ಮಳೆ ಹಾನಿಗೆ ತಕ್ಷಣ ಪರಿಹಾರ ವಿತರಿಸಲು ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಗುರುವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಮಳೆ ಹಾನಿ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದರು.

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ. ಮನೆ ಹಾನಿ ವಿವರ ಕುರಿತು ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ ಹಾನಿ ಸಂಭವಿಸಿದ ದಿನದಂದೇ ಅಪ್ ಲೋಡ್ ಮಾಡಿ. ಕೃಷಿ ಬೆಳೆ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಓ ಅವರನ್ನೊಳಗೊಂಡ ತಂಡ ರಚಿಸಿ ಕೂಡಲೇ ಹಾನಿ ಸಮೀಕ್ಷೆ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಂಡು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಅಲ್ಲಿನ ಜನತೆಗೆ ಈ ತಿಂಗಳ ಪಡಿತರದ ಜೊತೆಗೆ ಮುಂದಿನ ತಿಂಗಳ ಪಡಿತರವನ್ನು ಮುಂಚಿತವಾಗಿ ವಿತರಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 116 ಮನೆಗಳಿಗೆ ಭಾಗಶಃ ಹಾನಿ ಮತ್ತು 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಿಸಲಾಗಿದೆ. ವಿಪತ್ತು ಪರಿಹಾರ ನಿಧಿಯಲ್ಲಿ ಹಣದ ಕೊರತೆ ಇಲ್ಲ.  ತಹಸೀಲ್ದಾರ್ ಗಳಿಗೆ ಹಾನಿಯ ಪರಿಹಾರ ವಿತರಿಸುವ ಅಧಿಕಾರ ನೀಡಲಾಗಿದೆ. ಸಂಬಂಧಪಟ್ಟ ತಹಸೀಲ್ದಾರ್ ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಪ್ರವಾಹದಿಂದ ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಜಿಲ್ಲೆಯಲಿ ಇಲ್ಲ. ಪ್ರವಾಹ ಪೀಡಿತ ಸಂಭವವಿರುವ 26 ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಅಧಿಕಾರಿಗಳಿಗೆ ಕೇಂದ್ರಸ್ಥಾನದಲ್ಲಿರಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಸಚಿವರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ಎತ್ತುವಳಿ ಆಗಿದ್ದು, ಕಳೆದ ತಿಂಗಳು 95 ಶೇ. ಪಡಿತರ ವಿತರಣೆ ಆಗಿದೆ. 1 ಸಾವಿರ ಟನ್ ರಸಗೊಬ್ಬರದ ಆವಶ್ಯಕತೆಯಿದ್ದು, ಎಂಸಿಎಫ್ ನಿಂದ ನಾಳೆ ಸರಬರಾಜು ಆಗಲಿದೆ. ರಸಗೊಬ್ಬರ ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ನಡೆದು 88 ಶೇ. ಪೂರ್ಣಗೊಂಡಿದೆ. ಮರವಂತೆ ಮತ್ತು ನಾವುಂದಕ್ಕೆ ಭೇಟಿ ನೀಡಿ ನೆರೆ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದರು.

ಜಿಲ್ಲೆಗೆ ಪ್ರಾಕೃತಿಕ ವಿಕೋಪ ನಿಧಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಸಚಿವ ಬೊಮ್ಮಾಯಿ, ಜಿಲ್ಲೆಯ ಪ್ರತಿದಿನದ ಹಾನಿಯ ವರದಿ ನೀಡುವಂತೆ ಹಾಗೂ ಜಿಲ್ಲೆಯ ನಾಗರಿಕರಿಗೆ ಮಳೆಯಿಂದಾಗಿ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ತಕ್ಷಣ ಸ್ಪಂದಿಸಿ ಅಗತ್ಯ ನೆರವು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಇದ್ದರು.

 
 
 
 
 
 
 
 
 

Leave a Reply