ಶ್ರೀ೧೦೦೮ ಶ್ರೀ ಶ್ರೀಸುಬುಧೇಂದ್ರತೀರ್ಥಶ್ರೀಪಾದರ ಪೀಠಾರೋಹಣದ ದಶಮಾನೋತ್ಸವ

 ಶ್ರೀಸುಬುಧೇಂದ್ರತೀರ್ಥರು ಇವರು ಶ್ರೀಸುಬುಧೇಂದ್ರ ತೀರ್ಥರು. ವಿಬುಧ ಜನರಿಗೆಲ್ಲ ಆಶ್ರಯಧಾತರು, ಶ್ರೀಸುಯತೀಂದ್ರತೀರ್ಥರ ಕರ ಸಂಜಾತರು..
ಶ್ರೀಧೀರೇಂದ್ರರಂತೆ ಧೀರೋಧಾತ್ತರು. ರಾಯರಂತೆ ಕರುಣೆಯುಳ್ಳ ಭಕ್ತ ಜನರ ಪ್ರೇಮಿಗಳು. ಸುರರಿಗೆಲ್ಲಾ ಇಂದ್ರ ಶ್ರೇಷ್ಠ, ಯತಿಗಳಿಗೆಲ್ಲಾ ಇವರೇ ಜೇಷ್ಠ. ಸುರಪನಾಲಯದಂತೆ ಕಂಗೊಳಿಸುವ ಮಂತ್ರಾಲಯ ಕ್ಷೇತ್ರದಲ್ಲಿ ಸುರತರುವಾದ ರಾಯರ ಚರಣವ ಬಿಡದೆ ಭಜಿಪ ಸುಯತೀಂದ್ರರ ವರಪುತ್ರರು.
ನಡೆದಾಡುವ ರಾಯರೆಂಬ ಖ್ಯಾತಿಯ ಸುಶಮೀಂದ್ರತೀರ್ಥರ ಕರುಣೆ ಪಡೆದ ಮಹನೀಯರು, ಸುಯತೀಂದ್ರ ತೀರ್ಥರ ಕರಕಮಲ ಸಂಜಾತರು. ಅಜ್ಜಯ್ಯ ಶ್ರೀಸುಜಯೀಂದ್ರರು ನವ ಮಂತ್ರಾಲಯ ನಿರ್ಮಾತೃ, ಅವರ ಹಾದಿಯಲ್ಲೇ ಸಾಗಿ ಆಧುನಿಕ ಮಂತ್ರಾಲಯ ಮಾಡಿದ ಭಗೀರಥರು.
ಸುದರ್ಶನ ದುಷ್ಟರಿಗೆ ಮಾತ್ರ ದರ್ಶನ ನೀಡುತ್ತಿದ್ದ, ರಾಯರ ಕರುಣಾಪೂರಿತ ವರ ಪಡೆದ ಇವರು ದುಷ್ಟ ಶಿಷ್ಟರಿಗೆಲ್ಲಾ ಸುದರ್ಶನರು. ಪರಮತ ಸಹಿಷ್ಣುಗಳು, ಪರರ ಹಾಗೂ ಜಗದ ಹಿತಕಾಗಿ ಶ್ರೀಮೂಲರಾಮರ ನಿತ್ಯ ಸೇವಿಸುವರು.
ರಾವಣನ ವಧಿಸಲು, ಪರಶುರಾಮರ ಅಹಂ ಅಣಗಿಸಲು ಅಂದು ವಿಧಾತ ಮಾಡಿದ ಮೂಲರಾಮರ ಸೇವೆಯನ್ನು. ಇಂದು ವಿಬುಧಜನ ಕ್ಷೇಮ, ಸಕಲ ಜನ ವಿದ್ಯಾರ್ಜನಾ, ಸುಖ ಸಂತಸ, ಸರ್ವರ ಹಿತಕ್ಕಾಗಿ ಮಾಡುತ್ತಿದ್ದಾರೆ ಅದೇ ಮೂಲರಾಮನ ಚರಣ ದಾಸ್ಯವನ್ನು. ಗಜ ಗಹ್ವರದಿ ವಿರಾಜಮಾನರಾದ ಶ್ರೀಜಯತೀರ್ಥರ ಸುಚರಿತೆಯನು ಪೇಳುತಿಹರು. ಅವರ ನುತಿಸಿ ನಿತ್ಯ ಶಿಷ್ಯರಿಗೆ ಸುಧಾ ಧಾರೆಯನ್ನೆರೆಯುತಿಹರು.
ಶ್ರೀಕೃಷ್ಣದೇವರಾಯರು, ತಮಗೆ ಸಲಹೆ ನೀಡುತ್ತಿದ್ದ ಶ್ರೀವ್ಯಾಸರಾಜರಿಗೆ ಮಾಡುತ್ತಿದ್ದರು ಅಂದು ಪಾದಾಭಿವಂದನ. ದೇವಗುರು ಬೃಹಸ್ಪತಿಯಂತಿರುವ ‘ಸುಬುಧ’ ‘ಇಂದ್ರರು’, ಅನುಜ್ಞೆ ನೀಡುವ ಮೂಲಕ ಆಗುತ್ತಿದ್ದಾರೆ ನಾಡಿನ ಎಲ್ಲ ದೊರೆಗಳಿಂದ ಗೌರವಕ್ಕೆ ಭಾಜನ.
ಶ್ರೀವಿಜಯೀಂದ್ರತೀರ್ಥರು ಮೂರುವರೆ ಶತಮಾನದ ಹಿಂದೆ ಚತುಃಷಷ್ಠಿ ವಿದ್ಯಾ ಪ್ರವೀಣರು. ಅವರ ಪೀಠದಲ್ಲಿ ಕುಳಿತಿರುವ ಶ್ರೀಸುಬುಧೇಂದ್ರರು ಸಕಲಕಲಾ ವಲ್ಲಭರು. ಊರು ಕೇರಿ ಮನೆ ಮಂದಿಯನು ಬಿಟ್ಟು ಮಠ ಸೇರಿದ ಪುಟಾಣಿಗಳಿಗೆ ಆಶ್ರಯದಾತರು. ಮಾತೆಯಂತೆ ಸಲಹುವುದರೊಂದಿಗೆ ಮಕ್ಕಳಿಗೆ ಮನೆ, ಮಾತಾಪಿತೃಗಳ ನೆನೆಪೇ ಬಾರದಂತೆ ಪ್ರೀತಿ ಎರೆದು ಕಾಯುತಿಹರು.
ಸದಾ ಸಜ್ಜನ ಶರಣಾಗತರನ್ನು ಕಾಯುತ್ತಿರುವ ಭಕ್ತರ ಕಣ್ಮಣಿ ನಮ್ಮ ಮಂತ್ರಾಲಯದ ಈ ದ್ಯುಮಣಿ . ಪ್ರಕೃತಿಗೆ ಆಸರೆ ಬಿಸಿಲು ಬೆಳಕು ನೀಡುವ ನೇಸರ, ಪಂಡಿತ ಪಾಮರ ಭೂಸುರರಿಗೆ ಆಧಾರ ಈ ನಮ್ಮ ವಿದ್ಯಾ ಭಾಸ್ಕರ.
ಸಾಧನ ಶರೀರವಿದು ಸಾಧುಜನಪ್ರಿಯ ಶ್ರೀಹರಿ ನೀಡಿದ್ದು. ಸಕಲ ಶಿಷ್ಯರನು ಸದ್ಯೋಜಾತರಾಗಿ ಕಾಯಲೆಂದು ಕರುಣಿಸಿದ್ದು. ಮಹಾ ಮೇರುವಿನಂತೆ ಕಂಗೊಳಿಸುತಿಹರು ಶ್ರೀಮೂಲರಾಮನ ನಿತ್ಯಾರ್ಚಕರು.
ಸುಖತೀರ್ಥರ ಮತದಲ್ಲಿ ಶುಕಾಚಾರ್ಯರಂತೆ ಬಂದವರೇ, ನಭೋ ಮಂಡಲದಲ್ಲಿ ನಕ್ಷತ್ರಗಳ ಮಧ್ಯೆ ಧ್ರುವನಂತೆ ಮಿನುಗುವವರೇ. ತಮ್ಮ ಸಾಧನೆ ಸಾವಿರವಾಗಲಿ, ಅಜಯ್ಯ ಶ್ರೀವಿಜಯೀಂದ್ರರಂತೆ ದುರ್ವಾದಿಗಳ ಮಧ್ಯೆ ಸುಜಯಿಗಳಾಗಿರುವವರೇ. ಕಲಿಯುಗದ ಕಲ್ಪತರು, ಕಾಮಧೇನುವಿನ ಪ್ರತಿರೂಪವಾದ ರಾಯರನ್ನು ಒಲಿಸಿಕೊಂಡವರೇ. ಶ್ರೀ ವೇದವ್ಯಾಸ ಪ್ರಣೀತ ಸುಭಾಷ್ಯವನು ಕೇಳಲು ಇಂದ್ರನ ಪದವಿಯನ್ನು ಒಲ್ಲೆನೆಂದು ವೃಷಭವಾಗಿ ಬಂದ ದೇವೇಂದ್ರನಂತೆ ಅಧುನಾ ಪೀಠದಲ್ಲಿ ಕಂಗೊಳಿಪರೇ. ಸುಖತೀರ್ಥರ ಸುಭಾಷ್ಯವನ್ನು ಸುಲಲಿತವಾಗಿ ಸುಧೆಯನ್ನಾಗಿಸಿ ಸಜ್ಜನರಿಗೆ ನೀಡಿದ ಶ್ರೀಜಯತೀರ್ಥರ ಅನವರತ ಭಜಿಪರೇ.
ತಮ್ಮ ಅಮೃತಹಸ್ತದಿಂದ ಅರ್ಚಿಸಿಕೊಳ್ಳಲೆಂದೇ ಬ್ರಹ್ಮಕರಾರ್ಚಿತ ಮೂಲರಾಮ ಧರೆಗೆ ಬಂದನೇನೋ. ತಮ್ಮಿಂದ ಮಧ್ವಮತ ಮತ್ತಷ್ಟು ಉದ್ಧಾರವಾಗಲೆಂಬಂತೆ ಶ್ರೀಮದಾಚಾರ್ಯರು ಶ್ರೀದಿಗ್ವಿಜಯರಾಮನನ್ನು ಅನುಗ್ರಹಿಸಿದರೇನೋ. ಗಜಗಹ್ವರದಲ್ಲಿ ಶ್ರೀಪದುಮನಾಭತೀರ್ಥರ ನಂತರ ತಮ್ಮ ಶಿರದ ಮೇಲೆ ನಿಮ್ಮ ಅಮೃತಹಸ್ತದಿಂದ ಸ್ವಕರಾರ್ಚಿತ ರಾಮನ ಮೂರ್ತಿಯನ್ನು ಇರಿಸಿಕೊಳ್ಳಬೇಕೆಂಬ ಆಸೆಯಿಂದ ಶ್ರೀಜಯತೀರ್ಥರು ಶ್ರೀಜಯರಾಮದೇವರನ್ನು ಕೊಡುಗೆಯಾಗಿ ಕೊಟ್ಟರೇನೋ. ನೀವು ಸರ್ವ ಜನರಿಗೆ ಸಂತಸವೀಯಲೆಂದೇ ರಾಘವೇಂದ್ರ ಗುರುಸಾರ್ವಭೌಮರು ಸಂತಾನಗೊಪಾಲಕೃಷ್ಣನನ್ನು ಕರುಣಿಸಿದರೇನೋ.
ಬ್ರಹ್ಮದೇವರು ಶ್ರೀಮೂಲರಾಮನನ್ನು ಕೊಟ್ಟಿದ್ದು ನಾವು ನೋಡಲಿಲ್ಲ. ಆನಂದತೀರ್ಥರು ದಿಗ್ವಿಜಯರಾಮನನ್ನು ಅನುಗ್ರಹಿಸಿದಾಗ ನಾವಿರಲಿಲ್ಲ. ಜಯತೀರ್ಥರು ಸುಧೆಯ ಜತೆ ಜಯರಾಮನನ್ನು ನೀಡಿದ ಗಳಿಗೆಯ ಸವಿಯನ್ನು ನಾವು ಉಣಲಿಲ್ಲ. ವಿಬುಧೇಂದ್ರತೀರ್ಥರಿಗೆ ಒಲಿದು ಷೋಡಶಬಾಹು ನರಹರಿ ನದಿಯಿಂದ ಮೇಲೆ ಬಂದದ್ದನ್ನು ನಾವು ಕಾಣಲಿಲ್ಲ.
ಸುಧೀಂದ್ರತೀರ್ಥರು ಗರುಡವಾಹನನನ್ನು ಗರುವದಿಂದ ಅರ್ಚಿಸಿದ್ದನ್ನು ನಾವು ದರ್ಶಿಸಲಿಲ್ಲ. ನೀಲಾದೇವಿ ಕರಾರ್ಚಿತ ವೈಕುಂಟ ವಾಸುದೇವರು ಪೀಠದಲ್ಲಿ ಕೂತದ್ದು ನಮಗರಿವಿಲ್ಲ. ರಾಯರು ಪೊಡವಿಗೊಡೆಯ ಉಡುಪಿ ಕೃಷ್ಣನನ್ನು ಸಂಸ್ಥಾನದಲ್ಲಿಟ್ಟಾಗ ನಾವಿರಲಿಲ್ಲ.
ಆದರೆ ಶ್ರೀಹಂಸನಾಮಕ ಪರಮಾತ್ಮನ ಪರಂಪರೆಯ ಜಗದ್ಗುರು ಶ್ರೀಮದಾಚಾರ್ಯರ ಮೂಲ ಸಂಸ್ಥಾನಕ್ಕೆ ಮಹಾಮಹಿಮ ಶ್ರೀವೇಣುಗೋಪಾಲನ ಸುವರ್ಣಮಯ ಮೂರ್ತಿಯನ್ನು ತಾವು ಸಮರ್ಪಿಸಿದ್ದನ್ನು ನಾವು ನೋಡಿದ್ದೇವೆ, ನಲಿದಿದ್ದೇವೆ.
ಇದಕ್ಕಾಗಿ ಅವಿರತವಾಗಿ ಶ್ರಮಿಸಿ ಶ್ರೀಚಂದ್ರಿಕಾ ಮಂಗಳ ಮಹೋತ್ಸವ ನಡೆಸಿದಿರಿ. ಪೂರ್ವಾಚಾರ್ಯರಂತೆ ರಾಘವೇಂದ್ರ ಗುರುಸಾರ್ವಭೌಮರ ಬಳಿಕ, ಸುವರ್ಣಮಯ ಮೂರ್ತಿಯನ್ನು ಸಂಸ್ಥಾನಕ್ಕೆ ಒಪ್ಪಿಸಿ, ಆಚಂದ್ರಾರ್ಕ ಕೀರ್ತಿ ಉಳಿಸಿದಿರಿ. ಈ ಹಿರಿಮೆ ಗರಿಮೆ ತಮ್ಮದು.
ನಿಮ್ಮಂತಹ ಸುಚರಿತ, ಸಜ್ಜನ ಪ್ರೀತಿ ಭರಿತ ಗುರುಗಳನ್ನು ಪಡೆದ ನಾವೇ ಭಾಗ್ಯಶಾಲಿಗಳು. ರಾಯರು ಕರುಣಾ ಸಮುದ್ರರು, ರಾಯರ ಕೃಪಾಂಬುಧಿಯಲಿ ಮಿಂದ ಶ್ರೀಸುಶಮೀಂದ್ರತೀರ್ಥರು ನಡೆದಾಡುವ ರಾಯರೆಂಬ ಕೀರ್ತಿ ಗಳಿಸಿ ವರಪುತ್ರರಾದರು.
ತಾವು ಮಧ್ವ ವೇದಾಂತ ಸಾಮ್ರಾಜ್ಯದ ಸಿಂಹಾಸನಾಧೀಶ್ವರರಾಗಿ ದಶಕ ಕಳೆಯುವಷ್ಟರಲ್ಲೇ ರಾಯರ ಸುಪುತ್ರರಾಗಿದ್ದೀರಿ. ನಿಮಗಿದೋ ನಮ್ಮ ಅನಂತಕೋಟಿ ನಮನ, ನಿರಂತರ ಕಾಯಿರಿ ನೀವು ನಮ್ಮನ್ನ.
ನಿಮ್ಮ ನೆರಳಲ್ಲೇ, ಲೀನವಾಗಿ ನಿಮ್ಮ ಸೇವೆಯ ಮಾಡುವ ಭಾಗ್ಯ ನಮ್ಮದಾಗಲಿ. ಶ್ರೀಪಾದರಾಜರಂತೆ ಉತ್ತಮ ಕೃತಿಕಾರರಾಗಿ, ಶ್ರೀವಾದಿರಾಜರಂತೆ ಆಯುಷ್ಯವಂತರಾಗಿ, ಶ್ರೀವ್ಯಾಸರಾಜರಂತೆ ರಾಜ್ಯ ಸಿಂಹಾಸನವನ್ನು ಏರಿ. ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರಂತೆ ಕರುಣಾ ಸಮುದ್ರರಾಗಿ ಪಂಡಿತ ಪಾಮರರನ್ನು ಉದ್ಧರಿಸಿ. ಈ ಎಲ್ಲ ಭಾಗ್ಯಗಳನ್ನು, ತಮ್ಮ ಉಪಾಸ್ಯಮೂರ್ತಿ ಬ್ರಹ್ಮ ಕರಾರ್ಚಿತ ಶ್ರೀ ಮನ್ಮೂಲರಾಮದೇವರು ತಮಗೆ ನಿರಂತರವಾಗಿ ಕರುಣಿಸಲಿ ಎಂದು ತಮ್ಮ ಶ್ರೀಚರಣಗಳ ಮೂಲಕ ಮುಖ್ಯಪ್ರಾಣದೇವರಲ್ಲಿ ಬೇಡುತ್ತೇನೆ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

 
 
 
 
 
 
 
 
 
 
 

Leave a Reply