ಶ್ರೀ ಭಂಡಾರಕೇರಿ ಮಠ : ಇಬ್ಬರು ಪೂರ್ವಯತಿಗಳ ವೃಂದಾವನ ಶೋಧ , ಪುನಃಪ್ರತಿಷ್ಠೆ

ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಭಂಡಾರಕೇರಿ ಮಠದ ಶ್ರೀ ಸತ್ಯತೀರ್ಥ ಯತಿಪರಂಪರೆಯ ಇಬ್ಬರು ಪೂರ್ವಯತಿಗಳ ಮೂಲ ವೃಂದಾವನವು ಶೋಧಿಸಲ್ಪಟ್ಟಿದ್ದು ಅವುಗಳ ಪುನರ್ನಿರ್ಮಾಣಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಶ್ರೀ ಮಠದ ಈಗಣ ಯತಿಗಳಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವ , ಜೋತಿರ್ವಿದ್ವಾನ್ ಇರ್ವತ್ತೂರು ಗೋಪಾಲ‌ ಜೋಯಿಸರ ಮಾರ್ಗದರ್ಶನ‌, ವಿದ್ವಾನ್ ಕೃಷ್ಣ ಕುಮಾರ ಆಚಾರ್ಯರ ಅಧ್ವರ್ಯುತನದಲ್ಲಿ ಸೋಮವಾರ ನೆರವೇರಿತು .

ಶ್ರೀ ಮಠದಲ್ಲಿ ಇತ್ತೀಚೆಗೆ ನಡೆದ ಆರೂಢ ಪ್ರಶ್ನೆಯ ಸಂದರ್ಭದಲ್ಲಿ ಪೂರ್ವಯತಿದ್ವರ ವೃಂದಾವನ ಭೂಗತ ವಾಗಿರುವುದು ಅರಿವಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಠದ ಅಧೀನದ ಜಮಿನಿನಲ್ಲಿ ಶೋಧ ನಡೆಸಿದಾಗ ಪರಂಪರೆಯ 25 ನೇ ಯತಿಗಳಾದ ಶ್ರೀ ವಿದ್ಯಾರಾಜೇಂದ್ರತೀರ್ಥರು ಮತ್ತು 13 ನೆಯವರಾದ ಶ್ರೀ ವಿಶ್ವೋತ್ತಮತೀರ್ಥರ ವೃಂದಾವನದ ಸ್ಥಳ ಶೋಧಿಸಲ್ಲಪಟ್ಟಿತ್ತು .

ಇದೀಗ ಅದೇ ಸ್ಥಳದಲ್ಲಿ ನೂತನ ಶಿಲಾಮಯ ವೃಂದಾವನ ಗಳನ್ನು ನಿರ್ಮಿಸಿ ಪುನಃ ಪ್ರತಿಷ್ಠಾಪಿಸಲಾಗಿದೆ. ಅದೇ ರೀತಿ ಮಠದ ಆವರಣದಲ್ಲಿ ಆರಾಧಿಸಲಾಗು ತ್ತಿರುವ ವೃಂದಾವನಗಳಲ್ಲಿ ಒಂದು ಯಾರದ್ದೆಂಬ ಬಗ್ಗೆಯೂ ಮಾಹಿತಿ ಇರಲಿಲ್ಲ. ‌ಇದೀಗ ಆ ಬಗ್ಗೆಯೂ ಬಹಳ ನಿಷ್ಕರ್ಷೆ ನಡೆಸಿ 3ನೆಯ ಯತಿಗಳಾದ ಶ್ರೀ ಹಿರಣ್ಯಗರ್ಭ ತೀರ್ಥರದ್ದೆಂದು ನಿರ್ಣಯಿಸಲಾಗಿದೆ .

ಶ್ರೀ ಮಠದ ಬಗ್ಗೆ ಒಂದಿಷ್ಟು : ಶ್ರೀ ಕೋದಂಡರಾಮ ದೇವರು ಆರಾಧ್ಯಮೂರ್ತಿಯಾಗಿರುವ ಶ್ರೀ ಭಂಡಾರಕೇರಿ ಮಠವು ಉಡುಪಿ ಸಮೀಪದ ಬಾರಕೂರಿನಲ್ಲಿ ಮೂಲ ಮಠವನ್ನು ಹೊಂದಿದ್ದು ಉಡುಪಿ ರಥಬೀದಿಯ ಸುತ್ತಿನಲ್ಲೂ ಒಂದು ಮಠ ಇದೆ . ಬಾರಕೂರು ಅರಸೊತ್ತಿಗೆಯಿಂದ ಭರಪೂರ ಮಾನ್ಯತೆಯನ್ನು ಪಡೆದಿತ್ತು ಎನ್ನುವುದು ಶ್ರೀ ಮಠದಲ್ಲಿ ಹಾಗೂ ಬಾರಕೂರಿನಲ್ಲಿ ಲಭ್ಯವಿರುವ ದಾನಶಾಸನಗಳಿಂದ ತಿಳಿದುಬರುತ್ತದೆ. ಮೈಸೂರು ಬೆಂಗಳೂರುಗಳಲ್ಲೂ ಮಠದ ಶಾಖೆಗಳಿವೆ .

ಅನೇಕ ಮಹಾಜ್ಞಾನಿಗಳ ಈ ಯತಿ ಪರಂಪರೆಯಲ್ಲಿ ಶ್ರೀ ವಾದಿರಾಜ ಗುರು ಸಾರ್ವಭೌಮ ರ ಪೂರ್ವಾಶ್ರಮದ ಸಹೋದರರಾಗಿದ್ದ ಶ್ರೀ ಸುರೋತ್ತಮ ತೀರ್ಥರೂ ಸೇರಿದ್ದಾರೆ. ಈ ಮಠದಲ್ಲಿ ಯತಿಗಳಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರು ಬಳಿಕ ಪಲಿಮಾರು ಮಠಕ್ಕೆ ನಿಯುಕ್ತಿಗೊಂಡು ಸ್ಮರಣೀಯವೆನಿಸುವ ಎರಡು ಪರ್ಯಾಯಗಳನ್ನು ನಡೆಸಿದ್ದು ಈಗ ಇತಿಹಾಸ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೂ ಸನ್ಯಾಸ ಸ್ವೀಕರಿಸಿದ ಬಳಿಕ ಅನೇಕ ವರ್ಷ ಭಂಡಾರಕೇರಿ ಮೂಲ ಮಠದಲ್ಲೇ ಶಾಸ್ತ್ರಾಧ್ಯಯನ ನಡೆಸಿದ್ದು ವಿಶೇಷ .

ಪ್ರಸ್ತತ 34 ನೇರ ಉತ್ತರಾಧಿಕಾರಿಗಳಾಗಿರುವ ಶ್ರೀವಿದ್ಯೇಶತೀಥರು ಸ್ವಭಾವತಃ ಅಂತರ್ಮುಖಿಗಳೂ , ಅಧ್ಯಯನ ಶೀಲರೂ , ತಪಃ ಸ್ವಾಧ್ಯಾಯ ನಿಷ್ಟರೂ ಆಗಿದ್ದಾರೆ. ಕವಿಗಳೂ ಆಗಿರುವ ಇವರು ಸಂಸ್ಕೃತ ಕನ್ನಡದಲ್ಲಿ ದೇವ – ದೇವತೆಗಳನ್ನು ಸ್ತುತಿಸುವ ಪದ್ಯ ಕಾವ್ಯಗಳನ್ನು ರಚಿಸಿದ್ದಾರೆ. ಶ್ರೀ ಭಾಗವತ ,ಮಹಾಭಾರತವೇ ಮೊದಲಾದವುಗಳ ನಿರಂತರ ಪ್ರವಚನಗಳ ಮುಲಕ ಶ್ರೀ ಮಧ್ವರ ತತ್ತ್ವ ಸಂದೇಶ ಪ್ರಸಾರ ಕಾರ್ಯ ನಿರತರಾಗಿದ್ದಾರೆ .      ✍️ ಜಿ ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply