ಲಾಕ್ ಡೌನ್ ಮುಂದೂಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಅಶೋಕ್

ಉಡುಪಿ: ಈಗಾಗಲೇ ಲಾಕ್ ಡೌನ್ ಮುಂದೂಡಿಕೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ. ಲಾಕ್ ಡೌನ್ ಮಾಡಿರುವಂತಹ ರಾಜ್ಯಗಳಾದ ದೆಹಲಿ, ಮುಂಬಯಿಯಲ್ಲಿ ಕೊರೊನಾ ಪಾಸೀಟಿವಿಟಿ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ಲಾಕ್ ಡೌನ್ ಮುಂದುವರೆಸ ಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನು ಕರ್ನಾಟಕದಲ್ಲಿ ಅಂತಿಮ ನಿರ್ಧಾರ ಮುಖ್ಯ ಮಂತ್ರಿಗಳದ್ದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಇಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಜನರು ಬೆಂಗಳೂರಿನಂತಹ ನಗರ ಪ್ರದೇಶದಿಂದ ಹಳ್ಳಿಗಳ‌ ಕಡೆ ತೆರಳುತ್ತಿದ್ದಾರೆ.ಇದರಿಂದ ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಯೋಜನೆಯನ್ನ ತಂದಿದ್ದೇನೆ. ಪ್ರತಿ ತಾಲೂಕಿನಲ್ಲಿ ಸುಮಾರು 15 ಜನ ಡಾಕ್ಟರ್ ಹಾಗೂ 40 ಜನ ನರ್ಸ್ ಸ್ಟಾಫ್ ಹಾಗೂ ಒಂದೊಂದು ಜಿಲ್ಲೆಗಳಿಗೆ ಸುಮಾರು 15 ವಾಹನಗಳನ್ನ ಕಳುಹಿಸಿ ಕೊಡುವಂತದ್ದು ಮಾಡಲಾಗಿದೆ. ರೋಗಿಗಳನ್ನ ಪರೀಕ್ಷಿಸಿ ಅವರನ್ನ ತಾಲೂಕು ಆಸ್ಪತ್ರೆಗಳಿಗೆ ಅಡ್ಮಿಟ್ ಮಾಡುವಂತದಕ್ಕೆ ಈಗ ಚಾಲನೆ‌ ಕೊಡಲಾಗಿದೆ ಎಂದರು.

 ಇದನ್ನು ಬೇರೆ ಬೇರೆ ಜಿಲ್ಲೆಗಳಿಗೆ ಮಾಡಿ ಎಂದು ಆದೇಶ ಕೊಡುತ್ತೇನೆ. ಪಿಜಿ ವಿದ್ಯಾರ್ಥಿಗಳು, ಅಂತಿಮ ವರ್ಷದ ಎಮ್ ಬಿ ಬಿ ಎಸ್ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನ ಈ ಪ್ರಾಜೆಕ್ಟ್ ಗೆ ಸೇರಿಸಿಕೊಳ್ಳಲಾಗುವುದು. ಸುಮಾರು 1800 ಕ್ಕೂ ಹೆಚ್ಚು ಡಾಕ್ಟರ್ ಗಳು ಈಗಾಗಲೇ ಬಂದಿದ್ದಾರೆ. ಇನ್ನು ಈ ಯೋಜನೆಗೆ ಆರೋಗ್ಯ ಸಚಿವ ಸುಧಾಕರ್ ಅವರೂ ಕೂಡಾ ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು.

 ಈ ಡಾಕ್ಟರ್ ಗಳು ಹಳ್ಳಿಗಳಿಗೆ ಹೋಗಿ ತಪಾಸಣೆ ಮಾಡಬೇಕು.‌ಅವರಿಗೆ ತಿಂಗಳಿಗೆ ಬೇಕಾಗುವಂತಹ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಎಲ್ಲವನ್ನ ನೀಡಲಾಗುತ್ತದೆ.ಅವರು ಒಂದು ಹಳ್ಳಿಗೆ ಕಡ್ಡಾಯವಾಗಿ ವಾರದಲ್ಲಿ ಮೂರು ಬಾರಿ ಭೇಟಿ ನೀಡಿ ಚಿಕಿತ್ಸೆ ನೀಡಬೇಕು.ಈಗಾಗಲೇ ಬೆಂಗಳೂರು ಗ್ರಾಮಾಂತರಕ್ಕೆ ಈ ಆದೇಶ ನೀಡಲಾಗಿದೆ. ಇನ್ನು ಎಲ್ಲಾ ಜಿಲ್ಲೆಗಳಿಗೆ ಈ ಆದೇಶ ನೀಡುವಂತೆ ಸೂಚಿಸಲಾಗುವುದು ಎಂದರು.

 
 
 
 
 
 
 
 
 
 
 

Leave a Reply