ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ

ಕೊಲಂಬೋ, ಜುಲೈ 20: ಆರು ಬಾರಿ ಪ್ರಧಾನಿಯಾಗಿರುವ ಹಿರಿಯ ನಾಯಕ ರನಿಲ್ ವಿಕ್ರಮಸಿಂಘೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ ನೂತನ ಅಧ್ಯಕ್ಷರಾಗಿದ್ದಾರೆ.

ವಾರದ ಹಿಂದೆ ಗೊಟಬಾಯ ರಾಜಪಕ್ಸ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಸರ್ವಪಕ್ಷಗಳು ಸಭೆ ಸೇರಿ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದವು. ಆದರೆ, ಸರ್ವಾನುಮತದ ಅಧ್ಯಕ್ಷರ ಆಯ್ಕೆ ಸಾಧ್ಯವಾಗಿರಲಿಲ್ಲ. ಬಹುತೇಕ ಸಂಸದರು ರನಿಲ್ ವಿಕ್ರಮಸಿಂಘೆ ಪರವಾಗಿದ್ದರೂ, ಮತ್ತಿಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇಂದು ನಡೆದ ಚುನಾವಣೆಯಲ್ಲಿ ರನಿಲ್ ವಿಕ್ರಮಸಿಂಘೆ ಪರವಾಗಿ 134 ಮತಗಳು ಲಭಿಸಿದ್ದು, ಮೂರನೇ ಎರಡು ಬಹಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರನಿಲ್ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಚಿವ ಡಲ್ಲಾಸ್ ಅಲಾಹಪೆರುಮ ಪರವಾಗಿ 82 ಮತಗಳು ಮತ್ತು ಎಡಪಕ್ಷದ ಅಭ್ಯರ್ಥಿಯಾಗಿದ್ದ ಅನುರಾ ದಿಸ್ಸನಾಯಕೆ ಕೇವಲ ಮೂರು ಮತಗಳನ್ನು ಪಡೆದು ಸೋಲುಂಡರು. ಅಧ್ಯಕ್ಷರಾದ ಬಳಿಕ ಪ್ರತಿಕ್ರಿಯಿಸಿದ ರನಿಲ್ ವಿಕ್ರಮಸಿಂಘೆ, ದೇಶ ತೀವ್ರ ಕಷ್ಟದ ಸ್ಥಿತಿಯಲ್ಲಿದೆ. ಮುಂದೆ ನಾವು ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಗೊಟಬಾಯ ರಾಜಪಕ್ಸ ಅವರ ನಿಕಟ ಸಂಬಂಧಿಕರಾದ ಮಾಜಿ ಪ್ರಧಾನಿ ಮಹೀಂದಾ ರಾಜಪಕ್ಸ ಸೇರಿದಂತೆ ವಿವಿಧ ಕುಟುಂಬ ಪ್ರತಿನಿಧಿಗಳು ಸಂಸತ್ತಿನಲ್ಲಿ ಇತರರ ರೀತಿಯಲ್ಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಂಸದರಾದ ಮಾಜಿ ಸಚಿವ ನಮಲ್ ರಾಜಪಕ್ಸ, ಮಾಜಿ ಸ್ಪೀಕರ್ ಚಮಲ್ ರಾಜಪಕ್ಸ, ತಿಲಕ್ ರಾಜಪಕ್ಸ, ಶಶೀಂದ್ರ ರಾಜಪಕ್ಸ, ಗುಣತಿಲಕ ರಾಜಪಕ್ಸ ಕೂಡ ಸಂಸತ್ತಿನಲ್ಲಿ ಹಾಜರಿದ್ದು ಮತ ಚಲಾಯಿಸಿದ್ದಾರೆ. ಇವರೆಲ್ಲ ಮಾಜಿ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ನಿಕಟ ಸಂಬಂಧಿಕರು. ಮಹೀಂದಾ ರಾಜಪಕ್ಸ ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆಂದು ವದಂತಿ ಹರಡಿದ್ದರೂ, ಅವರು ಇಂದು ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಸತ್ತಿನ ಹೊರಗೆ ಭಾರೀ ಸಂಖ್ಯೆಯಲ್ಲಿ ಮಿಲಿಟರಿ ಮತ್ತು ಪೊಲೀಸರನ್ನು ನಿಯೋಜಿಸಲಾಗಿತ್ತು. ಇತ್ತೀಚೆಗೆ ಅಧ್ಯಕ್ಷರ ನಿವಾಸ ಸೇರಿದಂತೆ ಸಂಸತ್ತಿನ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಭದ್ರತೆ ಹೆಚ್ಚಿಸಲಾಗಿತ್ತು. ರನಿಲ್ ವಿಕ್ರಮಸಿಂಘೆ ಇತ್ತೀಚೆಗಷ್ಟೇ ಜನರ ತೀವ್ರ ವಿರೋಧ ಎದುರಾದ ಬಳಿಕ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆನಂತರ, ಹಂಗಾಮಿ ಅಧ್ಯಕ್ಷರಾಗಿ ನಿಯೋಜಿತರಾಗಿದ್ದರು. 255 ಸದಸ್ಯ ಬಲದ ಸಂಸತ್ತಿನಲ್ಲಿ ರನಿಲ್ ಅವರ ಎಸ್ಎಲ್ ಪಿಪಿ ಪಕ್ಷದ ಪ್ರತಿನಿಧಿಗಳೇ ಹೆಚ್ಚಿದ್ದು, ಜನರ ವಿರೋಧ ಇದ್ದರೂ ಈಗ ಅವರೇ ಅಧ್ಯಕ್ಷ ಸ್ಥಾನಕ್ಕೇರಿದಂತಾಗಿದೆ.

 
 
 
 
 
 
 
 
 
 
 

Leave a Reply