ವಿಮಾನದಲ್ಲಿ ಕನ್ನಡದಲ್ಲಿ ಪ್ರಕಟಣೆ ನೀಡಿದ ಪೈಲೆಟ್ಗೆ ನಾಡೋಜ ಡಾ. ಮಹೇಶ ಜೋಶಿ ಅಭಿನಂದನೆ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿಳಿದ ಎಮಿರೇಟ್ಸ್ ಏರ್ ಬಸ್ ಎ 380ದಲ್ಲಿ ಕನ್ನಡದಲ್ಲಿ ಪ್ರಕಟಣೆ ನೀಡಿ ಕನ್ನಡ ನುಡಿಯ ಅಭಿಮಾನ ಮೆರೆದಿದ್ದ ಪೈಲೆಟ್ ಸಂದೀಪ ಪ್ರಭು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿನಂದಿಸಿದ್ದಾರೆ.
ದುಬೈದಿಂದ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿದ ಅತೀ ದೊಡ್ಡ ಏರ್ ಬಸ್ ಹೆಗ್ಗಳಿಕೆಯ ಎಮಿರೇಟ್ಸ್ ಏರ್ ಬಸ್ ಎ380ನ ಉಡುಪಿ ಮೂಲದ ಪೈಲಟ್ ಆಗಿರುವ ಸಂದೀಪ ಪ್ರಭು ಅವರು ವಿಮಾನ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಕನ್ನಡ ಭಾಷೆಯಲ್ಲಿ ಎಲ್ಲ ಪ್ರಯಾಣಿಕರಿಗೆ ಸ್ವಾಗತ ಕೋರಿದ್ದು ತಿಳಿದು ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿಗೆ ಆಗಮಿಸುವ ಎಲ್ಲಾ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆಗಳನ್ನು ನೀಡಬೇಕು ಎಂದು ವಿಮಾನಯಾನ ಖಾತೆಯ ಹಿರಿಯ ಅಧಿಕಾರಿಗಳಿಗೆ ಆಗ್ರಹಪಡಿಸಿತ್ತು. ಈ ಕುರಿತು ವಿಮಾನಯಾನ ಸಚಿವಾಲಯದೊಂದಿಗೆ ಪತ್ರ ವ್ಯವಹಾರವನ್ನು ನಡೆಸುತ್ತಿದೆ. ಅದಕ್ಕೆ ಸಚಿವಾಲಯದ ಅಧಿಕಾರಿಗಳು ವಿಮಾನದಲ್ಲಿ ಏನೆಲ್ಲಾ ಪ್ರಕಟಣೆಗಳನ್ನು ಕನ್ನಡದಲ್ಲಿ ಮಾಡಬೇಕು ಎನ್ನುವುದನ್ನು ಧ್ವನಿಮುದ್ರಣ ಮಾಡಿಕೊಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲಹೆ ನೀಡಿದ್ದರ ಹಿನ್ನೆಲೆಯಲ್ಲಿ ಧ್ವನಿ ಮುದ್ರಿಸಲು ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕಳೆದ ೧೫ ವರ್ಷಗಳಿಂದ ಪೈಲೆಟ್ ಆಗಿರುವ ಸಂದೀಪ ಪ್ರಭು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಕ್ಕೆ ಇಂಬು ಕೊಡುವಂತೆ ವಿಮಾನದಲ್ಲಿ ಕನ್ನಡ ಭಾಷೆಯನ್ನು ಬಳಸುವಲ್ಲಿ ಮೊದಲಿಗರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಎಲ್ಲ ವಿಮಾನಗಳಲ್ಲಿ ಕನ್ನಡದ ಕಂಪು ಪಸರಿಸಲು ಪೈಲೆಟ್ ಸಂದೀಪ ಪ್ರಭು ಅವರು ನಾಂದಿಹಾಡಿದ್ದಾರೆ. ಇದೊಂದು ಪರಂಪರೆಯಾಗಿ ಬೆಳೆಯಲಿ ಎಂದು ಆಶಿಸಿರುವ ನಾಡೊಜ ಡಾ.ಮಹೇಶ್ ಜೋಶಿಯವರು ಈ ಹಿನ್ನೆಲೆಯಲ್ಲಿ ಸದ್ಯವೇ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಪರ್ಕಿಸಿ ಅವರನ್ನು ಅಭಿನಂದಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply