ಎಲ್ಲೆಲ್ಲೂ ರಾಮನವಮಿ ಸಂಭ್ರಮ

ವಿಶ್ವಾದ್ಯಂತ ಹಬ್ಬಿರುವ ಶ್ರೀ ಪುತ್ತಿಗೆ ಮಠದ ಶಾಖಾ ಮಠಗಳಲ್ಲಿ ಈ ಬಾರಿಯಂತೂ ಎಂದಿಗಿoತಲೂ ಹೆಚ್ಚು ವೈಭವದಲ್ಲಿ ಶ್ರೀ ರಾಮ ನವಮಿ ಮಹೋತ್ಸವವನ್ನು ವಾರಾಂತ್ಯದಲ್ಲಿ ಆಚರಿಸಿ ಸಂಭ್ರಮಿಸಲಾಯಿತು.

ಅಮೇರಿಕಾದ ನ್ಯೂಜರ್ಸಿಯಲ್ಲಿರುವ ಶ್ರೀ ಪುತ್ತಿಗೆ ಮಠದ ಶ್ರೀಕೃಷ್ಣ ವೃಂದಾವನದಲ್ಲಿ ಸೀತಾರಾಮ ಕಲ್ಯಾಣ ಮಹೋತ್ಸವವನ್ನು ಶ್ರೀ ರಾಮಪಟ್ಟಾಭಿಷೇಕ ಸಹಿತವಾಗಿ ಮಾಡಲಾಯಿತು.

ಭಾರತದಲ್ಲಿ ಈ ವರ್ಷ ನಿರ್ಮಾಣಗೊಂಡ ಭವ್ಯ ರಾಮಮಂದಿರದ ತದ್ವತ್ ಪ್ರತಿಕೃತಿಯನ್ನು ಬಹಳ ಮುತುವರ್ಜಿಯಿಂದ ಶ್ರೀ ರಾಘವೇಂದ್ರ ಮೂರ್ತಿ ತಂಡದವರು ನಿರ್ಮಿಸಿದ್ದು ಸಕಲಭಕ್ತರ ಗಮನ ಸೆಳೆದು ಅಯೋಧ್ಯೆಯಲ್ಲಿರುವ ಧನ್ಯತೆಯನ್ನು ಪಡೆಯುವಂತಾಯಿತು.

ಪ್ರಧಾನ ಅರ್ಚಕ ಶ್ರೀ ಯೋಗೀನ್ದ್ರ ಭಟ್ ಉಳಿ ಇವರು ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಿ ಶ್ರೀರಾಮೋತ್ಸವದ ಮಹತ್ವವನ್ನು ವಿವರಿಸಿದರು.

ಶ್ರೀ ಮಠದ ಸಾಗರೋತ್ತರ ಶಾಖೆಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರವರು ಕಲ್ಯಾಣೋತ್ಸವವನ್ನು ನೆರವೇರಿಸಿ ಪೂಜ್ಯ ಗುರುಗಳಾದ ಶ್ರೀ ಪುತ್ತಿಗೆ ಶ್ರೀಪಾದರ ಪರ್ಯಾಯಕ್ಕೆ ಬರೆದ ಗೀತಪುಸ್ತಕಗಳೊಂದಿಗೆ ಬರಲು ಆಹ್ವಾನಿಸಿದರು.

ಕಲ್ಯಾಣೋತ್ಸವದಲ್ಲಿ ಪುಟಾಣಿಗಳಿಂದ ನಡೆದ ವಿವಿಧ ಶ್ರೀರಾಮಭಜನ ನೃತ್ಯಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತು.

ಹಿನ್ನಲೆ ಗಾಯನ ತಂಡ ವೈಶಿಷ್ಟ್ಯ ಪೂರ್ಣ ಹಾಡುಗಳನ್ನು ಹಾಡುವ ಮೂಲಕ ಸಭೆಯನ್ನು ಮುದಗೊಳಿಸುವಲ್ಲಿ ಸಾಫಲ್ಯವನ್ನು ಕಂಡಿತು.

ಶ್ರೀ ಸುರೇಶ್ ಭಟ್ , ರಾಘವೇಂದ್ರ ಭಟ್ , ತೇಜಸ್ವಿ ಚಡಗ ಮೊದಲಾದ ಸಹ ಅರ್ಚಕರು ವಿಶೇಷವಾಗಿ ಸಹಕರಿಸಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡು ಕೃತಾರ್ಥರಾದರು.

ಮುಂಬರುವ ಡಿಸೇಂಬರ್ 27 ರಿಂದ ಉಡುಪಿಯಲ್ಲಿ ಪರ್ಯಾಯ ಶ್ರೀಪಾದರ ಅಣತಿಯಂತೆ ನಡೆಯುವ ಗೀತೋತ್ಸವದಲ್ಲಿ ಈಗಾಗಲೇ ಶ್ರೀಮಠ ದಿಂದ ನಡೆಯುತ್ತಿರುವ ಗೀತಾ ಕ್ಲಾಸ್ ನಲ್ಲಿ ತರಬೇತಿಗೊಂಡ ಸಾವಿರಾರು ಮಕ್ಕಳು ನ್ಯೂಜರ್ಸಿ ಮೊದಲಾದ ವಿದೇಶದ ಅನೇಕ ಊರುಗಳಿಂದ ಉಡುಪಿಗೆ ತಮ್ಮ ಗೀತಾ ಸೇವೆಯನ್ನು ಸಲ್ಲಿಸಲು ಆಗಮಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಗಳನ್ನು ಹಂಚಿಕೊಳ್ಳಲಾಯಿತು.

ಹೂಸ್ಟನ್ ಮಹಾನಗರದಲ್ಲಿರುವ ಶ್ರೀಕೃಷ್ಣಾವೃನ್ದಾವನದಲ್ಲಿ ಸೀತಾರಾಮಕಲ್ಯಾಣೋತ್ಸವ ಸಹಿತವಾಗಿ ಉದಯಾಸ್ತ ಪರ್ಯಂತ ಅಖಂಡ ಭಜನೆಯನ್ನು ವಿವಿಧ ತಂಡಗಳ ಸಹಯೋಗದೊಂದಿಗೆ ವೈಭವದಲ್ಲಿ ನೆರವೇರಿಸಲಾಯಿತು.

ಇನ್ನಿತರ ಶ್ರೀಮಠದ ಶಾಖೆ ಗಳಲ್ಲೂ ಸೀತಾರಾಮಕಲ್ಯಾಣ ಮಹೋತ್ಸವವನ್ನು ವೈಭವದಲ್ಲಿ ನೆರವೇರಿಸಲಾಯಿತು .

 
 
 
 
 
 
 
 

Leave a Reply