ಹಾಲು ಉತ್ಪಾದಕರ ಬಾಕಿ ಉಳಿಸಿರುವ ಸಬ್ಸಿಡಿ ಹಣ ಪಾವತಿಗೆ ರಾಜ್ಯ ಸರಕಾರ ಗ್ಯಾರಂಟಿ ಕೊಡಲಿ : ಸಾಣೂರು ನರಸಿಂಹ ಕಾಮತ್ ಒತ್ತಾಯ

ರಾಜ್ಯದೆಲ್ಲೆಡೆ ತಾಪಮಾನ ಏರುತ್ತಿದ್ದು, ಗ್ರಾಮೀಣ ಭಾಗದ ಹೈನುಗಾರರು ಈಗಾಗಲೇ ಏರುತ್ತಿರುವ ಹಾಲಿನ ಉತ್ಪಾದನಾ ವೆಚ್ಚ,ಮೇವಿನ ಕೊರತೆ, ಏರುತ್ತಿರುವ ಪಶು ಆಹಾರದ ಬೆಲೆ, ಪಶುವೈದ್ಯರ ಸೇವೆಯ ಅಲಭ್ಯತೆಯಿಂದ ಈಗಾಗಲೇ ಹೈರಾಣವಾಗುತಿದ್ದು, ಕಳೆದ ಏಳು ತಿಂಗಳಿನಿಂದ ಲೀಟರಿಗೆ ಐದು ರೂಪಾಯಿಯಂತೆ ದೊರಕಬೇಕಾಗಿದ್ದ ಪ್ರೋತ್ಸಾಹ ಧನ ಪಾವತಿಗೆ ಬಾಕಿಯಾಗಿದ್ದು ತೀರಾ ಸಂಕಷ್ಟಕ್ಕೆ ಈಡಾಗಿದ್ದಾರೆ.

ತಮ್ಮ ತುರ್ತು ಅಗತ್ಯಗಳಿಗೆ, ದನ ಖರೀದಿಗೆ, ಹಟ್ಟಿ ನಿರ್ಮಾಣ ಮತ್ತು ದುರಸ್ತಿಗೆ ,ಮಕ್ಕಳ ಶಿಕ್ಷಣ ವೆಚ್ಚಗಳಿಗೆ ಅನುಕೂಲವಾಗಲೆಂದು ಹಾಲಿನ ಪ್ರೋತ್ಸಾಹ ಧನದ ಮೊತ್ತವನ್ನು ಪ್ರತ್ಯೇಕವಾಗಿ ಉಳಿತಾಯ ಮಾಡಿ, ಸದುಪಯೋಗಪಡಿಸಿಕೊಳ್ಳುತ್ತಿದ್ದ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಕಳೆದ ಏಳು ತಿಂಗಳಿನಿಂದ ಪ್ರೋತ್ಸಾಹ ಧನ ಖಾತೆಗೆ ಜಮೆಯಾಗದೆ ತೀರಾ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ.

ರಾಜ್ಯ ಸರಕಾರವು ಈ ಹಿಂದೆ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿಯಿಂದ 7/- ರೂಪಾಯಿಗೆ ಏರಿಸುತ್ತೇವೆಂದು ಭರವಸೆ ನೀಡಿದ್ದರೂ ಇದೀಗ ಕಳೆದ ಏಳು ತಿಂಗಳಿನಿಂದ ಸುಮಾರು 700 ಕೋಟಿ ಹಾಲಿನ ಪ್ರೋತ್ಸಾಹ ಧನ ಪಾವತಿಯನ್ನು ಬಾಕಿ ಇರಿಸಿಕೊಂಡು, ಹೈನುಗಾರಿಕೆಗೆ ಭಾರೀ ಹೊಡೆತವನ್ನು ನೀಡುತ್ತಿದೆ.

ರಾಜ್ಯದ ಲಕ್ಷಾಂತರ ಹೈನುಗಾರ ಕುಟುಂಬಗಳ ಸಂಕಷ್ಟಮಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಬಾಕಿ ಇರಿಸಿರುವ ಏಳು ತಿಂಗಳ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಏಕಘಂಟಿನಲ್ಲಿ ಪಾವತಿಸಬೇಕು ಹಾಗೂ ದುಬಾರಿಯಾಗುತ್ತಿರುವ ನಂದಿನಿ ಪಶು ಆಹಾರಕ್ಕೆ ಕೆ.ಜಿ. ಗೆ ಕನಿಷ್ಠ₹ 5/- ಸಬ್ಸಿಡಿ ಒದಗಿಸಬೇಕೆಂದು ಒತ್ತಾಯಿಸಿ ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ರಾಜ್ಯದ ಮುಖ್ಯಮಂತ್ರಿಗಳಿಗೆ, ಸಹಕಾರಿ ಸಚಿವರಿಗೆ ಹಾಗೂ ಪಶುಸಂಗೋಪನ ಸಚಿವರಿಗೆ ಪತ್ರ ಮುಖೇನ ವಿನಂತಿಸಿರುತ್ತಾರೆ.

ಹೈನುಗಾರರ ಸಂಕಷ್ಟಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯದಲ್ಲಿ ಎರಡನೆಯ ಹಂತದ ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ವ್ಯಾಪಿ ತೀವ್ರ ಪ್ರತಿಭಟನೆ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿರುತ್ತಾರೆ.

 
 
 
 
 
 
 
 
 
 
 

Leave a Reply