ಸಚಿವ “ಅರಗ” ರಿಗೆ ಅರಗಿಸಿಕೊಳ್ಳಲಾಗದ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ

ಬೆಂಗಳೂರು- ಕಾರಾಗೃಹ ಗಳಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು, ಎಚ್ಚರಿಕೆ ನೀಡಿದ್ದಾರೆ.

ಗೃಹ ಸಚಿವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ಭೇಟಿಯ ಸಂದರ್ಭದಲ್ಲಿ, ಕಾರಾಗೃಹದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜತೆ ಸಮಾಲೋಚನೆ ನಡೆಸಿ, ಜೈಲಿನ ಒಳಗೆ, ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಕ್ಷಣಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಸೂಕ್ತ ನಿರ್ದೇಶನ, ನೀಡಿದ್ದೇನೆ ಎಂದರು.

ಇತ್ತೀಚೆಗೆ, ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳು, ಜೈಲಿನಿನಲ್ಲಿ ಮೊಬೈಲ್ ಫೋನ್ ಬಳಕೆ ಬಗ್ಗೆ, ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಗಂಭೀರವಾದ ತನಿಖೆ ನಡೆಯುತ್ತಿದ್ದು, ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ, ಎಂದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ, ಮುರುಗನ್ ಸಮಿತಿ ನೀಡಿದ ಶಿಫಾರಸು ಗಳನ್ನು ಅನುಷ್ಠಾನಗೊಳಿಸಿ ಹಲವಾರು ಅಧಿಕಾರಿಗಳನ್ನು, ಜೈಲಿನಿಂದ ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳ ಸೇವೆಯನ್ನು ಅಮಾನತ್ತಿನಲ್ಲಿಡಲು ಸಹ ಶಿಫಾರಸು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕೇಂದ್ರ ಕಾರಾಗೃಹಗಳಲ್ಲಿ, ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಜಾಮರ್ ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, 5G ಸಾಮರ್ಥ್ಯದವರೆಗಿನ ಮೊಬೈಲ್ ಕರೆಗಳನ್ನು ನಿಷ್ಕ್ರಿಯ ಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಜೈಲಿನ ಒಳಗಡೆ ಅಕ್ರಮವಾಗಿ, ಮಾದಕ ವಸ್ತುಗಳ ಪೂರೈಕೆ, ಕಾನೂನು ಬಾಹಿರವಾಗಿ ಕೈದಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡುವುದು ಹಾಗೂ, ಮೊಬೈಲ್ ಬಳಕೆಯಂಥ ಅಕ್ರಮ ಚಟುವಟಿಕೆಗಳಿಗೆ, ಅಂಕುಶ ಹಾಕಬೇಕು ಎಂದು ಸೂಚಿಸಿದ್ದೇನೆ. ಇತ್ತೀಚೆಗೆ, ಜೈಲಿನೊಳಗೆ ಫುಟ್ ಬಾಲ್ ನಲ್ಲಿ, ಮಾದಕ ವಸ್ತುಗಳನ್ನು ತುಂಬಿಸಿ, ಜೈಲಿನೊಳಕ್ಕೆ ಎಸೆದ ಘಟನೆ ಬಗ್ಗೆ, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಜೈಲಿಗೆ ಕರೆತರಲಾದ ವ್ಯಕ್ತಿಯೊಬ್ಬ ಕಾಲಿಗೆ ಬ್ಯಾಂಡೇಜ್ ಜೊತೆ ಕಟ್ಟಿಕೊಂಡಿದ್ದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಈ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ಕೈದಿಗಳ ಭೇಟಿಗೆ ಬರುವ ಕುಟುಂಬ ಸದಸ್ಯರ ಹಾಗೂ ಇತರ ರಿಂದ ಅಕ್ರಮವಾಗಿ ಹಣ ವಸೂಲಿ ಆಗುತ್ತಿದೆ ಎಂಬ ಬಗ್ಗಯೂ ಪ್ರಸ್ತಾಪಿಸಲಾಗಿದೆ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು ಎಂದು ಅರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ರಾಜ್ಯ ಕಾರಾಗೃಹಗಳ ಮುಖ್ಯಸ್ಥ ಅಲೋಕ್ ಮೋಹನ್, ಕೇಂದ್ರ ಕಾರಾಗೃಹ ಮುಖ್ಯಸ್ಥ ರಮೇಶ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply