ಕಾಪುವಿನಲ್ಲಿ ಸಂಪನ್ನಗೊಂಡ ವೈಭವದ ಐತಿಹಾಸಿಕ ಪಿಲಿಕೋಲ

ತುಳುನಾಡಿನ ವಿಶಿಷ್ಟ ಜಾನಪದ ಆಚರಣೆಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ಸಂಪನ್ನಗೊಂಡಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಕಾಪು ಪಿಲಿಕೋಲ ನೋಡಲು ಸಾವಿರಾರು ಮಂದಿ ಅವಿಭಜಿತ ದಕ್ಷಿಣ ಕನ್ನಡಜಿಲ್ಲೆ ಮಾತ್ರವಲ್ಲದೆ ದೇಶವಿದೇಶಗಳಿಂದಲೂ ಆಗಮಿಸಿ ಪಿಲಿಕೋಲದ ವೈಭವವನ್ನು ಕಣ್ತುಂಬಿಸಿಕೊಂಡರು. ಕಾಪು ಹಳೇ ಮಾರಿಗುಡಿ ಸಮೀಪ ಹಾಗೂ ರಾಷ್ಟ್ರೀಯ ಹೆದ್ದಾರಿ ಸಮೀಪ ಎರಡು ಕಿ.ಮೀ ಅಂತರದಲ್ಲಿ ಹುಲಿ ತಿರುಗಾಡುವ ಪ್ರದೇಶದಲ್ಲಿ ಸಂಜೆ ತನಕ ಜನಸಾಗರವೇ ತುಂಬಿಕೊಂಡಿತ್ತು. ಪಿಲಿಕೋಲ ವೇಷಧಾರಿ ಓಡಾಡುವ ಪ್ರದೇಶದಲ್ಲಿ ಯುವಕರು ಅಡ್ಡಾಡುತ್ತ, ಓಡಾಡುತ್ತಾ ಹುಲಿಯನ್ನು ಕೆಣಕುವ ದೃಶ್ಯ, ಸಾರ್ವಜನಿಕರನ್ನು ಹುಲಿ ಅಟ್ಟಿಸಿಕೊಂಡು ಬರುವ ದೃಶ್ಯ ಮೈನವಿರೇಳಿಸುವಂತಿತ್ತು.

ಅನಾಧಿಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪಿಲಿಕೋಲ ಸಾಕಷ್ಟು ಕಾರ್ಣಿಕ ಮತ್ತು ದೈವಿಕ ಹಿನ್ನಲೆಯನ್ನು ಹೊಂದಿದೆ. ಪಿಲಿಕೋಲದಲ್ಲಿ ಹುಲಿ ಮುಟ್ಟಿದರೆ ಮರಣ ಸ್ಪರ್ಶ ಭೀತಿ ಹೊಂದಿರುವ ಪಿಲಿಕೋಲವನ್ನು ವೀಕ್ಷಿಸಲು ಸಾಕಷ್ಟು ದೂರದಲ್ಲೇ ಜನರು ಜಮಾಯಿಸಿದ್ದರೂ ಈ ಬಾರಿ ಇಬ್ಬರನ್ನು ಹುಲಿ ಮುಟ್ಟಿದೆ. ಇತರ ದೈವಗಳ ಕೋಲಗಳಂತೆ ಬಲು ಹತ್ತಿರದಿಂದ ಹುಲಿಕೋಲವನ್ನು ವೀಕ್ಷಿಸಲು ಅವಕಾಶವಿಲ್ಲ. 

ಕಾರ್ಕಳದ ಭೈರವಸೂಡ ಆರಸನಿಂದ ಪ್ರಾರಂಭಗೊಂಡು ಕಾಪುವಿನ ಮರ್ದ ಹೆಗ್ಗಡೆ ಎಂಬ ಅರಸನಿಂದ ಮುಂದುವರಿಯಲ್ಪಟ್ಟ ಐತಿಹಾಸಿಕ ಪಿಲಿಕೋಲ ಇಂದಿಗೂ ಕೂಡಾ ಸಾಕಷ್ಟು ವಿಜೃಂಭಣೆಯಿಂದ ಕಾಪು ಪಡುಗ್ರಾಮದಲ್ಲಿ ನಡೆಯುತ್ತಿದೆ. ಪಿಲಿಕೋಲದ ವೇಷಧಾರಿ ಕೋಲದ ಪ್ರಾರಂಭಿಕ ಘಟ್ಟದಲ್ಲಿ ಯಾರನ್ನು ಸ್ಪರ್ಶಿಸುತ್ತಾನೋ ಆ ವ್ಯಕ್ತಿ ಮುಂದಿನ ಎರಡು ವರ್ಷಗಳ ಒಳಗೆ ಸಾವಿಗೀಡಾಗುತ್ತಾನೆ ವಿಶಿಷ್ಟ ನಂಬಿಕೆಯಿದೆ. ಪಿಲಿಕೋಲವನ್ನು ಹೆಚ್ಚಾಗಿ ಯುವಕರು ವೀಕ್ಷಣೆ ಮಾಡಲು ಬರುತ್ತಾರೆ. ಸೀಮಿತ ಪ್ರದೇಶದಲ್ಲಿ ಸುತ್ತಾಡುವ ಹುಲಿ ವೇಷಧಾರಿ ಹಿಂಬಾಲಿಸಿಕೊಂಡು ಅಥವಾ ಅಟ್ಟಿಸಿಕೊಂಡು ಬಂದಲ್ಲಿ ಯುವಕರಿಗೆ ಶೀಘ್ರವಾಗಿ ಓಡಿಕೊಂಡು ಹೋಗಿ ತಪ್ಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವಯಸ್ಸಾದವರು, ಮಹಿಳೆಯರು ಪಿಲಿಕೋಲವನ್ನು ಸಾಕಷ್ಟು ದೂರದಿಂದಲೇ ವೀಕ್ಷಿಸಿದರು. ಒಂದೊಮ್ಮೆ ಪಿಲಿಕೋಲದ ವೇಷಧಾರಿ ಯಾರನ್ನೂ ಮುಟ್ಟದೇ ಇದ್ದ ಸಂದರ್ಭದಲ್ಲಿ ಆತನೇ ಮೃತಪಡುವನು ಎಂಬ ಗಾಢ ನಂಬಿಕೆಯೂ ಇದೆ. ಹಾಗಾಗಿ ಸಾಕಷ್ಟು ನೇಮ ನಿಷ್ಠೆಯಿಂದ ಇದ್ದುಕೊಂಡು ಕೋಲ ನಡೆಸಬೇಕು ಎಂಬುದು ವಾಡಿಕೆ. ಆದರೆ ಇವರೆಲ್ಲರಿಗೂ ಪ್ರಾಣಭೀತಿಯಿಂದ ಪಾರಾಗಲು ಮೂಲಮಾರಿ ಗುಡಿಯ ದೇವಿಯ ಸನ್ನಿಧಿಯಲ್ಲಿ ಕೆಲವೊಂದು ಪರಿಹಾರೋಪಾಯಗಳಿವೆ. ದೈವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಹುಲಿಚಂಡಿ ನೇಮೋತ್ಸವಕ್ಕೆ ಪೂರ್ವಭಾವಿ ಕ್ರಮಗಳು ನಡೆದ ಬಳಿಕ ಹಗಲು ಹೊತ್ತಿನಲ್ಲಿ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಗರಿಗಳಿಂದ ತಯಾರಿಸಲಾದ ಒಳಿಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆದು, ಒಲಿಗುಂಡದಿಂದ ಹೊರಬಂದ ಬಳಿಕ ಪಿಲಿಕೋಲ ಶನಿವಾರ ಮಧ್ಯಾಹ್ನ ಆರಂಭಗೊಂಡು ಸಂಜೆ ವೇಳೆ ಮುಕ್ತಾಯಗೊಂಡಿತು. ರಾಜ್ಯ ಪ್ರಶಸ್ತಿ ವಿಜೇತ ಗುಡ್ಡ ಪಾಣಾರ ಮೂಳೂರು ಪ್ರತೀ ವರ್ಷ ಪಿಲಿಕೋಲ ವೇಷ ಹಾಕುತ್ತಿದ್ದು, ಈ ಬಾರಿ ಕಾಪು ಮಾರಿಯಮ್ಮ ದೇವಿಯ ಅಣತಿಯಂತೆ ಅವರ ಮಗನಾದ ಸುಧಾಕರ್ ಪಾಣಾರ ಅವರಿಗೆ ದೇವಿ ಸನ್ನಿಧಿಯಲ್ಲಿ ಆವೇಶ ಬಂದು ಅಭಯಪ್ರಸಾದ ಸಿದ್ಧಿಸಿದ ಹಿನ್ನೆಲೆಯಲ್ಲಿ ವೇಷಹಾಕಿ ಪಿಲಿಕೋಲವನ್ನು ಸುಧಾಕರ್ ಅವರು ನಡೆಸಿಕೊಟ್ಟರು. ಕಾಪು ಬ್ರಹ್ಮ ಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ಪಿಲಿಕೋಲದ ಜೊತೆಗೆ ಮುಗ್ಗೇರ್ಕಳ, ತನ್ನಿಮಾನಿಗ, ಬಬ್ಬರ್ಯ,ಗುಳಿಗ ದೈವದ ನೇಮೋತ್ಸವ ಕೂಡಾ ನಡೆಯಿತು.

 
 
 
 
 
 
 
 
 
 
 

Leave a Reply