ದೀಪಾವಳಿಗೆ ಕೊಹ್ಲಿ ವಿರಾಟ್ ಪ್ರದರ್ಶನ! ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು!

ಮೆಲ್ಬರ್ನ್, ಅ.23: ಸಿಡಿದ ಕೊಹ್ಲಿ ಪಟಾಕಿ.. ಸೋತು ಗೆದ್ದ ಇಂಡಿಯಾ.. , ಪಾಕ್ ಗೆಲುವು ಕಸಿದ ಫ್ರೀ ಹಿಟ್. ಭಾರತೀಯರ ಉಸಿರು ನಿಲ್ಲಿಸಿದ ಕೊನೆಯ ಓವರ್… ಹೌದು.. ಇವತ್ತು ಭಾರತ ಪಾಕಿಸ್ಥಾನ ವಿರುದ್ಧ ಗೆಲ್ಲುತ್ತೆ ಅಂತ ಯಾರೂ ಅಂದ್ಕೊಂಡಿರಲಿಲ್ಲ. ಯಾಕಂದ್ರೆ, ಕೇವಲ 31 ರನ್ನಿಗೆ ನಾಲ್ಕು ವಿಕೆಟ್ ಕಳಕೊಂಡಿದ್ದ ಭಾರತ ತಂಡ ಸೋಲುವುದು ಖಚಿತವಾಗಿತ್ತು. ಹೆಚ್ಚಿನವರು ಕ್ರಿಕೆಟ್ ನೋಡುವುದನ್ನೇ ನಿಲ್ಲಿಸಿದ್ದರು. ಆದರೆ ಕ್ರೀಸಿನಲ್ಲಿ ಹೆಬ್ಬಂಡೆಯಾಗಿ ನಿಂತುಬಿಟ್ಟ ವಿರಾಟ್ ಕೊಹ್ಲಿ ವಿರಾಟ್ ಪ್ರದರ್ಶನ ಭಾರತ ತಂಡವನ್ನು ಗೆಲುವಿನ ದಡ ದಾಟಿಸಿದ್ದಾರೆ. ಸೋಲುತ್ತಿದ್ದ ಪಂದ್ಯವನ್ನು ಗೆಲುವಿನತ್ತ ಒಯ್ದು ಭಾರತೀಯರಿಗೆ ದೀಪಾವಳಿ ಕಾಣಿಕೆ ನೀಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ಥಾನ ತಂಡ ಎಂಟು ವಿಕೆಟ್ ಕಳಕೊಂಡು 159 ರನ್ ಮಾಡಿತ್ತು. ಮೆಲ್ಬರ್ನ್ ಮೈದಾನದಲ್ಲಿ ಅದು ಒಳ್ಳೆಯ ಸ್ಕೋರ್ ಆಗಿತ್ತು. ಅಲ್ಲದೆ, ಆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರೇ ಹೆಚ್ಚು ಗೆದ್ದಿರುವುದು. ಹಾಗಾಗಿ ಭಾರತಕ್ಕೆ ಸ್ಕೋರ್ ಬೆನ್ನಟ್ಟುವುದು ಕಷ್ಟ ಎಂದೇ ವಿಶ್ಲೇಷಣೆ ನಡೆದಿತ್ತು. ಆದರೆ ಸಾಂಪ್ರದಾಯಿಕ ಮತ್ತು ಬದ್ಧ ಎದುರಾಳಿಯಾಗಿದ್ದ ಪಾಕಿಸ್ಥಾನ ವಿರುದ್ಧ ಗೆಲ್ಲುವುದು ಕೋಟ್ಯಂತರ ಭಾರತೀಯರ ಹಾರೈಕೆಯಾಗಿತ್ತು.

ರನ್ ಬೆನ್ನತ್ತಿ ಬ್ಯಾಟ್ ಹಿಡಿದ ಭಾರತೀಯರು ಕೇವಲ ಆರು ಓವರ್ ಕಳೆಯುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಕಳಕೊಂಡಿದ್ದರು. 31 ರನ್ನಿಗೆ ನಾಲ್ಕು ವಿಕೆಟ್ ಹೋಗಿತ್ತು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸಿನಲ್ಲಿದ್ದರು. ಇವರು ನಿಂತರೂ ಒಂದಷ್ಟು ರನ್ ಹೊಡಿಯಬಹುದಷ್ಟೇ, ಗೆಲ್ಲುವುದು ಸಾಧ್ಯವಿಲ್ಲ ಎಂದೇ ನಂಬಲಾಗಿತ್ತು. ಆದರೆ ಕ್ರೀಸಿನಲ್ಲಿ ಬಂಡೆಯಂತೆ ನಿಂತು ಬಿಟ್ಟ ವಿರಾಟ್ ಕೊಹ್ಲಿ ಸ್ಲಾಗ್ ಓವರ್ ಗಳಲ್ಲಿ ರನ್ ಮಳೆಯನ್ನೇ ಸುರಿಸಿದರು. ಕೊನೆಯ ಎರಡು ಓವರ್ ಬಾಕಿಯಿದ್ದಾಗ 31 ರನ್ ಆಗಬೇಕಿತ್ತು. ಮೊದಲ ಮೂರು ಬಾಲ್ ಉತ್ತಮವಾಗಿ ನಡೆದಿದ್ದರಿಂದ ಎಂಟು ಎಸೆತಗಳಲ್ಲಿ 28 ರನ್ ಮಾಡಬೇಕಿತ್ತು. ಗೆಲುವಿನ ಹತ್ತಿರ ಬಂದು ಸೋಲುವ ಲಕ್ಷಣ ಎದುರಾಗಿತ್ತು.

ಅಷ್ಟರಲ್ಲೇ ಕೊಹ್ಲಿ ಮತ್ತೆ ಸಿಕ್ಸರ್ ಸಿಡಿಸಿದ್ದರು. ಎರಡು ಬಾಲನ್ನು ಬೆನ್ನು ಬೆನ್ನಿಗೆ ಬೌಂಡರಿ ಗೆರೆಯ ಆಚೆಗೆ ಅಟ್ಟಿದ್ದರಿಂದ ಕೊನೆಯ ಓವರ್ ನಲ್ಲಿ 16 ರನ್ ಮಾಡುವ ಗುರಿ ಉಳಿದಿತ್ತು. ಕೊನೆಯ ಓವರ್ ಬೌಲಿಂಗ್ ಸ್ಪಿನ್ನರ್ ಮಹಮ್ಮದ್ ನವಾಜ್ ಅವರದ್ದು. ಅದಕ್ಕೂ ಹಿಂದೆ ಹಾರ್ದಿಕ್ ಪಾಂಡ್ಯ ಆತನ ಓವರಿನಲ್ಲಿ ಸಿಕ್ಸರ್ ಸಿಡಿಸಿದ್ದರಿಂದ ನಿರೀಕ್ಷೆ ಇತ್ತು. ಆದರೆ ಮೊದಲ ಎಸೆತದಲ್ಲಿಯೇ ಹಾರ್ದಿಕ್ ಪಾಂಡ್ಯ ಬ್ಯಾಟಿನಿಂದ ಚಿಮ್ಮಿದ ಚೆಂಡು ಫೀಲ್ಡರ್ ಕೈಗೆ ಹೋಗಿತ್ತು. ಐದು ಎಸೆತಕ್ಕೆ 16 ರನ್ನಿನ ಗುರಿ. ಮತ್ತೆ ಬಂದ ದಿನೇಶ್ ಕಾರ್ತಿಕ್ ಒಂದು ರನ್ ಮಾಡಿ, ಕ್ರೀಸನ್ನು ಕೊಹ್ಲಿಗೆ ಕೊಟ್ಟರು. ಕೊಹ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದ್ದು ಭಾರತದ ಗೆಲುವನ್ನು ಹತ್ತಿರ ಮಾಡಿದ್ದರು. ಆದರೆ ಅಷ್ಟರಲ್ಲೇ ಭಾರತಕ್ಕೆ ಮತ್ತೊಂದು ಕಾಣಿಕೆ ಸಿಕ್ಕಿಬಿಟ್ಟಿತ್ತು. ಬೌಲರ್ ಮಾಡಿದ ಎಡವಟ್ಟಿನಿಂದಾಗಿ ನಾಲ್ಕನೇ ಎಸೆತ ನೋ ಬಾಲ್ ಆಗಿದ್ದರಿಂದ, ಫ್ರೀ ಹಿಟ್ ಸಿಕ್ಕಿಬಿಟ್ಟಿತ್ತು. ಆ ಬಾಲ್ ಕೊಹ್ಲಿ ಬ್ಯಾಟ್ ಮಾಡುತ್ತಿದ್ದಾಗಲೇ ನೇರವಾಗಿ ವಿಕೆಟ್ ಬಿದ್ದಿತ್ತು. ಬೇರೆ ಬಾಲ್ ಆಗುತ್ತಿದ್ದರೆ ಕೊಹ್ಲಿ ಔಟಾಗಿ ಪೆವಿಲಿಯನ್ ಹೋಗಬೇಕಿತ್ತು. ವಿಕೆಟ್ ಬಿದ್ದು ಚೆಂಡು ಬೌಂಡರಿ ಗೆರೆಯತ್ತ ಓಡುತ್ತಿದ್ದಂತೆ ಇತ್ತ ಮೂರು ರನ್ ಓಡಿ, ರನ್ ಗಳಿಸುವಂತಾಗಿತ್ತು.

ಕೊನೆಯ ಎರಡು ಎಸೆತದಲ್ಲಿ ಎರಡು ರನ್ ಆಗಬೇಕಿತ್ತು. ಆದರೆ ಅಷ್ಟರಲ್ಲೇ ದಿನೇಶ್ ಕಾರ್ತಿಕ್ ಸ್ಪಂಪ್ ಔಟ್ ಆಗಿದ್ದು ಭಾರತೀಯರನ್ನು ಮತ್ತೆ ಕುಕ್ಕರಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಹೋಯ್ತು ಹೋಯ್ತು ಅನ್ನುವಾಗಲೇ ಬೌಲರ್ ಮಹಮ್ಮದ್ ಕೈಯಿಂದ ವೈಡ್ ಬಾಲ್.. ಪಾಕಿಸ್ಥಾನದ ಕಡೆಯಿದ್ದ ವಿಜಯ ಲಕ್ಷ್ಮಿ ಭಾರತಕ್ಕೆ ಕೊಟ್ಟು ಬಿಡುವಂತಾಗಿತ್ತು. ಪಾಕಿಸ್ಥಾನಕ್ಕೆ ಅದೃಷ್ಟ ಕೈಕೊಟ್ಟಿತ್ತು.

ಕೊನೆಯ ಎಸೆತದಲ್ಲಿ ಒಂದು ರನ್ನಿಗೆ ಒಂದು ರನ್. ಆರ್. ಅಶ್ವಿನ್ ಒಂದು ರನ್ ಬಾರಿಸುತ್ತಲೇ ಗೆಲುವಿನ ಉದ್ಘಾರ. ವಿರಾಟ್ ಕೊಹ್ಲಿ ಅಬ್ಬರ, ಚೀರಾಟದ ಮಧ್ಯೆಯೇ ಪಾಕಿಸ್ಥಾನ ತಂಡ ಕಳೆಗುಂದುವಂತಾಗಿತ್ತು. ದೀಪಾವಳಿಯ ಸಡಗರದಲ್ಲಿದ್ದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಹಣಾಹಣಿಯ ಸೆಣಸಾಟ ಬಹುಕಾಲದ ಬಳಿಕ ರೋಮಾಂಚನದ ಸಿಹಿ ನೀಡಿತ್ತು. ಆರು ವಿಕೆಟ್ ಕಳಕೊಂಡು ಭಾರತ 160 ರನ್ ಸಾಧಿಸಿತ್ತು. 53 ಎಸೆತದಲ್ಲಿ ವಿರಾಟ್ ಕೊಹ್ಲಿ 82 ರನ್ ಸಿಡಿಸಿದ್ದು ಮೆಲ್ಬರ್ನ್ ಇತಿಹಾಸದಲ್ಲಿ ಕೊಹ್ಲಿ ಪಾಲಿಗೆ ದಾಖಲೆಯೂ ಆಗಿದೆ.

 
 
 
 
 
 
 
 
 
 
 

Leave a Reply