ಪುತ್ತಿಗೆ ಸ್ವಾಮೀಜಿಯವರ ಎನ್.ಅರ್.ಐ. ಪರ್ಯಾಯ ಸಂಚಾರ

ಚತುರ್ಥ ಪರ್ಯಾಯ ಪೂರ್ವಭಾವಿ ಸಂಚಾರ ನಿಮಿತ್ತ ಉತ್ತರ ಅಮೆರಿಕಾದ ಡೆಟ್ರಾಯಿಟ್ ನಗರಕ್ಕೆ ಸ್ಯಾನ್ ಹೋಸೆ ಶ್ರೀಕೃಷ್ಣ ವೃಂದಾವನದಲ್ಲಿ ನಲವತ್ತೊಂಬತ್ತನೇ ಚಾತುರ್ಮಾಸ ವ್ರತವನ್ನು ಮುಗಿಸಿ ಆಗಮಿಸಿದ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಶಿವಳ್ಳಿ ಕುಟುಂಬದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ಮಟ್ಟು, ಶ್ರೀ ಗೋಪಾಲ್ ರಾವ್, ಶ್ರೀ ಅನಂತ್ ಶ್ರೀವತ್ಸ , ಶ್ರೀ ಸಂಜಯ್ ರಾವ್, ಶ್ರೀ ರೋಹಿತ್ ವಿಜಯ್, ಶ್ರೀ ಅರವಿಂದ್ ರಾವ್ ಮುಂತಾದ ಭಕ್ತಾದಿಗಳು ಡೆಟ್ರಾಯಿಟ್ ಏರ್ಪೋರ್ಟ್ನಲ್ಲಿ ಸೆಪ್ಟೆಂಬರ್ ೧೦ರ ಸಂಜೆ ಸ್ವಾಗತಿಸಿದರು.

ಸೆಪ್ಟೆಂಬರ್ ೧೧, ಭಾನುವಾರದಂದು ಡೆಟ್ರಾಯಿಟ್ನ ಭಾರತೀಯ ಮಂದಿರದಲ್ಲಿ ತಮ್ಮ ೪ನೆಯ ಪರ್ಯಾಯದ ಅಂಗವಾಗಿ ತಮ್ಮ ಎನ್.ಆರ್.ಐ. ಪರ್ಯಾಯ ಸಂಚಾರವನ್ನು ಅಧಿಕೃತವಾಗಿ ನೂರಾರು ಭಕ್ತರ ಸಮಕ್ಷಮದಲ್ಲಿ ಚಾಲನೆಯನ್ನು ಮಾಡಿದರು. ಪರಮ ಪೂಜ್ಯ ಶ್ರೀಗಳನ್ನು ಭಕ್ತ ಜನತೆಯೊಂದಿಗೆ ಬೆಳಿಗ್ಗೆ ಭಾರತೀಯ ಮಂದಿರದ ಅರ್ಚಕರು, ಸಂಜೆ ಶ್ರೀ ಭಕ್ತ ಹನುಮಾನ್ ಮಂದಿರದ ಅರ್ಚಕರು ಪೂರ್ಣ ಕುಂಭದೊಂದಿಗೆ, ವೇದ ಘೋಷ, ಭಜನೆಗಳ ಮುಖೇನ ಅದ್ದೂರಿಯಾಗಿ ಸ್ವಾಗತಿಸಿ ಮಂದಿರಕ್ಕೆ ಕರಕೊಂಡು ಹೋಗಿ ಗೌರವಿಸಿದರು. ಶ್ರೀಗಳು ಭಾರತೀಯ ಮಂದಿರದಲ್ಲಿ ವಿಠ್ಠಲ ದೇವರಿಗೆ ಸಂಸ್ಥಾನ ಪೂಜೆ ಹಾಗೂ ಭಕ್ತ ಹನುಮಾನ್ ಮಂದಿರದಲ್ಲಿ ತೊಟ್ಟಿಲು ಪೂಜೆಯನ್ನು ನೆರವೇರಿಸುವಾಗ ಭಕ್ತ ಜನತೆ ಆನಂದಸಾಗರದಲ್ಲಿ ತೇಲಿ ಹೋದದ್ದು ಕಂಡು ಬಂತು.

ಸ್ವಾಮಿಗಳು ತಮ್ಮ ಪ್ರವಚನವನ್ನು ಸಂಸ್ಕೃತ ಭಾಷೆಯಲ್ಲಿ ಆರಂಭಿಸಿ ಸಂಸ್ಕೃತ ಭಾಷೆಯ ಮಹತ್ವ ಹಾಗೂ ಸಂಸ್ಕೃತವು ಸುಂದರವೂ, ಸರಳವೂ, ದೇವಭಾಷೆಯೂ ಆಗಿದ್ದು ಅದು ವಿಶ್ವ ಭಾಷೆ, ಹಾಗಾಗಿ ಎಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯುವಂತೆ ಭಕ್ತರಿಗೆ ಸಲಹೆ ನೀಡಿದರು. ಭಗವಂತನಾದ ಶ್ರೀ ಕೃಷ್ಣ ಯಾರನ್ನು ದ್ವೇಷಿಸುವುದಿಲ್ಲ, ಎಲ್ಲಜೀವಿಗಳನ್ನು ಸಮಾನವಾಗಿ ಕಾಣುತ್ತಾನೆ ಹಾಗೂ ತನಗೆ ಶರಣಾದ ಭಕ್ತರ ಪ್ರೀತಿಗೆ ಒಲಿವನು ಎಂದು ಉಲ್ಲೇಖಿಸಿ, ನಿರಂತರ ದೇವರ ನಾಮವನ್ನು ಭಜನೆ, ಮಂತ್ರ ಪಠಿಸುವುದು, ಜಪ ತಪ, ನಿತ್ಯ ಪೂಜೆ ಅಥವಾ ಇನ್ನಿತರ ಕಾರ್ಯಗಳ ಮೂಲಕ ಮಾಡಿದಲ್ಲಿ ನಮಗೆಲ್ಲ ಭಗವಂತನ ಅನುಗೃಹವು ದೊರಕುವುದೆಂದು ತಿಳಿಸಿದರು. ಮುಂದುವರಿದು ನಮ್ಮಲ್ಲಿರುವ ವಿಕೃತಿಯನ್ನು ತ್ಯಜಿಸಿ, ಸಂಸ್ಕೃತಿಯನ್ನು ಮೈಗೂಡಿಸಿ, ಸಜ್ಜನರಾಗಿ ಬದುಕು ನಡೆಸಬೇಕೆಂದು ಹೇಳಿದರು.

ಅನುಗೃಹ ಸಂದೇಶವನ್ನು ಮುಂದುವರಿಸಿ ಮದ್ವರಿಗೆ ಒಲಿದ ಶ್ರೀ ಕೃಷ್ಣ, ಶ್ರೀ ಕೃಷ್ಣನ ಮೂರ್ತಿ ಉಡುಪಿಗೆ ಬಂದ ಕಥೆ, ಮಧ್ವ ಮುನಿಗಳು ಕೃಷ್ಣನ ಪೂಜೆಗೆ ಉಡುಪಿಯ ಅಷ್ಟ ಮಠಗಳನ್ನು ಸ್ಥಾಪಿಸಿ ೮ ಯತಿಗಳನ್ನು ನೇಮಿಸಿದ ಬಗ್ಗೆ, ೮ ಸಂಖ್ಯೆಯ ಮಹತ್ವ, ರಜತಪುರದಲ್ಲಿ ೨ ವರ್ಷಕೊಮ್ಮೆ ನಡೆಯುವ ಪರ್ಯಾಯ ಮೊದಲಾದ ವಿಷಯಗಳ ಬಗ್ಗೆ ತಮ್ಮ ಸಂದೇಶದಲ್ಲಿ ಗುರುಗಳು ಸವಿವರವಾಗಿ ಇಲ್ಲಿಯ ಜನರಿಗೆ ಮನಮುಟ್ಟುವಂತೆ ತಿಳಿ ಹೇಳಿದರು. ಭಗವದ್ ಗೀತೆಯ ಮಹತ್ವ ಹಾಗೂ ಗೀತೆಯ ಸಂದೇಶ ಎಲ್ಲ ಕಡೆ ತಲುಪಲು ತಮ್ಮ ಚತುರ್ಥ ಪರ್ಯಾಯದ ಸಂಕಲ್ಪಿಸಿದ ಯೋಜನೆಯಲ್ಲಿ ಒಂದಾದ “ಕೋಟಿಗೀತಾಲೇಖನಯಜ್ಞ” ದ ಬಗ್ಗೆ ಮಾತಾಡಿ, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಭಕ್ತ ಸಮೂಹಕ್ಕೆ ಕಿವಿ ಮಾತನ್ನು ಹೇಳಿದರು. ಸುಮಾರು ೧೦೦ ಭಕ್ತಾದಿಗಳು ಸ್ಥಳದಲ್ಲೇ ಭಗವದ್ಗೀತೆ ಬರೆಯಲು ನೊಂದಾಯಿಸಿ, ಪೂಜ್ಯ ಸ್ವಾಮೀಜಿಯವರಿಂದ ದೀಕ್ಷೆಯನ್ನು ಪಡೆದರು.

ಪುತ್ತಿಗೆ ಮಠದ ಪ್ರಧಾನ ಅರ್ಚಕರಲ್ಲಿ ಒಬ್ಬರಾದ ಶ್ರೀ ಶಂಕರ ಭಟ್ ಹೆಬ್ರಿ, ವ್ಯವಸ್ಥಾಪಕರಾದ ಶ್ರೀ ರತೀಶ್ ತಂತ್ರಿಯವರು ಸ್ವಾಮೀಜಿಯ ಜೊತೆಯಲ್ಲಿದ್ದರು. ಶ್ರೀ ಗುಂಡು ರಾವ್ ಅವರು ಉಡುಪಿಯ ಅಡುಗೆಯನ್ನು ಇಲ್ಲಿಯಭಕ್ತಾದಿಗಳಿಗೆ ಶ್ರೀ ಕೃಷ್ಣದ ಪ್ರಸಾದದ ಮುಖೇನ ಪರಿಚಯಿಸಿದರು. ಭಕ್ತಾದಿಗಳೆಲ್ಲರೂ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅತೀವ ಆನಂದವನ್ನು ಅನುಭವಿಸಿ, ಭಕ್ತಿ ಸಾಗರದಲ್ಲಿ ಮಿಂದೆದ್ದರು.

 
 
 
 
 
 
 
 
 
 
 

Leave a Reply