂದ ಪ್ರಭಾವಿತರಾಗಿ ಅವರ ಸೇವೆಗೈದು, ಅವರ ಮೂಲಕ ಉಡುಪಿಯ ಕೃಷ್ಣನನ್ನು ಭಜಿಸಿ ಕೃತಾರ್ಥರಾಗಿದ್ದಾರೆ. ವಿಜಯನಗರದ ಭವ್ಯಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಮೈಸೂರು ಅರಸರನೇಕರು, ಅಷ್ಟಮಠಾಧೀಶರನೇಕರ ಸಂಪರ್ಕಕ್ಕೆ ಬಂದುದನ್ನು ಐತಿಹಾಸಿಕವಾಗಿ ಗುರುತಿಸಬಹುದು.

ಅದಮಾರು ಮಠಾಧೀಶರ ಅವಧಿಯಲ್ಲಿ : ಶ್ರೀ ಅದಮಾರುಮಠದ ಪರಂಪರೆಯ 31ನೇ ಯತಿಗಳಾದ ಶ್ರೀ ಶ್ರೀ ವಿಬುಧೇಶ ತೀರ್ಥರು (ಪೀಠಕಾಲ 1945-2009) ಮಹಾಪಂಡಿತರೂ, ಸಮಾಜಮುಖಿ, ದೂರದರ್ಶಿತ್ವದ ಚಿಂತನೆಯುಳ್ಳವರೂ, ಅನೇಕ ವಿದ್ಯಾಸಂಸ್ಥೆಗಳ ಸ್ಥಾಪಕರೂ ಆಗಿರುವರು. ನಾಡಿನೆಲ್ಲೆಡೆ ಶಿಕ್ಷಣಸಂಸ್ಥೆಗಳ ಮೂಲಕ ಶ್ರೀಪಾದರು ನಡೆಸಿದ ವಿದ್ಯಾಕ್ರಾಂತಿ ಯಿಂದ ಪ್ರಭಾವಿತಗೊಂಡ ಮೈಸೂರಿನ ಕೊನೆಯ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಶ್ರೀಪಾದರ ವಿಶೇಷ ಸಂಪರ್ಕವನ್ನು ಹೊಂದಿದ್ದರು. ಉಡುಪಿಗೆ ಆಗಮಿಸುವ ಕೃಷ್ಣಭಕ್ತರ ಅನುಕೂಲಕ್ಕಾಗಿ1964ರಲ್ಲಿ ಶ್ರೀಪಾದರು ಅದಮಾರು ಮಠದ ಅತಿಥಿ ಗೃಹ ವೊಂದನ್ನು ನಿರ್ಮಿಸಿದರು. ಅತಿಥಿಗೃಹದ ಉದ್ಘಾಟನೆಯನ್ನು ಅಂದು ರಾಜಪ್ರತಿನಿಧಿಗಳಾಗಿದ್ದ ಒಡೆಯರೇ ಉದ್ಘಾಟಿ ಸಿದರು. ಉಡುಪಿಯ ಕೃಷ್ಣನಿಗೆ ವಿಶೇಷ ಸೇವೆಯನ್ನು ಸಲ್ಲಿಸಿದ್ದರು. ಶ್ರೀಮಠದ ಪರಂಪರೆಯ 32ನೇ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥರ ಕಾಲದಲ್ಲಿ ಇದೇ ಅದಮಾರುಮಠದ ಅತಿಥಿಗೃಹನಿರ್ಮಾಣದ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಮೈಸೂರಿನ ರಾಜವಂಶದ ಕುಡಿ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಹಿರಿಯರ ಸ್ಮರಣೆಯೊಂದಿಗೆ ಉಡುಪಿಗಾಗಮಿಸಿ ಸಮಾರಂಭದಲ್ಲಿ ಭಾಗವಹಿಸಿ ಶ್ರೀಪಾದರಿಂದ, ಶ್ರೀಕೃಷ್ಣನಿಂದ ಅನುಗ್ರಹವನ್ನು ಪಡೆದು ಪರಂಪರೆಯನ್ನು ಮುಂದುವರಿಸಿರುವರು. ಶ್ರೀಮಠದ ಪರಂಪರೆಯ 33ನೇ ಯತಿಗಳಾದ ಕಿರಿಯ ಪಟ್ಟದಲ್ಲಿರುವ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಕ್ಕಿಮುಹೂರ್ತದ ಸಂದರ್ಭದಲ್ಲೂ ಶ್ರೀ ಯದುವೀರರು ಭಾಗವಹಿಸಿದ್ದರು. ಮತ್ತೀಗ ಪರ್ಯಾಯದ ಸಂದರ್ಭದಲ್ಲೂ ಶ್ರೀಯುತರು ಆಹ್ವಾನಿತರು.

ಪುತ್ತಿಗೆ ಮಠಾಧೀಶರ ಅವಧಿಯಲ್ಲಿ : ಶ್ರೀಪುತ್ತಿಗೆ ಮಠದ ಪರಂಪರೆಯ 24ನೇ ಯತಿಗಳಾದ ಶ್ರೀ ವನೇಂದ್ರತೀರ್ಥರು (ಪೀಠಕಾಲ 1789-1827 ಮಹಾ ತಪಸ್ವಿಗಳು, ಶತಾಯುಷಿಗಳು. ಅವರ ಶಿಷ್ಯ ಶ್ರೀ ರಾಜೇಂದ್ರತೀರ್ಥರು ಮಹಾಪಂಡಿತರು, ನಾಡಿನೆಲ್ಲೆಡೆ ಸಂಚಾರಗೈದು ಮಧ್ವಾಚಾರ್ಯರ ಸಿದ್ಧಾಂತವನ್ನು ಸ್ಥಾಪನೆಗೈದವರು. ಮೈಸೂರಿನ ಅರಸರಿಂದಲೂ ವಿದ್ವತ್ ಸಭೆಗೆ ಆಹ್ವಾನಿ ತರಾಗಿ, ವಾದಕಥೆಯನ್ನು ನಡೆಸಿ ವಿಜಯಶಾಲಿಗಳಾದರು. ಆಚಾರ್ಯಮಧ್ವರ ತತ್ವವಾದದ ಹಿರಿಮೆಯನ್ನು ಅರಮನೆ ಯಲ್ಲಿ ಸಾರಿದರು. ಅಂದಿನ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್(ಆಡಳಿತ ಕಾಲ 1794-1868) ಶ್ರೀ ರಾಜೇಂದ್ರ ತೀರ್ಥರ ವಿದ್ವತ್ತನ್ನು ಗೌರವಿಸಿ ಕನಕಾಭಿಷೇಕ ನಡೆಸಲು ಉದ್ಯುಕ್ತರಾದರು. ಶಿಷ್ಯರಾದ ಶ್ರೀ ರಾಜೇಂದ್ರತೀರ್ಥರು ಗುರುಗಳಿಲ್ಲದೆ ಅಭಿಷೇಕ ಸ್ವೀಕರಿಸಲು ಒಪ್ಪದೆ ಮತ್ತೊಮ್ಮೆ ಅರಸನ ಪ್ರಾರ್ಥನೆಯಂತೆ ಗುರುಗಳೊಡನೆ ಅರಮನೆಗೆ ಚಿತ್ತೈಸಿ ತನ್ನೆಲ್ಲ ಸಾಧನೆಗಳಿಗೆ ಮೂಲಕಾರಣರಾದ ಗುರುಗಳಿಗೇ ಕನಕಾಭಿಷೇಕ ನಡೆಸುವಂತೆ ಪ್ರೇರೇಪಿಸಿದರು. ಒಡೆಯರ್ ಬಹು ಧನ-ಕನಕ ಗಳನ್ನು ಶ್ರೀಮಠಕ್ಕೆ ಅರ್ಪಿಸಿದರು. ಅಂದಿನಿಂದ ಪುತ್ತಿಗೆ ಮಠ ಪುತ್ಥಳಿ ಮಠ ಎಂದು ಪ್ರಸಿದ್ಧಿಗೊಂಡಿತು. ಉಡುಪಿಯ ಶ್ರೀ ಅನಂತೇಶ್ವರ ದೇವಳದ ಮುಖ್ಯಸ್ಥರಾಗಿದ್ದ ಶ್ರೀ ಭುವನೇಂದ್ರತೀರ್ಥರಿಗೆ ಸನ್ನಿಧಿಯಲ್ಲಿ ಮೃಷ್ಟಾನ್ನ ಭೋಜನ ಸೇವೆಯನ್ನು ನಡೆಸಲು ಉಂಬಳಿಯನ್ನು ಮೈಸೂರು ಅರಸರು ನೀಡಿದ್ದರು. ಶ್ರೀಪುತ್ತಿಗೆ ಮಠದ ಪರಂಪರೆಯ ೨೮ನೇ ಯತಿಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥರ (ಪೀಠಕಾಲ 1954-74)ರ ಕಾಲದಲ್ಲೂ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಉಡುಪಿಯ ಶ್ರೀಮಠಕ್ಕೆ ಆಗಮಿಸಿ ಶ್ರೀಪಾದರ ಅನುಗ್ರಹವನ್ನು ಪಡೆದಿದ್ದರು. ಶ್ರೀಪುತ್ತಿಗೆಮಠದ ಪರಂಪರೆಯ 29ನೇ ಯತಿಗಳಾದ ಶ್ರೀಸುಗುಣೇಂದ್ರ ತೀರ್ಥರ ಬಳಿಯೂ ಅನೇಕ ಸಲ ಆಗಮಿಸಿದ ರಾಜವಂಶಸ್ಥ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಶ್ರೀಪಾದರ ಅನುಗ್ರಹವನ್ನು ಪಡೆದಿದ್ದಾರೆ.

ಕಾಣಿಯೂರು ಮಠಾಧೀಶರ ಕಾಲದಲ್ಲಿ : ಶ್ರೀ ಕಾಣಿಯೂರು ಮಠದ 25ನೆಯ ಯತಿಗಳಾದ ಶ್ರೀ ವಿದ್ಯಾಪತಿ ತರ‍್ಥರು ಮಹಾ ಪಂಡಿತರು. ಅವರ ಪರ್ಯಾಯ ಕಾಲದಲ್ಲಿ ಮೈಸೂರಿನ ಕೃಷ್ಣರಾಜ ಒಡೆಯರ್ ಉಡುಪಿಗೆ ಕೃಷ್ಣದರ್ಶನಕ್ಕಾಗಿ ಆಗಮಿಸಿದ್ದರು. ಕಾಲಮಾನದ ತಾಳೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರೇ ಉಡುಪಿಗೆ ಆಗಮಿಸಿದ್ದಿರಬೇಕು.

ಪೇಜಾವರ ಮಠಾಧೀಶರ ಅವಧಿಯಲ್ಲಿ : ಪೇಜಾವರ ಮಠದ 33ನೇ ಯತಿಗಳಾದ ಶ್ರೀ ವಿಶ್ವೇಶತೀರ್ಥ (ಪೀಠಕಾಲ 1938-2019)ರ ಎಳೆಯ ಪ್ರಾಯದಲ್ಲಿಯೇ ಮೈಸೂರುಸೀಮೆಯಲ್ಲಿ ನಡೆದ ವೈದಿಕ ಮಹಾಸಮ್ಮೇಳನದಲ್ಲಿ ಶ್ರೀಪಾದರು ನೀಡಿದ್ದ ಪ್ರಬುದ್ಧ ಪಾಂಡಿತ್ಯಪುರ್ಣ ಅಧ್ಯಕ್ಷೀಯ ನುಡಿಗಳನ್ನು ಆಲಿಸಿ ಬಹುಪ್ರಭಾವಿತರಾಗಿದ್ದ ಮೈಸೂರಿನ ಕೊನೆಯ ಮಹಾರಾಜ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಶ್ರೀಪಾದರನ್ನು ಬಹುವಾಗಿ ಸ್ತುತಿಸಿದ್ದರು. ಮುಂದೆ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯ ಕಾಲದಲ್ಲಿ ನಡೆಸಿದ ಮಾಧ್ವ ತತ್ವಜ್ಞಾನ ಸಮ್ಮೇಳನದಲ್ಲಿ ಮುಖ್ಯ ವ್ಯಕ್ತಿಗಳಾಗಿ ಒಡೆಯರ್ ಉಪಸ್ಥಿತಿ ಉಡುಪಿಯಲ್ಲಿ ಅತ್ಯಂತ ವೈಭವವನ್ನು ತಂದಿತ್ತು. ಈಗಿನ ರಾಜವಂಶಸ್ಥ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೇಜಾವರ ಶ್ರೀಪಾದರ ಮೇಲೆ ಅತ್ಯಂತ ಗೌರವವನ್ನು ಹೊಂದಿರುವವರಾಗಿದ್ದಾರೆ. ಹೀಗೆ ವಿಜಯನಗರ, ಕೊಚ್ಚಿ, ತಿರುವಾಂಕೂರು, ಮಾಯಿಪ್ಪಾಡಿ ಅರಸರು, ಬಾರ್ಕೂರಿನ ಸಾಮಂತರು ಇನ್ನಿತರರು ಅನೇಕ ಶ್ರೀಕೃಷ್ಣನ ಪಾದಪದ್ಮಾರಾಧಕರಾದ ಅಷ್ಟಮಠಾಧೀಶರ ಸಂಪರ್ಕವನ್ನು ಅನುಗ್ರಹವನ್ನು ಹೊಂದಿರುವುದು ಐತಿಹಾಸಿಕವಾಗಿ ತಿಳಿದುಬರುವುದು.
ಈ ಮೂಲಕ ಉಡುಪಿಯ ಅಷ್ಟಮಠಾಧೀಶರ ಪ್ರಭಾವಪೂರ್ಣ ವ್ಯಕ್ತಿತ್ವವೂ, ಇತಿಹಾಸದ ರಾಜರ ಧಾರ್ಮಿಕ ಶ್ರದ್ಧೆಯೂ ಇಂದಿನವರಿಗೆ ಆದರ್ಶ ಪ್ರಾಯವಾಗಿದೆ.
