ಜನ್ಮವರ್ಧಂತಿಗೆ ಸಸಿ ನೆಟ್ಟ ಚಿತ್ರಾಪುರ ಶ್ರೀಗಳು

ಹಸಿರು ಪೋಷಿಸಿದವನಿಗೆ ಮಾತ್ರ ಉಸಿರಾಡುವ ಹಕ್ಕು – ಪೇಜಾವರ ಶ್ರೀಗಳು

ಗುರುವಾರದಂದು ಮಂಗಳೂರು ಜಿಲ್ಲೆ ಸುರತ್ಕಲ್ ಸಮೀಪದ ಚಿತ್ರಾಪುರ ಮಠದಲ್ಲಿ ಅಲ್ಲಿನ ಮಠಾಧೀಶರಾದ ತರುಣ ಯತಿ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರ ಜನ್ಮ ವರ್ಧಂತಿಯ ಪ್ರಯುಕ್ತ ಸಾಯಂಕಾಲ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ಸಾನ್ನಿಧ್ಯ ವಹಿಸಿದ್ದರು.ಜನ್ಮವರ್ಧಂತಿಯನ್ನು ಸ್ಮರಣೀಯ ಮತ್ತು ಔಚಿತ್ಯಪೂರ್ಣವಾಗಿಸುವ ಉದ್ದೇಶದಿಂದ ಮಠದ ಆವರಣದಲ್ಲಿ ಉಭಯ ಶ್ರೀಗಳೂ ಎರಡು ಮಾವಿನ ಸಸಿಗಳನ್ನು ನೆಟ್ಟು ನೀರೆರೆದು ಈ ಸಸಿಗಳು ಉಭಯ ಮಠಗಳ ನಡುವಿನ ಅನ್ಯೋನ್ಯ ನಂಟಿನ ಗಟ್ಟಿತನಕ್ಕೆ ಸಾಕ್ಷಿಯಾಗಲಿ ಎಂದು ಆಶಿಸಿದರು .ಈ ಸಂದರ್ಭ ಶ್ರೀ ವಿದ್ಯೇಂದ್ರ ತೀರ್ಥರನ್ನು 21 ನೇ ಜನ್ಮ ವರ್ಧಂತಿಯ ಅಭಿನಂದನೆಯನ್ನು ಸಲ್ಲಿಸಿ ಅನುಗ್ರಹ ಸಂದೇಶ ನೀಡಿದ ಪೇಜಾವರ ಶ್ರೀಗಳು , ಸಸಿನೆಡುವ ಮೂಲಕ ಈ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಿ ರುವುದು ಸ್ತುತ್ಯರ್ಹ. ಪರಿಸರದ ರಕ್ಷಣೆ ಕೇವಲ ಸರಕಾರ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರ ಅಲ್ಲ .‌ಉಸಿರಾಡುವ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಹಸಿರು ನೆಟ್ಟು ಪೋಷಿಸುವವನಿಗೆ ಮಾತ್ರ ಉಸಿರಾಡುವ ಅರ್ಥಾತ್ ಬದುಕುವ ಹಕ್ಕು ಇರ್ತದೆ.

ಹುಟ್ಟಿನಿಂದ ಸಾವಿನ ವರೆಗೆ ಹಸಿರು ಪ್ರಕೃತಿಯ ಪ್ರಯೋಜನ ಪಡೆಯುವ ನಾವು ಜೀವನದ ಜನ್ಮದಿನದಂತಹ ಯಾವುದೇ ಸಂಭ್ರಮದ ಸಂದರ್ಭಗಳಲ್ಲೆಲ್ಲ ಸಾಧ್ಯವಾದಷ್ಟು ಹಸಿರು ನೆಟ್ಟು ಪೋಷಿಸಿದಾಗ ಆ ಕಾರ್ಯಕ್ರಮವೂ ಸ್ಮರಣೀಯವಾಗ್ತದೆ ಮತ್ತು ಪ್ರಕೃತಿಯೂ ಉಳೀತದೆ ಎಂದರು.‌ ಇದೇ ಸಂದರ್ಭದಲ್ಲಿ ಅಧಿಕ ಮಾಸದ ಮಹತ್ವದ ಕುರಿತಾಗಿ ಸಂದರ್ಭೋಚಿತ ಉಪನ್ಯಾಸವನ್ನು ಶ್ರೀಗಳು ನೀಡಿದರು.

ಶ್ರೀ ವಿದ್ಯೇಂದ್ರತೀಥರು ಮಾತನಾಡಿ ಲೋಕಕ್ಕೆ ಒದಗಿದ ಕೊರೊನಾ ವಿಪತ್ತು ಶೀಘ್ರ ದೂರವಾಗಿ ಸಮಸ್ತ ಜಗತ್ತಿಗೇ ಕ್ಷೇಮ ಸಿದ್ಧಿಸಲಿ .‌ ತಮ್ಮ ಮುಂದಿನ ಕಾರ್ಯ ಯೋಜನೆಗಳಿಗೆ ಸಮಾಜದ ಪೂರ್ಣ ಸಹಕಾರ ಕೋರಿದರು.‌ ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆಗೈದರು. ಚಿತ್ರಾಪುರ ಮಠದ ಪ್ರಸನ್ನ ಆಚಾರ್ಯ, ಪೇಜಾವರ ಮಠದ ಸುಬ್ರಹ್ನಣ್ಯ ಭಟ್ ಕೃಷ್ಣ ಭಟ್ ಇಂದು ಶೇಖರ ಮೊದಲಾದವರು ಉಪಸ್ಥಿತರಿದ್ದರು .

ಶ್ರೀ ಮಠದಲ್ಲಿ ಬೆಳಿಗ್ಗೆ ಲೋಕ ಕಲ್ಯಾಣಾರ್ಥ ಕಾಲೀಯ ಕೃಷ್ಣ ದೇವರಿಗೆ ಲಕ್ಷತುಲಸೀ ಅರ್ಚನೆ ನೆರವೇರಿತು.

✍️ ಜಿ ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply