ಅಪೂರ್ವ ಮಹಿಮೆಯ ಪುಟ್ಟ ಕಥೆ~ಪಿ.ಲಾತವ್ಯ ಆಚಾರ್ಯ

1968-69ನೇ ಇಸವಿಯ ಸಂದರ್ಭದಲ್ಲಿ ನಡೆದ ಒಂದು ಘಟನೆ. ಆದಿನಗಳಲ್ಲಿ ಶ್ರೀವಾದಿರಾಜರ ತಪೋಭೂಮಿ ಶ್ರೀಸೋದಾ ಕ್ಷೇತ್ರಕ್ಕೆ ಹೋಗುವುದೆಂದರೆ ಕರಾವಳಿ ಪ್ರಾಂತ್ಯದ ಸಾಮಾನ್ಯಜನರಿಗೆ ದೊಡ್ಡ ಸವಾಲಾಗಿತ್ತು.ಏಕೆಂದರೆ ಹೊನ್ನಾವರದ ಶರಾವತಿ ನದಿಯ ಸೇತುವೆ ಕಾಮಗಾರಿ ಪೂರ್ಣ ಮುಗಿದಿರಲಿಲ್ಲ.

ಹೀಗಾಗಿ ಉಡುಪಿಯಿಂದ ಸೋಮೇಶ್ವರ ತನಕ ಬಸ್ಸಿನಲ್ಲಿ ಸಾಗಿ ಅಲ್ಲಿಂದ ಆಗುಂಬೆಗೆ ಬಾಡಿಗೆ ಕಾರಿನಲ್ಲಿ ತೆರಳಬೇಕು. ಮತ್ತೆ ಪುನಃ ಬಸ್ಸಲ್ಲಿ ಶಿವಮೊಗ್ಗ,ಸಾಗರ, ಮಾರ್ಗವಾಗಿ ಶಿರಸಿ
ತಲುಪಬೇಕಿತ್ತು. ಶಿರಸಿಗೆ ಕನಿಷ್ಟವೆಂದರೂ ಹನ್ನೆರಡು ಗಂಟೆಗಳ ಪ್ರಯಾಣ.

ಮತ್ತೆ ಪುನಃ ಶಿರಸಿಯಿಂದ ಸೋದೆಗೆ 25 ಕಿಲೋಮೀಟರ್. ಕಿರಿದಾದ ರಸ್ತೆ.ಮಾರ್ಗದ ಅಕ್ಕಪಕ್ಕ ಗೊಂಡಾರಣ್ಯ. ಬೆಳಿಗ್ಗೆ 7.00 ಘಂಟೆಗೆ ಒಂದು ಬಸ್ಸು ಹೊರತು ಬೇರಾವ ಸೌಕರ್ಯವೂ ಇರಲಿಲ್ಲ.ಶಾಲ್ಮಲೀನದಿಗೆ ಸೇತುವೆಯೂ ಆಗಿರಲಿಲ್ಲ.

ಆದ್ದರಿಂದ ಶಿರಸಿಯಿಂದ ಹಾನಗಲ್ಲಿಗೆ ಸಾಗುವ ಸುತ್ತುರಸ್ತೆ ಬಳಸಿ ಸಹಸ್ರಲಿಂಗ ಸಮೀಪದ ಯಲ್ಲಾಪುರ ಕತ್ರಿ ರಸ್ತೆಯಲ್ಲಿ ಇಳಿದು 7 ಕಿಲೋಮೀಟರ್ ನಡೆದು ಸೋದಾ ಕ್ಷೇತ್ರ ತಲುಪಬೇಕಿತ್ತು.
ಬೆಳಗ್ಗಿನ ಬಸ್ಸು ಲಭಿಸದಿದ್ದಲ್ಲಿ ಮರುದಿನ ಬೆಳಗ್ಗಿನವರೆಗೆ ಶಿರಸಿಯಲ್ಲೇ ಕಾಲಕಳೆದು ಮರುದಿನ ಮುಂಜಾನೆಯ ಬಸ್ಸಿನಲ್ಲಿ ಸೋದಾ ಕ್ಷೇತ್ರಕ್ಕೆ ಬರುವುದು ವಾಡಿಕೆಯಾಗಿತ್ತು.

ಈ ಮಾರ್ಗದಲ್ಲಿ ರಾತ್ರಿಯ ಸಂದರ್ಭದಲ್ಲಿ ಕೆಲವೊಂದು ದೊಡ್ಡ ವಾಹನಗಳ ಹೊರತು ಸಣ್ಣಪುಟ್ಟ ಖಾಸಗಿ ವಾಹನಗಳು ಸಂಚರಿಸುವುದು ವಿರಳ. ಈ ಮಾರ್ಗದ ಪಕ್ಕದ ದಟ್ಟಡವಿಯಲ್ಲಿ ಹುಲಿ, ಚಿರತೆಯಂತಹ ಅಪಾಯಕಾರಿ ಕಾಡು ಪ್ರಾಣಿಗಳೂ ಇದ್ದವು. ಜೊತೆಗೆ ವಿಪರೀತ ದರೋಡೆ ಕೋರರ ಹಾವಳಿಯೂ ಇತ್ತು. ಹಲವಾರು ಭಾರಿ ರಾತ್ರಿಯ ಹೊತ್ತಲ್ಲಿ ಸಂಚರಿಸುತ್ತಿದ್ದ ಕೆಲವು ದ್ವಿಚಕ್ರ ವಾಹನಗಳ ಸವಾರರ ಮೇಲೆ ಈ ಗುಂಪು ಧಾಳಿ ಮಾಡಿ ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿದ್ದವು.

ಪೊಲೀಸರು ಈ ಗುಂಪನ್ನು ಪತ್ತೆ ಹಚ್ಚಲು ನಡೆಸಿದ್ದ ಪ್ರಯತ್ನಗಳೆಲ್ಲಾ ವಿಫಲವಾಗಿತ್ತು.ರಾತ್ರಿ ಅಗಾಗೆ ಈ ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಇವರ ಹಾವಳಿ ನಿಂತಿರಲಿಲ್ಲ.

ನನ್ನ ತಂದೆ ವಿಠಲಾಚಾರ್ಯರ ಆತ್ಮೀಯರಾಗಿದ್ದ 70 ರ ಹರೆಯದ ರಂಗಾಚಾರ್ಯರು ಮೊದಲಬಾರಿ ಉಡುಪಿಯಿಂದ ಸೋದಾ ಕ್ಷೇತ್ರಕ್ಕೆ ಒಬ್ಬಂಟಿಗನಾಗಿ ಹೊರಟಿದ್ದರು.ಇವರು
ಶ್ರೀವಾದಿರಾಜರ ಉಪಾಸಕರು.ನಿತ್ಯ ವಾದಿರಾಜರ,ರಾಯರ ಭೂತರಾಜರ ಪುನಶ್ಚರಣೆ ನಡೆಸದೆ ನೀರನ್ನೂ ಮುಟ್ಟುತ್ತಿರಲ್ಲಿಲ್ಲ.

ರಂಗಾಚಾರ್ ಉಡುಪಿಯಿಂದ ಬೆಳಿಗ್ಗೆ ಹೊರಟು ಶಿರಸಿ ತಲುಪುವಾಗ ರಾತ್ರಿ ಹತ್ತು ಘಂಟೆಯಾಗಿತ್ತು. ಬಸ್ಸಿಗಾಗಿ ಮಾರನೇದಿನ ಬೆಳಿಗ್ಗೆ ಏಳು ಘಂಟೆಯವರೆಗೆ ಕಾಯುವ ತಾಳ್ಮೆ ಅವರಿಗಿರಲಿಲ್ಲ.ಸ್ವಲ್ಪ ಹೊತ್ತು ಶಿರಸಿ ಬಸ್ಸು ನಿಲ್ದಾಣದಲ್ಲಿ ವಿಶ್ರಾಂತಿ ತೆಗೆದುಕೊಂಡು ಸೋದಾ ಕ್ಷೇತ್ರಕ್ಕೆ ಸಾಗುವ ದಾರಿಯನ್ನು ಕೇಳಿ ಹೊರಟೇಬಿಟ್ಟರು.

ಅನೇಕರು ಈ ರಾತ್ರಿಯಲ್ಲಿ ಹೋಗಬೇಡಿ ತೀರಾ ಅಪಾಯಕಾರಿ ರಸ್ತೆ ಎಂದು ಹೇಳಿದರೂ ಕೇಳದೆ ಶಿರಸಿ ಪಟ್ಟಣ ದಾಟಿ ಅಡವಿಯ ರಸ್ತೆಗೆ ಕಾಲಿಟ್ಟರು. ಘಂಟೆ ಆಗಲೇ ಹನ್ನೊಂದೂವರೆ ಆಗಿತ್ತು. ಕಗ್ಗತ್ತಲಿನಲ್ಲಿ ಜೀರುಂಡೆಯ ಗುಯ್ ಗುಯ್ ಸದ್ದು, ಕಾಡುಪ್ರಾಣಿಗಳು ವಿಚಿತ್ರವಾಗಿ ಘೀಳಿಡುವ ಕೂಗುಗಳು ಅಡವಿಯ ನಡುವಿಂದ ಜೋರಾಗಿ ಕೇಳಿಸುತ್ತಿತ್ತು.  ನಡುರಾತ್ರಿಯ ಆಸದ್ದುಗಳು ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು. ಆಚಾರ್ಯರಿಗೆ ಭಯವಾಗಿದ್ದರೂ ಇದಾವುದನ್ನೂ ಲೆಕ್ಕಿಸದೆ
ಕೃಷ್ಣಮುಖ್ಯಪ್ರಾಣರ ವಾದಿರಾಜರ ಸ್ಮರಣೆ ನಡೆಸುತ್ತಾ ಎದ್ದು ಬಿದ್ದು ಏಳುತ್ತಾ ಸುಮಾರು15 ಕಿಲೋಮೀಟರ್ ದೂರ ಕ್ರಮಿಸಿದ್ದರು.

ಅದೇ ಹೊತ್ತಿಗೆ ಕೈಯಲ್ಲಿದ್ದ ಹಳೆಯ ಎವರೆಡಿ ಟಾರ್ಚಿನ ಬೆಳಕು ಮೆಲ್ಲನೆ ಮಂದವಾಗುತ್ತಾ ಬಂತು.ಸ್ವಲ್ಪಹೊತ್ತಲ್ಲಿ ಟಾರ್ಚಿನ ಕತೆಯೂ ಮುಗಿಯಿತು. ಸುಮಾರು ಮೂರು ಗಂಟೆ ನಿರಂತರ ವಾಗಿ ನಡೆದು ನಡೆದು ಸುಸ್ತಾಗಿತ್ತು. ಟಾರ್ಚ್ ಕೈಕೊಟ್ಟ ಕೂಡಲೇ ರಂಗಾಚಾರ್ಯರಿಗೆ
ಕಗ್ಗತ್ತಲು ಪೂರ್ಣಪ್ರಮಾಣದಲ್ಲಿ ಗೋಚರವಾಯಿತು. ಅಲ್ಲೇ ರಸ್ತೆಬದಿಯಲ್ಲಿ ತಲೆ ಮೇಲೆ ಕೈಯಿಟ್ಟು ಕುಳಿತುಕೊಂಡು ಗಟ್ಟಿಯಾಗಿ ಹರಿಸ್ಮರಣೆಗೆ ತೊಡಗಿದರು.

ಅದೇಹೊತ್ತಿಗೆ ಸರಿಯಾಗಿ ದೂರದಿಂದ ಐದುಮಂದಿ “ದಪ್ ದಪ್”ಎಂದು ಹೆಜ್ಜೆ ಇಡುತ್ತಾ ದೊಡ್ಡ ಟಾರ್ಚ್ ಲೈಟ್ ಹಿಡಿದುಕೊಂಡು ರಂಗಾಚಾರ್ಯರ ಬಳಿ ಬರುತ್ತಿದ್ದರು. ಅವರನ್ನು ನೋಡುತ್ತಿದ್ದಂತೆಯೇ ರಂಗಾಚಾರ್ಯರ ಸ್ತೋತ್ರ ಸ್ಮರಣೆ ಎಲ್ಲವೂ ಒಮ್ಮೆಗೇ ನಿಂತೇಹೋಯಿತು.
ಗಂಟಲು ಕಟ್ಟಿತು. ಒಬ್ಬೊಬ್ಬರು ಬರೋಬ್ಬರಿ ಆರುಅಡಿ ಎತ್ತರ. ಎಲ್ಲರೂ ಕೊಬ್ಬಿದ ಹುಲಿಯಂತಿದ್ದರು. ಒಂದಿಬ್ಬರ ಕೈಯಲ್ಲಿ ಕೋವಿ ಇತ್ತು. ಉಳಿದವರು ಒಂದೊಂದು ರೀತಿಯ ದೊಣ್ಣೆಗಳನ್ನು ಹಿಡಿದುಕೊಂಡಿದ್ದರು.

ಅವರಲ್ಲಿ ಒಬ್ಬಾತ ಹತ್ತಿರ ಬಂದು ರಂಗಾಚಾರ್ಯರ ಕೆನ್ನೆಗೆ ಜೋರಾಗಿ ಬಾರಿಸಿದ.ಆ ಏಟಿಗೆ ರಂಗಾಚಾರ್ಯರು ರಸ್ತೆಯ ಮೇಲೆ ಬಿದ್ದುಬಿಟ್ಟರು. ಹೆದರಿಹೋದ ಆಚಾರ್ರು “ವಾದಿರಾಜರೇ ಕಾಪಾಡಿ” ಎಂದು ಗಟ್ಟಿಯಾಗಿ ಬೊಬ್ಬಿಡಲು ಆರಂಭಿಸಿದರು. ದರೋಡೇಕೋರರು ಇವರ ಕುತ್ತಿಗೆಯಲ್ಲಿದ್ದ ತುಳಸೀಮಣಿ ಹಾರ ಕಿವಿಯಲ್ಲಿದ್ದ ಒಂಟಿ, ಕೈಚೀಲ,ವಾಚ್ ಎಲ್ಲವನ್ನೂ
ಬಲಾತ್ಕಾರದಲ್ಲಿ ಕಸಿದುಕೊಂಡರು.

ಅಂಗಿಯ ಕಿಸೆಯಲ್ಲಿದ್ದ ಬಿಡಿ ಕಾಸನ್ನೂ ಎಳೆದುಕೊಂಡರು. ರಂಗಾಚಾರ್ಯರ ಮೈಕೈಗಳೆಲ್ಲಾ ಗಢಗಢ ನಡುಗುತ್ತಿದ್ದವು. ಆಚಾರ್ ನೋವು ದುಃಖ ತಡೆಯಲಾರದೆ ರೋಧಿಸುತ್ತಿದ್ದರು.ನಡು ನಡುವೆ “ವಾದಿರಾಜರೇ, ರಾಯರೇ,ಭೂತರಾಜರೇ ನಿಮ್ಮ ಭಕ್ತನನ್ನು ಕಾಪಾಡಿ” ಎಂದು ಕಣ್ಣೀರು ಸುರಿಸುತ್ತಿದ್ದರು.ದರೋಡೆಕೋರರು ಇವರನ್ನು ಚಿಂದಿಗೈಯುತ್ತಿದ್ದರು.

ಅದೇ ಸಂದರ್ಭದಲ್ಲಿ ಅನತಿ ದೂರದಲ್ಲಿ ಯಾರೋ ಒಬ್ಬರು ದೊಂದಿದೀಪ ಹಿಡಿದುಕೊಂಡು ಏಕಾಂಗಿಯಾಗಿ ಈ ಘಟನಾ ಸ್ಥಳದತ್ತ ಆಗಮಿಸುತ್ತಿದ್ದರು. ಒಂದುಕ್ಷಣ ದರೋಡೆ ಕೋರರು ರಂಗಾಚಾರ್ಯರನ್ನು ತೊರೆದು ರಸ್ತೆ ಬದಿಯ ಮರದ ಎಡೆಯಲ್ಲಿ ಹೋಗಿ ನಿಂತರು. ದೀಪ ಹಿಡಿದುಕೊಂಡು ಬಂದ ವ್ಯಕ್ತಿಯು ಮಕ್ಕಳಂತೆ ಅಳುತ್ತಿದ್ದ ರಂಗಾಚಾರ್ಯರ ಬಳಿ ಬಂದು ಧೈರ್ಯ ಹೇಳಿದರು.”ನನ್ನ ಮನೆ ಇಲ್ಲೇಇದೆ ಹೋಗೋಣ ಏನೂ ಹೆದರ್ಕೊಬೇಡಿ.

ನಾನು ಈ ಊರ ದೇವಾಲಯದ ಅರ್ಚಕ” ಅಂತಾ ಹೇಳಿ ಕರೆದುಕೊಂಡು ಹೋಗಲು ಮುಂದಾದರು. ಆ ಕೂಡಲೇ ಮರದ ಎಡೆಯಲ್ಲಿದ್ದ ದರೋಡೆಕೋರರು ಈ ಭಾರಿ ಇಬ್ಬರಮೇಲೂ ಎಗರಿದರು.ಆದರೆ ಆಶ್ಚರ್ಯವೆನ್ನುವಂತೆ ದೀಪ ಹಿಡಿದುಕೊಂಡು ಬಂದಿದ್ದ ಅರ್ಚಕರು ಐದೂ ಜನ ದರೋಡೆಕೋರರಿಗೆ ಹಿಗ್ಗಾಮುಗ್ಗಾ ಬಡಿದು ಹಾಕಿದರು.

ಅವರ ಮುಷ್ಟಿಯ ಹೊಡೆತದ ವೇಗ ಹೇಗಿತ್ತೆಂದರೆ ದರೋಡೆಕೋರರ ಮುಖ ಮುಸುಡಿಗಳು ಒಡೆದು ರಕ್ತ ಚಿಮ್ಮುತ್ತಿತ್ತು.ಕೈಕಾಲುಗಳು ಮುರಿದು ಹೋಗಿದ್ದವು. ಅನಿರೀಕ್ಷಿತವಾದ ಈ ಪ್ರತಿಧಾಳಿಯಿಂದ ಬೆಚ್ಚಿಬಿದ್ದ ದರೋಡೆಕೋರರು ಓಡಲೂ ಆಗದೆ ನಿಲ್ಲಲೂ ಆಗದೆ ಹೇಗೋ ಕಷ್ಟಪಟ್ಟು ಅರಣ್ಯದೊಳಗೆ ಸಾಗಿ ತಪ್ಪಿಸಿಕೊಂಡರು.

ಊರ ದೇವಾಲಯದ ಅರ್ಚಕ ಐದೂಮಂದಿ ದರೋಡೆಕೋರರ ಮೇಲೆ ಮಿಂಚಿನಂತೆ ಎರಗಿ ನೆಲಕ್ಕೆ ಅಪ್ಪಳಿಸಿದ ರೀತಿ ಕಂಡು ಆಚಾರ್ಯರು ಮೂಕವಿಸ್ಮಿತರಾಗಿದ್ದರು. ತಮ್ಮ ಕಣ್ಣನ್ನು ತಾವೇ ನಂಬಲಿಲ್ಲ.ಸಾಮಾನ್ಯವ್ಯಕ್ತಿಯೊಬ್ಬರು ಐದುಜನ ದರೋಡೆಕೋರರನ್ನು ಈ ರೀತಿ ಬಡಿದುಹಾಕಲು ಸಾಧ್ಯವೇ.ಈ ಹೊಡೆದಾಟದ ದೃಶ್ಯ ನೋಡಿ ಆಚಾರ್ಯರಿಗೆ ಅವರ ನೋವೆಲ್ಲಾ ಮರೆತೇ ಹೋಗಿತ್ತು..ಅಬ್ಬಾ.. ಆಚಾರ್ಯರಿಗೆ ಉಸಿರು ಬಂದಂತಾಗಿತ್ತು.

ಜೊತೆಗೆ ದರೋಡೆಕೋರರು ರಂಗಾಚಾರ್ಯರಿಂದ ಕಿತ್ತುಕೊಂಡಿದ್ದ ಅಷ್ಟೂ ಸೊತ್ತುಗಳು ಆಚಾರ್ಯರಿಗೆ ಮತ್ತೆ ಲಭಿಸಿತು.ಅರ್ಚಕರು ಆಚಾರ್ಯರನ್ನು ಕೇಳಿದರು. “ಈ ರಾತ್ರಿಯಲ್ಲಿ ಎಲ್ಲಿಗೆ ಒಬ್ಬಂಟಿಗನಾಗಿ ಹೋಗ್ತಾಇದ್ದೀರಿ”.. ಅದಕ್ಕೆ ಆಚಾರ್ಯರು.. ಜೀವನದಲ್ಲಿ ಮೊದಲಭಾರಿ ರಾಜರ ದರ್ಶನಕ್ಕಾಗಿ ಸಾಗುತ್ತಿರುವ ವಿಷಯವನ್ನು ಅವರಿಗೆ ತಿಳಿಸಿದರು.

ಅದಕ್ಕೆ ಅರ್ಚಕರು ಹೇಳಿದರು. “ಬೇಕಿದ್ರೆ ಪಕ್ಕದಲ್ಲೇ ನನ್ನ ಮನೆಯಿದೆ ಇವತ್ತುರಾತ್ರಿ ಇಲ್ಲೇಇದ್ದು ನಾಳೆಹೊರಡಿ “ಅಂತಾ ಹೇಳಿದ್ರೆ..ಅದಕ್ಕೆ ಆಚಾರು ಅಂದ್ರು”ಇವತ್ತು ಬೆಳಿಗ್ಗೆಯಿಂದಲೇ ವಾದಿರಾಜರ ಎಲ್ಲಾ ಪೂಜೆಯನ್ನು ನೋಡಲೇಬೇಕು ಅನ್ನೋ ಆಸೆ.ಅದಕ್ಕಾಗಿ ಇಷ್ಟೊಂದು ಅವಸರದಲ್ಲಿದ್ದೇನೆ”.. ಅಂತಾ ಹೇಳಿ.. ಮತ್ತೆ ಮಾತು ಮುಂದುವರಿಸಿದ ಆಚಾರ್..

“ನಿಮ್ಗೆ ತೊಂದ್ರೆ ಇಲ್ಲಾಂದ್ರೆ ನನ್ನನ್ನು ಸೋದಾಕ್ಷೇತ್ರದವರೆಗೆ ಕರೆದುಕೊಂಡು ಹೋಗುವಿರಾ “ಅಂತಾ ಕೇಳಿದಕ್ಕೆ ಅರ್ಚಕರು ಒಪ್ಪಿಕೊಂಡರು.ಅಷ್ಟೇಅಲ್ಲ ದಾರಿಯುದ್ದಕ್ಕೂ ರಂಗಾಚಾರ್ಯರು ಹೇಳುತ್ತಿದ್ದ ವಾದಿರಾಜರ ಮಹಿಮೆಯನ್ನು ಕುತೂಹಲದಿಂದ ಕೇಳುತ್ತಿದ್ದರು. ಶಾಲ್ಮಲೀ ನದಿಯನ್ನು ಸ್ವತಃ ಅರ್ಚಕರೇ ಕೈಹಿಡಿದು ಜಾಗರೂಕತೆಯಿಂದ ದಾಟಿಸಿದರು. ಬೇಸಿಗೆ ಕಾಲವಾದ ಕಾರಣ ನದಿನೀರಿನ ಹರಿವು ತೀವ್ರವಾಗಿ ಇರಲಿಲ್ಲ.

ರಾಜರ ಕಥೆ ಕೇಳುತ್ತಾ ಸೋದಾಕ್ಷೇತ್ರ ಸಮೀಪಿಸಿದ್ದು ತಿಳಿಯಲೇ ಇಲ್ಲ. ಆಶ್ಚರ್ಯವೆಂದರೆ ಅರ್ಚಕರ ಕೈಯಲ್ಲಿದ್ದ ದೊಂದಿದೀಪ ಅಷ್ಟು ಹೊತ್ತಾದರೂ ಬೆಳಗುತ್ತಲೇ ಇತ್ತು. ಸೋದಾ ಕ್ಷೇತ್ರ ಸಮೀಪಿಸುವಾಗ ಮೊದಲು ಕಾಣಸಿಗುವ ಹಯಗ್ರೀವ ಸಮುದ್ರದವರೆಗೆ ಆಚಾರ್ಯರನ್ನು ಅರ್ಚಕರು ಕರೆದುಕೊಂಡು ಬಂದರು.

ದೂರದಲ್ಲಿ ಕಾಣುವ ಸೋದಾಕ್ಷೇತ್ರಕ್ಕೆ ಅವರು ಕೈ ತೋರಿಸಿ “ಆಚಾರ್ರೆ ಅಲ್ಲಿ ಕಾಣ್ತಾ ಇರೋದೇ ಶ್ರೀವಾದಿರಾಜರ ಸಿದ್ದಿ ಸಾಧನೆಯ ಪವಿತ್ರ ಸನ್ನಿಧಾನ ಸೋದಾಕ್ಷೇತ್ರ” ಎಂದು ಹೇಳಿದರು.

ಪ್ರಾತಃಕಾಲ ಘಂಟೆ ಐದು ಆಗಿರಬಹುದು. ಚಳಿಗಾಳಿಜೋರಾಗಿ ಬೀಸುತ್ತಿತ್ತು. ರವಿಯ ಕೇಸರಿವರ್ಣದ ರೇಖೆಗಳು ಒಂದೊಂದಾಗಿ ನಭದಲ್ಲಿ ಮೂಡುತ್ತಿದ್ದವು. ವಾದಿರಾಜರ ಕ್ಷೇತ್ರವು ದೂರದಿಂದ ಕಾಣುತ್ತಿದ್ದಂತೆ ಆಚಾರ್ಯರ ತನುಮನ ತುಂಬಿ ಬಂದಿತು. ವಾದಿರಾಜರ ಕ್ಷೇತ್ರಕ್ಕೆ ಕರೆದುಕೊಂಡು ಬಂದ ಅರ್ಚಕರಿಗೆ ಕೃತಜ್ಞತೆ ಸಲ್ಲಿಸಲೇಬೇಕು ಎಂದು ಆಚಾರ್ಯರು ಹಿಮ್ಮುಖ ತಿರುಗಿದಾಗ ಅಲ್ಲಿ ಅರ್ಚಕರೂ ಇರಲಿಲ್ಲ.

ದೊಂದಿಯೂ ಇಲ್ಲ.ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ಅದೃಶ್ಯರಾಗಿದ್ದರು. ಆಚಾರ್ಯರ ಮೈ ಜುಂ ಎಂದಿತು. “ಅರೆ..ನನ್ನನ್ನು ದರೋಡೆಕೋರರ ಸಾವಿನ ಕುಣಿಕೆಯಿಂದ ಪಾರುಮಾಡಿ ಇಲ್ಲಿಯವರೆಗೆ ಕರೆದುಕೊಂಡುಬಂದ ಪುಣ್ಯಾತ್ಮ ಕ್ಷಣಾರ್ಧದಲ್ಲಿ ನನ್ನನ್ನು ಹೇಗೆ ತೊರೆದುಹೋದರು.ನಾನು ಅವರಿಗೆ ಕೃತಜ್ಞತೆಯನ್ನೂ ಕೂಡಾ ಸಲ್ಲಿಸಲ್ಲಿಲ್ಲವಲ್ಲ” ಎಂದು ಭಾವುಕರಾದರು. ಕಣ್ಣೆದುರಲ್ಲೆ ನಡೆದ ಈ ಘಟನೆಯಿಂದ ರಂಗಾಚಾರ್ಯರು ಅರೆಘಳಿಗೆ ಸ್ತಂಭಿಭೂತರಾದರು. ಇದೇನು ಮಾಯೆಯೋ ಸತ್ಯವೋ ಆಚಾರ್ಯರಿಗೆ ಒಂದೂ ಅರಿವಾಗಲಿಲ್ಲ.

ತಕ್ಷಣ ಕ್ಷೇತ್ರಕ್ಕೆ ತೆರಳಿ ಧವಳಗಂಗಾ ಸ್ನಾನ ಶ್ರೀವಾದಿರಾಜರ ಭೂತರಾಜರ ದರ್ಶನ ಪೂರೈಸಿ ಭೂವರಾಹ ಹಯಗ್ರೀವ ದೇವರ ಪ್ರಸಾದ ಸ್ವೀಕರಿಸಿ ಸುಮಾರು ಒಂದು ವಾರಗಳ ತನಕ ಸೇವೆ ಸಲ್ಲಿಸಿದರು.ತೆರಳುವ ಮೊದಲು ಸೋದೆಯಲ್ಲೆ ಮೊಕ್ಕಾಂ ಹೂಡಿದ್ದ ಮಹಾ ತಪಸ್ವಿಗಳು ಎನಿಸಿದ್ದ ಶ್ರೀವಿಶ್ವೋತ್ತಮತೀರ್ಥರಲ್ಲಿ ಮಂತ್ರಾಕ್ಷತೆ, ಆಶೀರ್ವಾದ ಸ್ವೀಕರಿಸಿ ನಡೆದ ಎಲ್ಲಾ ವಿಷಯವನ್ನು ಹೇಳಿದರು. ಈ ಘಟನೆಯನ್ನು ಕೇಳಿದ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಭೂತರಾಜರ ಮಹಿಮೆಯನ್ನು ನೆನೆದು ತುಂಬಾ ಸಂತೋಷಪಟ್ಟರು.

ಉಡುಪಿಗೆ ಬಂದ ಆಚಾರ್ಯರು ನನ್ನ ತಂದೆಯನ್ನು ಭೇಟಿಯಾಗಿ ಅಡವಿಯಲ್ಲಿ ನಡುರಾತ್ರಿಯಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು.. ನಮ್ಮಬಾಲ್ಯದಲ್ಲಿ ತಂದೆಯವರು ನಮಗೆ ಈ ಕತೆಯನ್ನು ಕನಿಷ್ಟವೆಂದರೂ ಹತ್ತು ಭಾರಿ ಹೇಳಿದ್ದರು.ಆದರೂ ಮತ್ತೆಮತ್ತೆ ಹೇಳುವಂತೆ ನಾವು ದುಂಬಾಲು ಬೀಳುತ್ತಿದ್ದೆವು.

ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ವಿಶೇಷ ಆಮಂತ್ರಣದ ಮೇರೆಗೆ ಶ್ರೀ ಸೋದೆವಾದಿರಾಜ ಮಠದ ಕೀರ್ತಿಶೇಷ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಪ್ರತೀವರ್ಷವೂ ಶಿರೂರಿನಲ್ಲಿ ವರ್ಷಂಪ್ರತಿ ಜರಗುವ ಶ್ರೀರಾಮನವಮಿ ಉತ್ಸವಕ್ಕೆ ಮಠದ ಪಟ್ಟದ ದೇವರ ಸಹಿತ ಚಿತ್ತೈಸಿ 2 ದಿನಗಳ ಕಾಲ ಈ ಕ್ಷೇತ್ರದಲ್ಲಿ ತಂಗಿ ಶ್ರೀ ಪಟ್ಟಾಭಿರಾಮದೇವರು ಹಾಗೂ ಶ್ರೀಮುಖ್ಯಪ್ರಾಣದೇವರಿಗೆ ಪೂಜೆ ಸಲ್ಲಿಸಿ ನಮ್ಮನ್ನೆಲ್ಲಾ ಹರಸುತ್ತಿದ್ದರು.

ಒಮ್ಮೆ 2004ನೇ ಇಸವಿಯಲ್ಲಿ ಶಿರೂರು ರಾಮನವಮಿ ಉತ್ಸವಕ್ಕೆ ಶ್ರೀವಿಶ್ವೋತ್ತಮತೀರ್ಥರು ಬಂದಾಗ ರಂಗಾಚಾರ್ಯರ ಘಟನೆಯ ಕುರಿತು ಪ್ರಸ್ತಾವಿಸಿದ್ದೆ. ಆವಾಗ ಶ್ರೀವಿಶ್ವೋತ್ತಮತೀರ್ಥರು ಅಂದಿನ ಘಟನೆ ಮತ್ತು ರಂಗಾಚಾರ್ಯರ ವಿಚಾರವಾಗಿ ಬಹಳ ಹೊತ್ತು ಮಾತನಾಡಿದ್ದರು.

ಸುಮಾರು ನಾಲಕ್ಕು ಭಾರಿ ಈ ತೆರನಾದ ಘಟನೆ ಅದೇ ಮಾರ್ಗದಲ್ಲಿ ಸಂಭವಿಸಿತ್ತು.
ಆದರೆ ರಂಗಾಚಾರ್ಯರ ಘಟನೆಯ ನಂತರ ಆ ಪ್ರಾಂತ್ಯದಲ್ಲಿ ಮತ್ತೆಂದೂ ದರೋಡೆಕೋರರ ಧಾಳಿ ಸಂಭವಿಸಿಲ್ಲ ಎನ್ನುವುದು ಭೂತರಾಜರ ಮಹಿಮೆಗೆ ಜ್ವಲಂತ ನಿದರ್ಶನ ಎಂದು ಖುಷಿಪಟ್ಟು ಹೇಳಿದರು. ಇದೇಸಂದರ್ಭದಲ್ಲಿ ಪರಮಪೂಜ್ಯಶ್ರೀಪಾದರು ತಮ್ಮಜೀವಿತಾವಧಿಯಲ್ಲಿ ಸಂಭವಿಸಿದ ಶ್ರೀವಾದಿರಾಜರ ಭೂತರಾಜರ ಅನೇಕ ಮಹಿಮೆಗಳನ್ನು ಹಾಗೂ ಕುತೂಹಲಕಾರಿ ಸತ್ಯ ಘಟನೆಗಳನ್ನು ಕೂಡಾ ಸವಿವರವಾಗಿ ಹೇಳಿದ್ದರು. 

ಇದೆಲ್ಲಾ ನಮ್ಮ ಸುಕೃತವೆಂದೇ ಭಾವಿಸುತ್ತೇವೆ.. ಆತ್ಮೀಯ ಓದುಗರೇ ಒಂದಂತೂ ಸತ್ಯ..
ಭಗವಂತನ ಪ್ರೀತಿಗಾಗಿ ನಮ್ಮ ಸತ್ಸಂಕಲ್ಪವಿದ್ದರೆ, ಎಂತಹ ಸಂಕಷ್ಟ ಬಂದರೂ ಸಂರಕ್ಷಿಸಲು ಆತ ಬಂದೇ ಬರುತ್ತಾನೆ ಅನ್ನೋದಕ್ಕೆ ರಂಗಾಚಾರ್ಯರ ಈ ಘಟನೆಯೇ ಸಾಕ್ಷಿ.ಚಿತ್ರ : ಅಕ್ಷರಾ ಪಿ ಎಲ್ ಆಚಾರ್ಯ.

 
 
 
 
 
 
 
 
 
 
 

Leave a Reply