ಕೆಎಸ್ಆರ್ಟಿಸಿ ಬಸ್ – ಲಾರಿ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ!

ಚಿತ್ರದುರ್ಗದ ಚಳ್ಳಕೆರೆ ತಾಲೂಕು ಕೇಂದ್ರದಿಂದ ಹಿರಿಯೂರಿಗೆ ಸಾಗುವ ಬೀದರ್ – ಶ್ರೀರಂಗಪಟ್ಟಣ ರಸ್ತೆಯಲ್ಲಿಅಂದರೆ ರಾಷ್ಟ್ರೀಯ ಹೆದ್ದಾರಿ ನಂಬರ್ 44ರಲ್ಲಿ ಕೆಎಸ್ ಆರ್ ಟಿಸಿ ಹಾಗೂ ಲಾರಿಯೊಂದರ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸೆ. 11ರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಕೆಎಸ್ ಆರ್ ಟಿಸಿ ಹಾಗೂ ಲಾರಿಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಇನ್ನು ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಬರುತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಇದರ ಹಿಂದೆ ಬಂದ ಲಾರಿ ಓವರ್ ಟೇಕ್ ಮಾಡುವಾಗ ಈ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಬಸ್ ನ ಮುಂದಿನ ಸೀಟುಗಳಲ್ಲಿ ಕುಳಿತಿದ್ದ ನಾಲ್ವರು ಮೃತಪಟ್ಟಿದ್ದಾರೆ. ಹಾಗೂ ಮೃತರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು, ಅವರನ್ನು ಬೆಂಗಳೂರು ಮೂಲದ ಪಾರ್ವತಮ್ಮ (45) , ಮರಾಯಚೂರಿನ ಮಸ್ಕಿ ಮೂಲದ ರಮೇಶ್(40)‌ ಎಂದು ಗುರುತಿಸಲಾಗಿದೆ. ಮತ್ತು ಬಸ್ ನಲ್ಲಿದ್ದ ಆರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಅವರೆಲ್ಲರನ್ನೂ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಳ್ಳಕೆರೆಯಿಂದ ಬಳ್ಳಾರಿಯ ಕಡೆಗೆ ಹೋಗುವ ಹೆದ್ದಾರಿಯ ಅಗಲೀಕರಣ ಪೂರ್ತಿಗೊಂಡಿದ್ದು, ಬೀದರ್ – ಶ್ರೀರಂಗಪಟ್ಟಣ ನಡುವಿನ ಹೆದ್ದಾರಿಯ ಅಗಲೀಕರಣ ಮಾತ್ರ ಒಂದೆರಡು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೋಗುವ ಇದೇ ಹೆದ್ದಾರಿಯ ಅಗಲೀಕರಣ ಮಂದಗತಿಯಲ್ಲಿ ಸಾಗುತ್ತಿದ್ದು, ಅಲ್ಲಲ್ಲಿ, ಡಬಲ್ ರೋಡ್ ಆಗಿದೆ. ಇನ್ನೂ ಕೆಲವು ಕಡೆಗೆ ಸಿಂಗಲ್ ರಸ್ತೆಯೇ ಇದ್ದು, ಅಲ್ಲಿನ್ನೂ ಕಾಮಗಾರಿ ನಡೆಯುತ್ತಲಿದೆ.

ಹಾಗಾಗಿ ಸಿಂಗಲ್ ರಸ್ತೆಯಿರುವ ಕಡೆಗೆ ದ್ವಿಮುಖ ಸಂಚಾರ ಇದ್ದು, ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೋಗುವ ಮಾರ್ಗದಲ್ಲಿ ಗೊಲ್ಲಹಳ್ಳಿ ಬಳಿ ಸಿಂಗಲ್ ರಸ್ತೆಯಿದೆ. ಹಾಗೂ ಅದೇ ರಸ್ತೆಯ ಮೂಲಕ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸು, ಲಾರಿ ನಡುವೆ ಈ ಅಪಘಾತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಬಸ್ಸಿನ ಎಡಬದಿಯೂ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಲ್ಲಿಯೇ ಕುಳಿತಿದ್ದ ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ವಿಚಿತ್ರವೆಂದರೆ ಲಾರಿಯವನು ಓವರ್ ಟೇಕ್ ಮಾಡುವಾಗ ಬಸ್ಸಿನ ಎಡಭಾಗಕ್ಕೆ ಗುದ್ದಿಕೊಂಡು ಹೋಗಿದ್ದಾನೆಂದು ಹೇಳಲಾಗಿದ್ದು, ಆದರೆ ಮತ್ತೊಂದು ಅಂದಾಜಿನ ಪ್ರಕಾರ ಬಸ್ಸಿನ ಚಾಲಕನೇ ಲಾರಿಯನ್ನು ಗುದ್ದಿಕೊಂಡು ಹೋಗಿರಬಹುದು ಎನ್ನಲಾಗಿದೆ. ಯಾಕೆಂದರೆ ಅಪಘಾತ ನಡೆದ ತಕ್ಷಣವೇ ಬಸ್ಸು ಅಲ್ಲಿಯೇ ನಿಲ್ಲಬೇಕಿತ್ತು. ಆದರೆ ಬಸ್ಸು ಅಲ್ಲಿಂದ ಸುಮಾರು 1 ಕಿ.ಮೀ.ವರೆಗೆ ಸಾಗಿಕೊಂಡು ಬಂದಿದ್ದು, ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಲಾರಿಯ ಚಾಲಕ ಕೂಡ ಅಪಘಾತ ನಡೆದ ಸ್ಥಳದಿಂದ ಲಾರಿಯೊಂದಿಗೆ ನಾಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈ ಕೋನದಿಂದ ಆಲೋಚಿಸಿದರೆ ಲಾರಿಯವನದ್ದೇ ತಪ್ಪಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಈಗಾಗಲೇ ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಲಾರಿ ಹಾಗೂ ಅದರ ಚಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸೂಕ್ತ ತನಿಖೆಯ ನಂತರ ಅಪಘಾತ ಹೇಗಾಯಿತು ಎಂಬ ಕಾರಣ ಇನ್ನಷ್ಟೇ ಬಯಲಾಗಬೇಕಿದೆ.

Leave a Reply