ದುಡಿಯುವ ಮಹಿಳೆಗೆ ಬೇಕಿದೆ ಬೆಂಬಲ

ದುಡಿಯುವ ಮಹಿಳೆ ಎಷ್ಟು ಕಷ್ಟ ಪಡುತ್ತಾಳೆಂದು ತಿಳಿಯಬೇಕಿದ್ದರೆ ತನ್ನವರೆಂದು ಕೊಂಡವರು ಹೊರಗೆ ದುಡಿಯಲು ಹೋಗಬೇಕು. ಹೊರಗೆ ದುಡಿದು ಮನೆಯಲ್ಲೂ ದುಡಿಯುವ ಮಹಿಳೆ ತನ್ನ ಜೀವನದಲ್ಲಿ ಸಾಧನೆಯನ್ನೂ ಮಾಡುವುದೆಂದರೆ ಅದು ಅಸಾಮಾನ್ಯ. ಇಂತಹ ಮಹಿಳೆ ಸಮಾಜದಲ್ಲಿ ವಿವಿಧ ವ್ಯಕ್ತಿತ್ವದ ಜನರ ಜೊತೆ ಮಾತನಾಡಬೇಕಾಗುತ್ತದೆ. ಸಭೆ ಸಮಾರಂಭಗಳಲ್ಲಿ ಜನಸಾಮಾನ್ಯರ ಜೊತೆ ಮಾತುಕತೆ ನಡೆಸಬೇಕಾಗುತ್ತದೆ. ಇಂತಹ ಮಹಿಳೆಗೆ ಹತ್ತಾರು ಜನರ ಫೋನ್ ಯಾವುದೇ ಸಮಯದಲ್ಲಿ ಬರಬಹುದು. ಕಾರ್ಯಕ್ಷೇತ್ರದಲ್ಲಿ ಇವೆಲ್ಲವೂ ಸಹಜ ಪ್ರಕ್ರಿಯೆ. ಇಂತಹ ಮಹಿಳೆಯ ಬಗ್ಗೆ ಸಮಾಜದ ವಿವಿಧ ವರ್ಗದ ಜನ ಬೇರೆ ರೀತಿಯಲ್ಲಿ ಮಾತನಾಡಬಹುದು. ಬೇರೆ ದೃಷ್ಟಿಯಿಂದ ನೋಡಬಹುದು. ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲಿರುವ ಜನರು ಆಕೆಗೆ ಇನ್ನಷ್ಟು ಸಾಧನೆಯನ್ನು ಮಾಡಲು ಪ್ರೋತ್ಸಾಹಿಸಬೇಕು. ಧೈರ್ಯ ತುಂಬಬೇಕು. ಆಗ ಆಕೆಗೆ ಶಕ್ತಿ ದೊರೆಯುತ್ತದೆ. ಕೆಲವು ಸಲ ಶಕ್ತಿ ತುಂಬುವ ಮನೆಯವರೇ ಆಕೆಯ ಸಾಧನೆಯನ್ನು ಸಹಿಸಲಾಗದೆ ತಮಾಷೆ ಮಾಡಿ, ವಿವಿಧ ರೀತಿಯಲ್ಲಿ ವರ್ಣನೆ ಮಾಡಿದರೆ ಆಕೆಯ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ! ಇಂತಹ ಜನರು ತಮ್ಮಲ್ಲಿರುವ ಹೊಟ್ಟೆ ಕಿಚ್ಚು, ತಮ್ಮಲ್ಲಿರುವ ಮನಸ್ಸಿನಲ್ಲಿರುವ ಅದ್ಯಾವುದೋ ಸಿಟ್ಟನ್ನು ಪ್ರಕಟಮಾಡಲಾಗದೆ ಒದ್ದಾಡುತ್ತಿರುತ್ತಾರೆ. ನಮ್ಮವರ ಬೆಳವಣಿಗೆಯನ್ನು ಸಹಿಸಲಾಗದೆ ಒಳಗೊಳಗೆ ಆಕೆಯ ಬಗ್ಗೆ ಕೆಟ್ಟದನ್ನೆ ಬಯಸುತ್ತಿರುತ್ತಾರೆ. ಆಕೆ ಜಾರಿ ಬಿದ್ದರೆ ನಮ್ಮವರೆಂಬ ಭಾವನೆಕೂಡ ಇಲ್ಲದೆ ಒಳಗೊಳಗೆ ಪ್ರಕಟ ಮಾಡಲಾಗದ ಖುಷಿ ಅನುಭವಿಸುತ್ತಾರೆ. ನನ್ನ ಕಳಕಳಿಯ ವಿನಂತಿ ಏನೆಂದರೆ ದುಡಿಯುವ ಮಹಿಳೆಗೆ ಸಮಾಜದ ಕೆಲವು ವರ್ಗದ ಜನರ‌ ಬಗ್ಗೆ ಜಾಗರೂಕತೆಯಿಂದ ಇರಲು ಹೇಳೋಣ. ಸಾಧನೆ ಮಾಡುವ ಯಾವುದೇ ಮಹಿಳೆಗೆ ಪುರುಷರಾದವರು ಪ್ರೋತ್ಸಾಹ ಕೊಡೋಣ. ಮನೆಯವರಾದ ನಾವೇ ಹೀಯಾಳಿಸಿದರೆ ಆಕೆಯ ಮೇಲೆ ಅಗಾಧವಾದ ಪರಿಣಾಮ ಬೀರಬಹುದು. ಮಹಿಳೆಯ ಸಾಧನೆಯನ್ನು ಸಾಧ್ಯವಾದರೆ ಪ್ರೋತ್ಸಾಹಿಸೋಣ ಇಲ್ಲದಿದ್ದರೆ ಸುಮ್ಮನಿರೋಣ. ಈ ಲೇಖನ ಸಮಾಜದ ಎಲ್ಲ ದುಡಿಯುವ ಅಕ್ಕತಂಗಿಯರಿಗೆ ಸಮರ್ಪಣೆ!

  – ಅರುಣ್ ಕುಮಾರ್ ಕುತ್ಪಾಡಿ

 
 
 
 
 
 
 
 
 
 
 

Leave a Reply