ಮನಸ್ಸು ಒಡೆದರೆ ಕಟ್ಟುವುದು ಕಷ್ಟ ~ಸುರೇಶ್ ಶೆಟ್ಟಿ ಗುರ್ಮೆ

ಉಡುಪಿ: ಮಂದಿರ, ಮಸೀದಿ, ಚರ್ಚ್ ಒಡೆದರೆ ಮತ್ತೆ ಕಟ್ಟಬಹುದು. ಆದರೆ ಮನಸ್ಸುಗಳು ಒಡೆದರೆ ಮತ್ತೆ ಕಟ್ಟುವುದು ಬಹಳ ಕಷ್ಟ. ರಂಗಭೂಮಿಯು ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತದೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು.

ಇಲ್ಲಿನ ಅಜ್ಜರಕಾಡು ಬಯಲು ಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಾಷ್ಟ್ರೀಯ ರಂಗಹಬ್ಬ ‘ಬಹುಭಾಷಾ ನಾಟಕೋತ್ಸವ’ದಲ್ಲಿ ನಾಲ್ಕನೇ ದಿನವಾದ ಬುಧವಾರ ಅವರು ಮಾತನಾಡಿದರು.
ಸಾಮರಸ್ಯದ ಕೆರಳುವಿಕೆಯ ಇಂದಿನ ದಿನಗಳಲ್ಲಿ ಅರಳುವಿಕೆಯ ಅನುಭವ ನಮ್ಮದಾಗಬೇಕು. ಇತಿಹಾಸ ಮತ್ತು ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸಬೇಕು ಎಂದು ೨೦ ವರ್ಷಗಳ ಹಿಂದೆ ಸುಮನಸಾ ರಂಗಯಾತ್ರೆ ಆರಂಭಿಸಿದ್ದರು. ಸಮ ಮನಸ್ಕರ, ಸಜ್ಜನರ ವಿಶಿಷ್ಠ ಸಂಘಟನೆಯಿದು ಎಂದು ಶ್ಲಾಘಿಸಿದರು.

ಹೊಟ್ಟೆ ತುಂಬಾ ಬೆಂಕಿ, ತಲೆ ತುಂಬಾ ಬಿರುಗಾಳಿ, ಮನದೊಳಗೆ ಭೂಕಂಪ, ಬಣ್ಣ ಬದಲು, ಭಾವ ಬದಲು, ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಪಡಿಪಾಟಲು ಪಡುವ ದಿನಗಳು ಇವು. ದುಗುಡದ, ಗೊಂದಲದ, ದಾರಿತಪ್ಪಿದ ದಿನಗಳು ಇವು. ಇಂಥ ಸಂದರ್ಭದಲ್ಲಿ ರಂಗಚಟುವಟಿಕೆಗಳು ನಮ್ಮನ್ನು ಸರಿದಾರಿಯಲ್ಲಿ ಒಯ್ಯಬಲ್ಲವು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಮಾತನಾಡಿ, ಸುಮನಸಾವು ಸಮಾನ ಮನಸ್ಕರ, ಸಮಾನ ವಯಸ್ಕರ ತಂಡ ಮಾತ್ರವಲ್ಲ. ಇಲ್ಲಿ ಸಣ್ಣ ಮಕ್ಕಳನ್ನೂ ತೊಡಗಿಸಿಕೊಂಡಿದ್ದಾರೆ. ಇದು ಉತ್ತಮ ಹೆಜ್ಜೆ ಎಂದು ಹೇಳಿದರು.
ದೃಶ್ಯಮಾಧ್ಯಮಗಳ ನಡುವೆ ರಂಗಚಟುವಟಿಕೆಯ ಅಸ್ತಿತ್ವ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಅಂಥದ್ದರ ನಡುವೆ ೨೦ ವರ್ಷಗಳಿಂದ ಈ ಕೆಲಸವನ್ನು ಸುಮನಸಾ ಮಾಡುತ್ತಾ ಬಂದಿದೆ. ಜತೆಗೆ ೧೦ ದಿನಗಳ ಕಾಲ ಬಹುಭಾಷಾ ನಾಟಕೋತ್ಸವ ಮಾಡುವ ಎದೆಗಾರಿಕೆಯನ್ನು ತೋರಿಸಿದೆ ಎಂದು ಶ್ಲಾಘಿಸಿದರು.
ಹಿರಿಯ ರಂಗಕರ್ಮಿ ಸ್ಟ್ಯಾನ್ಲಿ ಪಾಯಸ್ ಬಾರ್ಕೂರು ಅವರಿಗೆ ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.
ಪಂದುಬೆಟ್ಟು ಕಾನಗುಡ್ಡೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಅಂತಾರಾಷ್ಟ್ರೀಯ ಜಾದುಗಾರ ಪ್ರೊ. ಶಂಕರ್, ವಕೀಲ ಅನಿಲ್ ಕುಮಾರ್, ಉದ್ಯಮಿ ಮಿಥುನ್ ಕುಂದರ್, ಕೃಷಿಕ ರಾಜ ಶೇರಿಗಾರ್, ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ಧೃತಿ ಸಂತೋಷ್ ಆರಂಭಗೀತೆ ಹಾಡಿದರು. ದಿವಾಕರ ಕಟೀಲ್ ಸ್ವಾಗತಿಸಿದರು. ತಕ್ಷ ವಂದಿಸಿದರು. ಗಣೇಶ್ ಸಗ್ರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಗೋವಾ ಪಣಜಿಯ ರುದ್ರೇಶ್ವರ ತಂಡದಿoದ ಮಿತ್ರಾಂಚಿ ಕಣಿ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply