ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದ 1 ವರ್ಷ ಮಗು!

ಒಂದು ವರ್ಷದ ಮಗುವೊಂದು ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ. ಸದ್ಯ ಮಗು ಜೀವಂತವಾಗಿದ್ದು, 16 ರಿಂದ 18 ಅಡಿ ಆಳದಲ್ಲಿ ಸಿಕ್ಕಿಕೊಂಡಿದೆ ಎನ್ನಲಾಗಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. 

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಜಮೀನಿನಲ್ಲಿ ಬುಧವಾರ ಸಂಜೆ 5 ಗಂಟೆಗೆ 1 ವರ್ಷದ ಮಗು ಕೊಳವೆ ಬಾವಿ ಪಾಲಾಗಿದ್ದು, ಜೀವನ್ಮರಣದ ಮಧ್ಯೆ ಹೋರಾಡುತ್ತಿದೆ.

ಗ್ರಾಮದ ಸಾತ್ವಿಕ್‌ ಸತೀಶ ಮುಜಗೊಂಡ ಕೊಳವೆ ಬಾವಿಯಲ್ಲಿ ಸಿಲುಕಿ, ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಮಗು. ಪ್ರತ್ಯೇಕ ಗ್ರಾಮಗಳಲ್ಲಿ ಕೆಲ ವರ್ಷಗಳ ಹಿಂದೆ ಎರಡು ಹಸುಳೆಗಳು ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟ ಸುದ್ದಿ ಹಸಿರಾಗಿರುವಾಗಲೇ ಮತ್ತೊಂದು ಘಟನೆ ನಡೆದಿದೆ.

ಮಂಗಳವಾರವಷ್ಟೇ ಮುಜಗೊಂಡ ಕುಟುಂಬದವರು ಕೊಳವೆ ಬಾವಿ ಕೊರೆಸಿದ್ದರು. ಆದರೆ ನೀರು ಬಾರದ್ದರಿಂದ ಬೇಸತ್ತು ಕೊಳವೆ ಬಾವಿ ಮುಚ್ಚುವುದನ್ನು ನಿರ್ಲಕ್ಷಿಸಿದ್ದರು. 1 ವರ್ಷದ ಮಗು ಸಾತ್ವಿಕ್‌ ಮನೆಯಿಂದ ಆಟವಾಡುತ್ತಾ, ಕೊಳವೆ ಬಾವಿ ಕಡೆಗೆ ಹೋಗಿದೆ. ಅಲ್ಲಿ ಆಕಸ್ಮಿಕ ಕೊಳವೆ ಬಾವಿಗೆ ಬಿದ್ದಿದ್ದು ಆತಂಕ ಇಮ್ಮಡಿಸುವಂತೆ ಮಾಡಿದೆ.

ಬಾಲಕ ಕೊಳವೆ ಬಾವಿ ಪಾಲಾದ ಸುದ್ದಿ ತಿಳಿಯುತ್ತಿದ್ದಂತೆಯೇ, ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ, ಜಿಲ್ಲಾಆರೋಗ್ಯ ಇಲಾಖೆ ಅಧಿಕಾರಿಗಳು ಲಚ್ಯಾಣಕ್ಕೆ ತೆರಳಿ, ಕೊಳವೆ ಬಾವಿ ಸುತ್ತಲೂ ಜೆಸಿಬಿಗಳಿಂದ ಅಗೆಯುವ ಕಾರ್ಯಾಚರಣೆ ಆರಂಭಗೊಂಡಿದೆ.

500 ಅಡಿ ಆಳವಿರುವ ಬೋರ್‌ವೆಲ್‌ನಿಂದ 16-18 ಅಡಿಯಲ್ಲಿ ಸಿಕ್ಕಿರುವ ಮಗುವನ್ನು ಜೀವಂತ ಹೊರತೆಗೆಯಲು ಪೊಲೀಸರು, ಅಗ್ನಿಶಾಮಕ ಠಾಣೆ ಅಧಿಕಾರಿಗಳು ಭರದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈಗಾಗಲೇ ಕ್ಯಾಮೆರಾ ಕಣ್ಣಿನಿಂದ ಕೊಳವೆ ಬಾವಿಯಲ್ಲಿ ನೋಡಲಾಗಿ, ಮಗು ಜೀವಂತವಿದ್ದು, ಮಗುವಿಗೆ ಪ್ರಾಣವಾಯು (ಆಕ್ಸಿಜನ್‌) ಪೂರೈಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಗು ಕೊಳವೆ ಬಾವಿಗೆ ಬಿದ್ದು, ಅದರಡಿ ಸಿಲುಕಿದ ಸುದ್ದಿ ತಿಳಿದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಬೋರ್‌ವೆಲ್‌ನಲ್ಲಿ ಸಿಲುಕಿರುವ ಸಾತ್ವಿಕ್‌ನನ್ನು ಜೀವಂತವಾಗಿ ಹೊರ ತೆಗೆಯಿರಿ ಎಂದು ಆತನ ತಾಯಿ, ರಕ್ಷಣಾ ಕಾರ್ಯಾಚರಣೆಯವರಿಗೆ ಅಂಗಲಾಚುತ್ತಿರುವ ದೃಶ್ಯ ಮನಕಲಕುವಂತಿದೆ.

2009ರಲ್ಲಿ ಇಂಡಿ ತಾಲೂಕಿನ ದೇವರನಿಂಬರಗಿ ಹಾಗೂ ವಿಜಯಪುರ ತಾಲೂಕಿನ ದ್ಯಾಬೇರಿ 2014ರಧಿಲ್ಲಿಗ್ರಾಮಗಳಲ್ಲಿ, 2014 ರಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿಯೂ ಇಂಥದ್ದೇ ಘಟನೆ ನಡೆದಿದ್ದವು. ಆದರೆ ಕೊಳವೆ ಬಾವಿಯಲ್ಲಿ ಸಿಲುಕಿದ ಈ ಪ್ರಕರಣಗಳಿಗೆ ವಾರಗಟ್ಟಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಮಕ್ಕಳನ್ನು ಜೀವಂತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಗೆ ಸಾಧ್ಯವಾಗಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಮಗುವೊಂದು ಪಾಳು ಕೊಳವೆ ಬಾವಿಗೆ ಬಿದ್ದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜತೆಗೆ ಮಗುವನ್ನು ರಕ್ಷಿಸಲು ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದು ಆ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹಾಗೂ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು, ಸೂಕ್ತ ನಿರ್ದೇಶನ ನೀಡಿದರು. ಮಗುವನ್ನು ರಕ್ಷಿಸಲು ನಿಗಾ ವಹಿಸಿ ಕಲಸ ಮಾಡಲು ಅವರು ಸೂಚಿಸಿದ್ದು, ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

 
 
 
 
 
 
 
 
 
 
 

Leave a Reply