ಅಮ್ಮನ ಆತಂಕ ~ ಮಲ್ಲಿಕಾ ಶ್ರೀಶ ಬಲ್ಲಾಳ್

ಬೆಳಿಗ್ಗೆ 9 ಘಂಟೆ ಸಮಯ ತಿಂಡಿ ತಿನ್ನುತ್ತಾ ಇದ್ದೆ ಅಮ್ಮಾ ಅಮ್ಮಾ ಎಂಬ ಮಗಳ ಕರೆ ಕಿವಿಗೆ ಕೇಳಿಸಿತು, ಬಾಬು ಶಾಲೆಗೆ ಹೋದಳಲ್ವ ವಾಪಸ್ ಯಾಕೆ ಬಂದಳು,  ಮೊದಲ ಬಾರಿ ಶಾಲೆಗೆ ಹೋಗಿದ್ದಾಳೆ  ಏನಾಯ್ತೋ ಏನೋ ಎಂದು ಆತಂಕದಿಂದ ಎದ್ದು ಬಂದು ಹೊರ ನೋಡಿದರೆ ಯಾರೂ ಇಲ್ಲ ಹೊರಗೆ. 
 
ಕಳೆದ ನಾಲ್ಕು ವರ್ಷಗಳಿಂದ ನನ್ನ ಒಡನಾಡಿಯಾಗಿದ್ದ ನನ್ನ ಮುದ್ದು ಕಂದ ಈಗ ನನ್ನನ್ನು ಒಬ್ಬಂಟಿಯಾಗಿಸಿ ಹೊರಟಿದ್ದಾಳೆ ಅದೂ ಎಲ್ಲಿಗೆ ಅವಳ ಬಾಳ ಭವಿಷ್ಯ ರೂಪಿಸುವ ವಿದ್ಯಾ ದೇಗುಲಕ್ಕೆ. ಅವಳೇನೋ ಬೆಳಗ್ಗೆ ಬೇಗ ಎದ್ದು ಪ್ರಾತಃ ವಿಧಿ ವಿಧಾನಗಳನ್ನು ಮುಗಿಸಿ, ಹತ್ತಿರದ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈ ಮುಗಿದು ಒಳ್ಳೇ ವಿದ್ಯಾ ಬುದ್ಧಿ ಕೊಡು ದೇವರೇ ಎಂದು ಬೇಡಿಕೊಂಡು ಬಂದು ಸಂಭ್ರಮದಿಂದಲೇ ಶಾಲೆಗೆ ಹೊರಟಳು. 
ಆದರೆ ಅವಳಿಲ್ಲದ ಮನೆ ಖಾಲಿ ಖಾಲಿ ಎನಿಸಿ ಬಣಗುಡುತ್ತಿದೆ. ಅವಳ ತುಂಟಾಟಗಳು, ಹುಸಿಮುನಿಸು,  ಎಲ್ಲದಕ್ಕಿಂತ ಮಿಗಿಲಾಗಿ ಅರಳು ಹುರಿದಂತೆ ಪಟ ಪಟ ಮಾತನಾಡುವ ಅವಳ ಮಾತುಗಳು ಎಲ್ಲಾ ಭ್ರಮೆಯ ರೂಪದಲ್ಲಿ ಕಾಣುತ್ತಿದೆ. 
ಇಷ್ಟು ದಿನ ಬರೀ ಆಟವಾಡುತ್ತಾ ಕಾಲ ಕಳೆಯುತ್ತಿದ್ದೆ, ಇನ್ನು ಮುಂದೆ ಆಟದೊಂದಿಗೆ ಪಾಠವೂ ಜೊತೆಗೂಡುತ್ತದೆ. ಚೆನ್ನಾಗಿ ಕಲಿತು ಮುಂದೆ ಒಳ್ಳೇ ವಿದ್ಯಾವಂತಳಾಗಿ ಸತ್ಕೀರ್ತಿವಂತವಳಾಗು ಎಂದು ಶುಭ ಹಾರೈಸುವೆ….
 
 
 
 
 
 
 
 
 
 
 

Leave a Reply