ನಿಮ್ಮಲ್ಲೊಂದು ಕಳಕಳಿಯ ಮನವಿ~ ಶಿವಾನಂದ ತಗಡೂರು

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) ಚುನಾವಣೆ ಮುಗಿದಿದೆ. ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಿಮ್ಮೆಲ್ಲರಿಗೆ ಅಭಿನಂದನೆಗಳು.

ಏಳು ಸಾವಿರಕ್ಕೂ ಹೆಚ್ಚು ಸದಸ್ಯರಿರುವ 31ಜಿಲ್ಲೆಯಲ್ಲಿ ಘಟಕಗಳನ್ನು ಹೊಂದಿರುವ ಬೃಹತ್ ಸಂಸ್ಥೆಗೆ ಚುನಾವಣೆ ನಡೆಸುವುದು ಬಹು ದೊಡ್ಡ ಸಾಹಸ. ಏಕ ಕಾಲಕ್ಕೆ ಜಿಲ್ಲಾ ಮತ್ತು ರಾಜ್ಯ ಘಟಕಕ್ಕೆ ಚುನಾವಣೆ ನಡೆಯುವ ಕಾರಣ ಸಿದ್ಧತೆಗಳನ್ನು ಮಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ.

ಕಾರ್ಮಿಕ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಎಲ್ಲಿಯೂ ಲೋಪ ಬಾರದಂತೆ ಪಾರದರ್ಶಕವಾಗಿ ಚುನಾವಣೆ ಯಶಸ್ವಿಯಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಕಾರಣ.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಪ್ರಕ್ರಿಯೆ ಒಂದು ಭಾಗ. ಆಯಾ
ಕಾಲಾನುಕಾಲಕ್ಕೆ ಕೆಯುಡಬ್ಲ್ಯೂಜೆ ಚುನಾವಣಾ ಪ್ರಕ್ರಿಯೆ ಎದುರಿಸುತ್ತಲೇ ಇನ್ನಷ್ಟು ಸಕ್ರಿಯವಾಗಿ, ಸಧೃಡವಾಗಿ ಬೆಳೆಯುತ್ತಲೇ ಬಂದಿದೆ.

ಚುನಾವಣೆ ಎಂದ‌ ಮೇಲೆ ಆರೋಪ, ಪ್ರತ್ಯಾರೋಪ, ಟೀಕೆ ಟಿಪ್ಪಣಿ ಸಹಜ. ಇದೆಲ್ಲವನ್ನೂ ಚುನಾವಣೆಗೆ ಸೀಮಿತಗೊಳಿಸಿ, ಇನ್ನೂ ವೃತ್ತಿ ಬದುಕಿನತ್ತ ಗಮನಹರಿಸೋಣ. ಯಾಕೆಂದರೆ ನಿಜವಾದ ಸವಾಲುಗಳು ಬೇರೆಯೇ ಇವೆ. ಕೋವಿಡ್ ಕಾಲಘಟ್ಟದಲ್ಲಿ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಂದ ಹಿಡಿದು ರಾಜ್ಯ ಮಟ್ಟದ ಪತ್ರಿಕೆಗಳ ತನಕ, ಎಲೆಕ್ಟ್ರಾನಿಕ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆಯಲ್ಲೂ ಸುದ್ದಿ ಮನೆ ಪತ್ರಕರ್ತರ ಬದುಕು ಎಷ್ಟು ಸಂಕಷ್ಟಕ್ಕೆ ಸಿಲುಕಿತು ಎನ್ನುವುದು ನಿಮಗೆ ಗೊತ್ತು.
ಇಂತಹ ಸಂದರ್ಭದಲ್ಲಿಯೂ ಕೆಯುಡಬ್ಲ್ಯೂಜೆ ಪತ್ರಕರ್ತರ ಸಾಂಘಿಕ ಶಕ್ತಿಯಾಗಿ ಕೆಲಸ ಮಾಡಿದ್ದು ನಿಮ್ಮ ಗಮನಕ್ಕಿದೆ.

ಮಾಧ್ಯಮ ಕ್ಷೇತ್ರದ ಮತ್ತು ಪತ್ರಕರ್ತರ ಹಕ್ಕೊತ್ತಾಯಗಳನ್ನು ಆಳುವ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸಿಕೊಳ್ಳಲು ನಮ್ಮ ಸಂಘಟಿತ ಪ್ರಯತ್ನ ಮುಂದುವರಿಸಬೇಕಿದೆ. ವೃತ್ತಿ ಬದುಕಿನ ನೈಪುಣ್ಯತೆ ಮತ್ತು ಘನತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವುಗಳು ಆತ್ಮ ವಿಮರ್ಶೆ ಮಾಡಿಕೊಂಡು ಹೆಜ್ಜೆ ಇಡಬೇಕಿದೆ. ಇದಕ್ಕೆಲ್ಲ ಧೃಡ ನಿರ್ಧಾರ ಅಗತ್ಯ.

ಸಂಘಟನೆ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಾಗ ಕೆಲವರಿಗೆ ನೋವಾಗಿರಬಹುದು. ಆದರೆ, ಅದು ವೈಯಕ್ತಿಕ ಅಲ್ಲ. ಒಂದು ಸಂಸ್ಥೆ ಹಿತದೃಷ್ಟಿಯಿಂದ ಆದ ನಿರ್ಣಯಗಳು ಎನ್ನುವುದು ನಿಮಗೆ ಗೊತ್ತಿದೆ ಎಂದು ಭಾವಿಸುವೆ. ಏನೇ ಲೋಪದೋಷಗಳಿದ್ದರೂ, ಸಂಕ್ರಮಣ ಕಾಲಘಟ್ಟದಲ್ಲಿ ಕೆಯುಡಬ್ಲ್ಯೂಜೆ ಇನ್ನಷ್ಟು ಗಟ್ಟಿಯಾಗಿ, ಸದೃಢವಾಗಿ ಬೆಳೆದಿದೆ ಎನ್ನುವ ಸಮಾಧಾನವೂ ಇದೆ.

ಗೆಲುವಿಗೆ ಹಿಗ್ಗಬಾರದು, ಸೋಲಿಗೆ ಕುಗ್ಗಬಾರದು. ಇಂದಿನ ಸೋಲು ನಾಳಿನ ಗೆಲುವಾಗಬಹುದು ಎನ್ನುವುದು ಹಿರಿಯರು ಹೇಳಿದ ಮಾತು ಎದೆಯಲ್ಲಿ ಪ್ರತಿಧ್ವನಿಸುತ್ತಿರಲಿ. ಆಗ ಮಾತ್ರ ನಾವು ಎಲ್ಲರ ವಿಶ್ವಾಸದೊಳಗೆ ಬೆರೆತು ಇನ್ನಷ್ಟು ಕ್ರಿಯಾಶೀಲವಾಗಿ ಮುನ್ನೆಡೆಯಲು ಸಾಧ್ಯ.

ಇಲ್ಲಿ ಯಾವುದೂ ಶಾಶ್ವತವಲ್ಲ. ಹಗಲಾದ ಮೇಲೆ ರಾತ್ರಿ ಬರಲೇಬೇಕಲ್ವಾ? ಕತ್ತಲು ಇದ್ದ ಕಾರಣಕ್ಕೆ ಬೆಳಕಿನ ಮಹತ್ವ ತಿಳಿದಿದ್ದಲ್ಲವೇ? ದ್ವೇಷ ಶಾಶ್ವತವಲ್ಲ, ಪ್ರೀತಿ ಶಾಶ್ವತ ಮತ್ತು ನಿರಂತರ ಎನ್ನುವುದು ವಾಸ್ತವ.

ಚುನಾವಣೆ ಲೆಕ್ಕಾಚಾರಗಳನ್ನು ಬದಿಗಿರಿಸಿ, ಇನ್ನು ವೃತ್ತಿ ಬದುಕು ಮತ್ತು ಸಂಘದ ಸಂಘಟನೆ ಕಡೆಗೆ ಗಮನಹರಿಸೋಣ. ಕೇಡಿನಿಂದ ಏನೂ ಸಾಧಿಸಲಾಗದು. ಅದನ್ನು ಪ್ರೀತಿ, ವಿಶ್ವಾಸದಿಂದ ಸಾಧಿಸಲು ಸಾಧ್ಯ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ.

-ಶಿವಾನಂದ ತಗಡೂರು
ಅಧ್ಯಕ್ಷರು, KUWJ

 
 
 
 
 
 
 
 
 
 
 

Leave a Reply