ಆಟಿಕೆಯೇ ದೀಟಿಕೆಯಾಯ್ತು ಪೃಥ್ವೀಶ್ ಗೆ✒️ರಾಜೇಶ್ ಭಟ್ ಪಣಿಯಾಡಿ

ಏನ್ರೀ ಇದು … ಒಂದು ಸಣ್ಣ ಆಟಿಕೆ ಇಟ್ಟುಕೊಂಡು ರೆಕಾರ್ಡ್ ಮೇಲೆ ರೆಕಾರ್ಡ್ ಮಾಡ್ತಾ ಇದ್ದಾನೆ ಈ ಹುಡುಗ. ಆದ್ರೆ ವರ್ಷ ಇನ್ನೂ 25 ಆಗಿಲ್ಲ.. ಈಗ್ಲೇ ವಿಶ್ವ ದಾಖಲೆ ಮಾಡ್ತಾ ಇದ್ದಾನೆ. ಇದೇ ನೋಡಿ ನಮ್ಮ ಕರಾವಳಿಯ ಯುವಕರ ತಾಕತ್ತು… ಸಾಧನೆಗೆ ಮಿತಿ ಇಲ್ಲ ಸೃಜನಶೀಲತೆಗೆ ಕೊನೆ ಇಲ್ಲ. ಈ ಯುವಕನ ಮಟ್ಟಿಗೆ ಅದು ನಿಜ. 2 ಗಿನ್ನೆಸ್ ವಿಶ್ವದಾಖಲೆ, 3 ಏಷ್ಯಾ ದಾಖಲೆ ಮತ್ತು1 ಲಿಮ್ಕಾ ದಾಖಲೆ ಮಾಡಿದ ನಮ್ಮೂರ ಯುವ ಸರದಾರ ಪೃಥ್ವೀಶ್ ಭಟ್.

ಮೊಬೈಲ್ ನಲ್ಲಿ ಪಬ್ಜೀ ಯಂತ ಆಟಗಳಿಂದ ದಿನವನ್ನು ಹಾಳುಗೆಡವುತ್ತಿರುವ ಯುವ ಶಕ್ತಿ ರೂಬಿಕ್ ಕ್ಯೂಬ್ ನಂತಹ ನೆನಪು ಶಕ್ತಿಯ, ಇಂದ್ರಿಯ ಹಾಗೂ ಮನಸ್ಸಿನ ಹೊಂದಾಣಿಕೆ , ಏಕಾಗ್ರತೆ, ಚುರುಕುತನ, ತಾಳ್ಮೆ, ಸಮಸ್ಯೆ ಬಿಡಿಸುವ ಜಾಣ್ಮೆ, ತಲೆ ಓಡಿಸುವ ಕಲೆಗಳಿಗೆ ಒರೆ ಹಚ್ಚುವ ಆಟವಾಡುವುದು ಸೂಕ್ತ ಎನ್ನುವುದು ಈ ಯುವ ಪ್ರತಿಭೆಯ ಆಂಬೋಣ.

ಈ ರೂಬಿಕ್ ಕ್ಯೂಬ್ ಮೈಂಡ್ ಗೇಮ್ಸ್ ಗೆ ಬಳಸುವ ಆಟಿಕೆಯಾಗಿದ್ದು 6 ಬಣ್ಣಗಳನ್ನು ಬಳಸಿ ಹಲವು ವಿಧದ ಕಲಾಕೃತಿಗಳನ್ನು ಸೃಷ್ಟಿಸಬಹುದಾಗಿದೆ. ಇಂತಹ ಕ್ಯೂಬ್ ಗಳ ಬಣ್ಣಗಳನ್ನು ಅತೀ ಕಡಿಮೆ ಸಮಯದಲ್ಲಿ ಜೋಡಿಸಿ ದೇಶ ವಿದೇಶಗಳ ಮಹಾನ್ ವ್ಯಕ್ತಿಗಳ ಬೃಹತ್ ಕಲಾಕೃತಿ ಮಾಡುವ ನಿಷ್ಣಾತ ಈತ.

ಇಂತಹ ಇವರ ಸಾವಿರಾರು ಕಲಾಕೃತಿಗಳಲ್ಲಿ ಪ್ರಮುಖರಾದ ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂರಂತ ವಿಶ್ವಮಾನ್ಯರು, ಅಮಿತಾ ಬಚ್ಚನ್, ಯಶ್ ರಂತಹ ಚಿತ್ರ ತಾರೆಯರು, ಪೇಜಾವರಶ್ರೀ, ಡಾ| ವೀರೇಂದ್ರ ಹೆಗ್ಗಡೆ ಮುಂತಾದ ಧಾರ್ಮಿಕ ಗುರುಗಳು, ನರೇಂದ್ರಮೋದಿ ಮುಂತಾದ ಪ್ರಬುದ್ಧ ರಾಜಕಾರಣಿಗಳು , ವಿರಾಟ್ ಕೊಯ್ಲಿ , ಮಹೇಂದ್ರ ಸಿಂಗ್ ದೋನಿ ಮುಂತಾದ ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ.

ತನ್ನ ಆಪ್ತ ಮಿತ್ರರ ಜೊತೆ 15 ಅಡಿ ಉದ್ದ – 10 ಅಡಿ ಅಗಲದ 4500 ರೂಬಿಕ್ ಕ್ಯೂಬ್ ಜೋಡಣೆಯಲ್ಲಿ ಒಂದು ಬದಿ ಹಾಸ್ಯಲೋಕದ ಅಧಿಪತಿಗಳಾದ ಚಾರ್ಲಿ ಚಾಪ್ಲಿನ್ ಇನ್ನೊಂದು ಬದಿ ಮಿಸ್ಟರ್ ಬೀನ್ ರ ಕಲಾಕೃತಿ ಅತ್ಯಂತ ಗೌರವ ತಂದ ವಿಶ್ವ ದಾಖಲೆಯಾಯ್ತು. ಸುವರ್ಣ, ಸೋನಿ, ಕಲರ್ಸ್ ಮುಂತಾದ ವಾಹಿನಿಗಳ ಟಿವಿ ರಿಯಾಲಿಟಿ ಶೋಗಳು, ಒಂದಷ್ಟು ದೈನಿಕಗಳು, ಸಂದರ್ಶನಗಳು, ವೆಬ್ ಸೈಟ್, ಯೂಟ್ಯೂಬ್ ಚ್ಯಾನಲ್ ಗಳು ಇವರೊಳಗಿನ ಕಲಾವಿದನಿಗೆ ಕನ್ನಡಿ ಹಿಡಿದಿದೆ..

ಈ ಒಂದು ಸಣ್ಣ ಆಟಿಕೆಯಿಂದ ಮನೆ ತುಂಬುವಷ್ಟು ಪುರಸ್ಕಾರಗಳನ್ನು ಪಡೆದು ಅವನ ಮನ ತುಂಬಿದೆ. ಛಾತ್ರ ಪುರಸ್ಕಾರ, ಯುವ ಪ್ರತಿಭೆ , ಡಾ.ಶಿವರಾಮ ಕಾರಂತ” ವಿದ್ಯಾರ್ಥಿ ಗೌರವ” ಪ್ರಶಸ್ತಿ, ಅರಳುಮಲ್ಲಿಗೆ, ಭಾವನಾ ಪುರಸ್ಕಾರ, ಪ್ರೇರಣಾ ಪುರಸ್ಕಾರ, ಪಲ್ಲವ ಪುರಸ್ಕಾರ ಹೀಗೆ ಪಟ್ಟಿ ಮಾಡಿ ಲೆಕ್ಕ ಇಡುವುದೇ ಈತನಿಗೆ ಕಷ್ಟದ ಕೆಲಸ. “ರೂಬಿಕ್ ಮ್ಯಾಜಿಕ್ ” ಎಂಬ ಪುಸ್ತಕ ಬರೆದು ಒಬ್ಬ ಲೇಖಕನಾಗಿಯೂ ಗುರುತಿಸಿಕೊಂಡಿದ್ದಾನೆ.

ಪೃಥ್ವಿ ಮೊಸಾಯಿಕ್ ಮೂಲಕ ಇವರು ಬಹಳಷ್ಟು ಮಂದಿಗೆ ಈ ಕಲೆಯನ್ನು ಧಾರೆ ಎರೆಯುತ್ತಿ ದ್ದಾನೆ. ಪ್ರಸನ್ನಾ ಮತ್ತು ಪ್ರಸಾದ ದಂಪತಿಗಳ ಹೆಮ್ಮೆಯ ಕುವರ ಈ ಪೃಥ್ವೀಶ್ ಭಟ್ B.E., M.E. ಪದವೀಧರನಾಗಿದ್ದು , ಬೆಂಗಳೂರಿನಲ್ಲಿ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದವನು ಪುಸ್ತುತಃ ತನ್ನೂರಾದ ಉಡುಪಿಯ ಪೇತ್ರಿಯಲ್ಲಿ ಪೃಥ್ವಿಷನ್ ಎನ್ನುವ ಸಂಸ್ಥೆ ಸ್ಥಾಪಿಸಿದ್ದು ಕ್ಯೂಬ್ ಟ್ರೈನಿಂಗ್ ಹಾಗೂ ಸೈಬರ್ ಸೆಕ್ಯೂರಿಟಿ ಟ್ರೈನಿಂಗ್ ನೀಡುತ್ತಿದ್ದಾನೆ.

ಇದುವರೆಗೆ 15,000 ಕ್ಕೂ ಮಿಕ್ಕಿ ಮಂದಿಗೆ ತರಬೇತಿ ನೀಡಿರುವುದು ಹೆಮ್ಮೆಯ ವಿಷಯ.
ಈ ಯುವ ಪ್ರತಿಭೆಯ ಮಹಾನ್ ಸಾಧನೆಗೆ ಶಿರಬಾಗಿ ಸಂಸ್ಕೃತಿ ವಿಶ್ವಪ್ರತಿಷ್ಠಾನ ಮತ್ತು ಇ- ಸಮೂದಾಯ ಉಡುಪಿ ಇವನನ್ನು ಗುರುತಿಸಿ, ಈತನ ಜೊತೆ ಮುಕ್ತ ಸಂವಾದ ಗೈಯುವುದರ ಮೂಲಕ ಗೌರವಪೂರ್ಣವಾಗಿ ಅಭಿನಂದಿಸುತ್ತದೆ.

ಇದೇ ಬರುವ 19 ರಂದು ಸಂಜೆ 6 ಗಂಟೆಗೆ samskruthi vishwa you tube ಚಾನಲ್ ನಲ್ಲಿ ವಿಶ್ವ ಕಲಾ ಸಂಭ್ರಮದಡಿಯಲ್ಲಿ ಪೃಥ್ವೀಶ್ ನ ಪ್ರೌಡಿಮೆಯನ್ನು ವೀಕ್ಷಿಸಲು ಮರೆಯಬೇಡಿ.

_

 
 
 
 
 
 
 
 
 
 
 

Leave a Reply