ಸಂದಿಗ್ದ ಸಮಯದ ಹೊಸ ಮಾದರಿಯ ಪರೀಕ್ಷೆಗೆ ಆಲ್ ದಿ ಬೆಸ್ಟ್~✍️ ರಾಘವೇಂದ್ರ ಪ್ರಭು,ಕವಾ೯ಲು

ವಿದ್ಯಾಥಿ೯ಗಳೇ ನಿಮಗೆ ಮುಂದೆ ಬರುವ ದಿನಗಳು ನಿಮಗೂ ನಿಮ್ಮ ಪಾಲಕರಿಗೂ ಸ್ವಲ್ಪ ಕಷ್ಟದ ದಿನಗಳು. ಆದರೆ ಧೈರ್ಯಗೆಡಬೇಡಿ. ಸವಾಲನ್ನು ಅವಕಾಶವಾಗಿ ಸ್ವೀಕರಿಸಿ. ಬದುಕು ಬವಣೆಗಳ ಸಾಗರ,ಅದನ್ನು ಕವಡೆ ಹಾಕಿ ಪ್ರಶ್ನಿಸುವ ಅಗತ್ಯ ಇಲ್ಲ. ನಿಮ್ಮ ಬದುಕನ್ನು ಜ್ಯೋತಿಷಿಗಳ ಕೈಯಲ್ಲಿ ಇಡಬೇಡಿ. ನಿಮ್ಮ ಬದುಕಿಗೆ, ನಿಮ್ಮ ಕುಟುಂಬಕ್ಕೆ ನೀವೇ ಜ್ಯೋತಿಯಾಗಿ.ಬದುಕನ್ನು ಪ್ರೀತಿಸಿ ಮುಂದುವರೆಯಿರಿ.

ನಮ್ಮನ್ನು ವಿನಾಶದ ಅಂಚಿನತ್ತ ಮುಖಮಾಡಿಸಿದ ಬದುಕಿನ ಕಷ್ಟಗಳನ್ನು ಪರಿಚಯ ಮಾಡಿಸುತ್ತಿರುವ ವೈರಾಣು ಬದುಕಿನ ನೆಲೆಗಟ್ಟನ್ನು ಸಂಪೂರ್ಣ ವಾಗಿ ಅಲ್ಲಾಡಿಸಿದೆ. ಹೊಸ ಬದುಕು ಕಟ್ಟಬೇಕು. ಏನಿಲ್ಲಾ ಅಂದರೂ ಈ ಮಹಾಮಾರಿ ನಮ್ಮ ಹತ್ತು ವರ್ಷ ನುಂಗಿಬಿಟ್ಟಿದೆ. ಅಲ್ಲದೆ ಶೋಕಿ ಸಾಗರದಲ್ಲಿ ಮುಳುಗಿರುವ ಯುವ ಜನಾಂಗಕ್ಕೆ ಹೊಸ ಬದುಕಿನ ಅರಿವು ಮೂಡಿಸಿದೆ. ಮುಂದೆ ಬರುವ ದಿನಗಳ ಭಯಾನಕತೆಯನ್ನು ಎದುರಿಸುವ ಧೈರ್ಯ ತುಂಬುವ ಕೆಲಸ ನಮ್ಮಿಂದಾಗಬೇಕು.

ಪಾಲಕರು ಪಡಬಾರದ ಕಷ್ಟಗಳನ್ನು ಎದುರಿಸಿ ಇದೀಗ ಸುಖದ ಮುಖ ಕಂಡವರು. ನೀವು, ಕಷ್ಟ ಎನ್ನುವುದು ಅಪ್ಪನೆಂಬ ಜೀವಕ್ಕೆ ಮಾತ್ರ ಸೀಮಿತ ನಮಗಲ್ಲ ,ಎಂಬಂತೆ ಹುಟ್ಟಿಬಂದವರು. ಆದರೆ ಮುಂದಿನ ದಿನಗಳಲ್ಲಿ ಹಾಗಾಗಲ್ಲ. ವಿದ್ಯೆ ಯೊಂದಿಗೆ ಬದುಕುವ ಕಲೆ ಕಲಿಯುವ ಅಗತ್ಯತೆ ಬಹಳಷ್ಟಿದೆ.ಈ ಕಲೆಯನ್ನು ನಾವೆಲ್ಲರೂ ಕಲಿಯಬೇಕು.

ಬದುಕನ್ನು ಸರಳಗೊಳಿಸೋಣ :- ಮಧ್ಯಮ ವರ್ಗದ ಜನರು ಹೇಗೆ ಬದುಕಿದರೆ ಬದುಕು ಭದ್ರವಾಗಲು ಸಾಧ್ಯ ಎಂಬುದನ್ನ ಯೋಚಿಸಿದಾಗ, ವಾರಕ್ಕೆ ಹೆಚ್ಚಿನ ದಿನ ಮೀನು ಮಾಂಸ ಅನ್ನುವವರು ಸೊಪ್ಪು ತರಕಾರಿಗೆ ಒಗ್ಗಿಕೊಂಡರೆ ಆರೋಗ್ಯ ನಮ್ಮ ಅಂಗೈಯಲ್ಲಿ ನಲಿದಾಡುತ್ತೆ.

ನಮ್ಮ ಅಂಗೈಯಗಲದ ತೋಟದಲ್ಲೂ ಒಂದಿಷ್ಟು ತರಕಾರಿ ಬೆಳೆಯೋಣ. ಮಣ್ಣನ್ನು ನಂಬಿದರೆ ಅದು ನಮ್ಮನ್ನು ಕೈಬಿಡಲಾರದು. ತೋಟದಲ್ಲಿ ಮನೆಗೆ ಬೇಕಾದಷ್ಟು ತರಕಾರಿ ಬೆಳೆದಾಗ ಅಂಗಡಿಯಿಂದ ತರಕಾರಿ ತರುದನ್ನು ತಪ್ಪಿಸಬಹುದು ಅದೇ ರೀತಿ ಆರೋಗ್ಯವನ್ನು ಕಾಪಾಡಬಹುದಾಗಿದೆ.

ಲೆಕ್ಕಾಚಾರದ ಬದುಕು ನಮ್ಮದಾಗಲಿ :- ಮಾಲ್ ಗಳಲ್ಲಿ ಖರೀದಿ ಮಾಡುದನ್ನು ಬಿಟ್ಟು ಪಕ್ಕದಲ್ಲಿರುವ ಸಣ್ಣ ಸಣ್ಣ ಅಂಗಡಿಗಳಿಗೆ ಹೋಗಿ ಬಟ್ಟೆ ಖರೀದಿಸುವ. ಉಳಿತಾಯ ಅಲ್ಲದೆ ಮತ್ತೊಬ್ಬ ಬಡ ವ್ಯಾಪಾರಿಗೆ ಈ ಮೂಲಕ ನೆರವಾಗೋಣ.

ಸಾವಿರಾರು ರೂಪಾಯಿಗಳ ಬಟ್ಟೆಗಳನ್ನು ಕೊಂಡು ಕಪಾಟು ಪುಲ್ ಮಾಡುವುದು ಬಿಟ್ಟು ಸುಮ್ಮನೆ ಸರಳ ಜೀವನ ನಡೆಸೋಣ. ಬಾಹ್ಯ ಆಡಂಬರವನ್ನು ಮಿತಿಯಲ್ಲಿಟ್ಟು ಆಂತರಿಕ ಸೌಂದರ್ಯವನ್ನು ಇನ್ನಷ್ಟು ಶುಭ್ರಗೊಳಿಸುವ.

ಕೇವಲ ಹಣ್ಣು ಹಂಪಲು ತರಲು ಸೂಪರ್ ಮಾರ್ಕೆಟ್ ಹುಡುಕಿಕೊಂಡು ಹೋಗುದನ್ನು ಬಿಟ್ಟು ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವ ಬಡವರ ಬಳಿ ಹೋಗಿ ಸಾದ್ಯವಾದರೆ ಚರ್ಚೆ ಇಲ್ಲದೆ ಖರೀದಿಸಿ ನಿಮ್ಮಿಂದಾಗಿ ಅವನ ಮನೆಯ ಒಲೆ ಈವತ್ತು ಹೆಚ್ಚು ಉರಿಯಬಹುದಾಗಿದೆ.

ಬಿಸಿಲು ಮಳೆ ಲೆಕ್ಕಿಸದೆ ಬದುಕಿನ ಬಂಡಿ ಸಾಗಿಸಲು ಸೊಪ್ಪು ಮಾರುವ ಅಜ್ಜಿಯಿಂದ ತರಕಾರಿ ಸೊಪ್ಪು ಎತ್ತಿಕೊಂಡು ಬನ್ನಿ,ಮತ್ತೆ ಹಿಂತಿರುಗಿ ಅವಳನ್ನೊಮ್ಮೆ ನೋಡಿ ಎರಡೂ ಕೈ ಎತ್ತಿ ಅವಳು ನಿಮ್ಮನ್ನು ಹರಸುವುದು ಕಾಣುತ್ತೆ.ಈ ಸಂತೋಷದ ಕ್ಷಣವನ್ನು ಕಾಣಲು ಪುಣ್ಯ ಮಾಡಿರಬೇಕು ಅಲ್ಲವೇ ?

ಸಾವಿರಾರು ಮೈಲುಗಳ ದೂರದಲ್ಲಿರುವ ಬಹು ರಾಷ್ಟ್ರೀಯ ಕಂಪನಿಗಳು ತಯಾರಿಸುವ ತಿನಿಸುಗಳು ವರ್ಷಗಳಿಂದ ಬೇಕರಿ ಅಂಗಡಿಗಳಲ್ಲಿ ಬಿದ್ದಿವೆ. ಇದನ್ನು ತಯಾರಿಸಲು ಎಷ್ಟೋoದು ರಾಸಾಯನಿಕ, ಬಣ್ಣಗಳನ್ನು ಹಾಕಿರಬಹುದು.

ಅಗತ್ಯವಾದ ದನ್ನು ಮಾತ್ರ ಖರೀದಿ ಮಾಡಿ:- ನೂರಾರು ರೂಪಾಯಿ ಖಚು೯ ಮಾಡಿ ಬೇಡವಾದ ಫೀಜಾ ಬಗ೯ರ್ ತಿನ್ನುದನ್ನು ಬಿಟ್ಟು ಮನೆ ಅಡುಗೆ- ವಡಪಾವ್-ನೀರುಳ್ಳಿ ದೊಸೆಯ ರುಚಿಗೆ ಸಾಟಿಯಾವುದು. ಬ್ರಾಂಡ್ ವಸ್ತುಗಳನ್ನು ತ್ಯಜಿಸಿ ದೇಶಿ ಉತ್ಪನ್ನಗಳನ್ನು ಖರೀದಿಸಿ ಆತ್ಮನಿಭ೯ ರ ಭಾರತಕ್ಕಾಗಿ ಶ್ರಮಿಸೋಣ.

ಬೇಕಾದಷ್ಟೇ ನೀರನ್ನು ಬಳಸಿ ನಲ್ಲಿಯಲ್ಲಿ ತೊಟ್ಟಿಕ್ಕುವ ಹನಿ ನೀರನ್ನು ನಿಲ್ಲಿಸಿ, ಮನೆಯಲ್ಲಿ ಸುಮ್ಮನೆ ಹೊತ್ತಿ ಉರಿಯುವ ಬಲ್ಬ ಫಾನ್ ಗಳನ್ನು ನಿಲ್ಲಿಸಿದರೆ ಅದೂ ಸಹ ದೇಶ ಸೇವೆ ಮಾಡಿದಂತಾಗುತ್ತದೆ.

ಬಂಧುಗಳೆ ಬಿಸಾಡಲು ಎತ್ತಿಟ್ಟಿರುವ ಬಟ್ಟೆಗಳನ್ನು ಮತ್ತೊಮ್ಮೆ ನೋಡಿ ಇನ್ನೂ ಎರಡು ತಿಂಗಳು ಹಾಕಬಹುದು ಅನಿಸಿದ್ರೆ ಹಾಕಿ, ಹರಿದದ್ದೇ ಆದರೆ ಹೊಲಿದು ಅಗತ್ಯದವರಿಗೆ ಕೊಟ್ಟು ಬನ್ನಿ.ಮನಸ್ಸು ನಿರಾಳ ಅನ್ನುತ್ತೆ. ಹರಿದ ಚಪ್ಪಲಿ, ಬೂಟು ಎಸೆಯುವ ಮೊದಲು ಆಲೋಚಿಸಿ ಅದನ್ನು ಅಗತ್ಯವಿರುವ ಜನರಿಗೆ ನೀಡಿದರೆ ಉತ್ತಮವಾದ ಕೆಲಸ.

ಮನೆ ಮಂದಿ ಎಲ್ಲಾ ಸೇರಿ ತಿಮ್ಮಪ್ಪನ ದರ್ಶನ ಮಾಡ್ಬೇಕು ಅಂದಿದ್ರೆ ಅದನ್ನು ‌ ಸ್ವಲ್ಪ ಸಮಯ ಮುಂದಕ್ಕೆ ಹಾಕಿ , ಹತ್ತಿರದಲ್ಲಿರುವ ಅನಾಥಾಲಯದ ಮಕ್ಕಳಲ್ಲಿ ಆತ ಅಡಗಿದ್ದಾನೆ, ಅವರೊಂದಿಗೆ ಊಟ ಮಾಡಿ ಬಂದರೆ ದೇವರ ಸೇವೆ ಮಾಡಿದಂತೆ.

ಸಿನೆಮಾ ನಟನಟಿಯರನ್ನು ಪೂಜಿಸುವುದು ಅವರ ಬಗ್ಗೆ ಚರ್ಚಿಸುವುದು ಬಿಟ್ಟು, . ಭಾರತವನ್ನು ಮುನ್ನಡೆಸಬೇಕಾದ ಮೌಲ್ಯಯುತ ಜವಾಬ್ದಾರಿಯು ನಮ್ಮ ನಡೆಯಲ್ಲಿದೆ. ದೇಶದಿಂದ ಯಾವುದನ್ನೂ ಅಪೇಕ್ಷಿಸದೆ ನಿಸ್ವಾರ್ಥವಾಗಿ ಆದಷ್ಟು ದೇಶ ಸೇವೆ ಮಾಡುವ. ದುಂದು ವೆಚ್ಚಗಳನ್ನು ಬಿಟ್ಟು ಉತ್ತಮ ಜೀವನ ಸಾಗಿಸೋಣ ನಾವು ಬದುಕೋಣ ಮತ್ತೊಬ್ಬರಿಗೂ ಬದುಕಲು ಬಿಡೋಣ.

✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ

 
 
 
 
 
 
 
 
 
 
 

Leave a Reply