ಸರಕಾರ ಕರಾಟೆ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಿ ಪ್ರೋತ್ಸಾಹಧನ ಒದಗಿಸಿ: ವಾಮನ್ ಪಾಲನ್ ಅಂಬಲಪಾಡಿ ಮನವಿ

ಕರಾಟೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಅತ್ಯುತ್ತಮ ಕ್ರೀಡೆಯಾಗಿದೆ. ಶಾಲಾ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಎಲ್ಲ ವಯೋಮಾನದ ಜನತೆ ಆರೋಗ್ಯದ ಕಾಳಜಿಯಿಂದ ಕರಾಟೆ ಅಭ್ಯಾಸದಲ್ಲಿ ನಿರತರಾಗಿರುವುದು ವಾಸ್ತವ. ಆದರೆ ಕಠಿಣ ಪರಿಶ್ರಮದಿಂದ ಹಾಗೂ ಬದ್ಧತೆಯಿಂದ ಕರಾಟೆ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕರಾಟೆ ಶಿಕ್ಷಕರು ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡಿರುವ ಸಮಯೋಚಿತ ಲಾಕ್ ಡೌನ್ ನಿರ್ಧಾರದಿಂದ ಸಂಕಷ್ಟಕ್ಕೆ ಒಳಗಾಗಿದ್ದು ಜೀವನೋಪಾಯಕ್ಕಾಗಿ ಹರಸಾಹಸ ಪಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಕರಾಟೆ ಶಿಕ್ಷಕರು ಕೇವಲ ಕರಾಟೆ ತರಗತಿಗಳಿಗೆ ಮಾತ್ರ ಸೀಮಿತವಾಗಿರದೆ ಸರಕಾರದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖಾಂತರ ನಿಯಮಿತವಾಗಿ ನಡೆಸಲ್ಪಡುವ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕರಾಟೆ ಸ್ಪರ್ಧಾ ಕೂಟಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿರುವುದು ವಾಸ್ತವ. ಆದರೆ ಸರಕಾರ ಘೋಷಿಸಿರುವ ಕೋವಿಡ್ ಪ್ಯಾಕೇಜ್ ಗಳಲ್ಲಿ ಕರಾಟೆ ಶಿಕ್ಷಕರ ಬಗ್ಗೆ ಯಾವುದೇ ಸೌಲಭ್ಯವನ್ನು ನೀಡದಿರುವುದು ಕರಾಟೆ ಶಿಕ್ಷಕರಿಗೆ ಅತೀವ ನಿರಾಸೆಯನ್ನುಂಟುಮಾಡಿದೆ.

ಈ ಬಗ್ಗೆ ವಿವಿಧ ಮನವಿಗಳ ಮೂಲಕ ಸರಕಾರದ ಗಮನವನ್ನು ಸೆಳೆಯಲಾಗಿದೆ. ಆದರೆ ಕೊರೋನಾ ಮೊದಲ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಸರಕಾರ ಘೋಷಿಸಿರುವ ಪ್ಯಾಕೇಜ್ ಗಳಲ್ಲಿ ಕರಾಟೆ ಶಿಕ್ಷಕರಿಗೆ ಯಾವುದೇ ಸಹಾಯಧನವನ್ನು ನೀಡದಿರುವುದು ಕರಾಟೆ ಶಿಕ್ಷಕರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಕರಾಟೆ ಶಿಕ್ಷಕ ವೃತ್ತಿಯನ್ನೇ ಜೀವನೋಪಾಯಕ್ಕೆ ಅವಲಂಬಿಸಿರುವ ಕರಾಟೆ ಶಿಕ್ಷಕರಿಗೆ ಸರಕಾರ ಶೀಘ್ರ ಪ್ರೋತ್ಸಾಹಧನವನ್ನು ಮಂಜೂರು ಮಾಡುವ ಮೂಲಕ ಆರೋಗ್ಯದ ಕಾಳಜಿಯಿಂದ ಸೇವೆ ಸಲ್ಲಿಸುತ್ತಿರುವ ಕರಾಟೆ ಶಿಕ್ಷಕರಿಗೆ ಸಹಾಯ ಹಸ್ತವನ್ನು ಚಾಚಿ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕರಾಟೆ ಮುಖ್ಯ ಶಿಕ್ಷಕ ಹಾಗೂ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಕೋಶಾಧಿಕಾರಿ ವಾಮನ್ ಪಾಲನ್ ಅಂಬಲಪಾಡಿ ಸರಕಾರವನ್ನು ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply