ಉದಯ್ ಗಾಣಿಗ ಕೊಲೆ ಪ್ರಕರಣದಲ್ಲಿ ಬಿಜೆಪಿ ಮೌನ ಯಾಕೆ:ಡಿಕೆ ಶಿವಕುಮಾರ್

ಕುಂದಾಪುರ: ಯಡಮೊಗೆಯಲ್ಲಿ ರಾಜಕೀಯ ದ್ವೇಷ ಸಾಧನೆಗಾಗಿ ಬಿಜೆಪಿ ಪಕ್ಷದ ಮುಖಂಡರು ತಮ್ಮ ಪಕ್ಷದ ಉದಯ್ ಗಾಣಿಗ‌ರನ್ನು ಅಮಾನುಷವಾಗಿ ಹತ್ಯೆ ನಡೆಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಯಡಮೊಗೆಯ ಹೊಸಬಾಳು ಉದಯ್ ಗಾಣಿಗರ ಮನೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಾಂತ್ವನ‌ ಹೇಳಿ ಮಾತನಾಡಿದರು.ಪಕ್ಷ,‌ ಜಾತಿ, ಧರ್ಮದ ನೆಲೆಯಲ್ಲಿ ಹತ್ಯೆಗಳಾಗುವುದು‌ ಖಂಡನೀಯ.ಅವಿಭಜಿತ‌ ದ.ಕ‌ ಜಿಲ್ಲೆಯಲ್ಲಿ ಹತ್ಯೆಗಳು ನಡೆದಾಗ ಓಡೋಡಿ ಬರುತ್ತಿದ್ದ ಬಿಜೆಪಿಗರು ಇಂದು‌ ತಮ್ಮ ಪಕ್ಷದ ಕಾರ್ಯಕರ್ತನ‌ ಹತ್ಯೆ ನಡೆದಿದ್ದರೂ ಮೌನವಾಗಿರುವ ಬಗ್ಗೆ ಅನುಮಾನ ಹುಟ್ಟುತ್ತಿದೆ.‌ 

ನಮಗೆ ನ್ಯಾಯ ನೀಡಿ ಎಂದು ಮೃತ ಗಾಣಿಗರ ಪತ್ನಿ,‌ ತಾಯಿ‌ ಹಾಗೂ ಕುಟುಂಬಿಕರು ಕಣ್ಣೀರಿಡುತ್ತಿದ್ದಾರೆ. ಈ‌ ಪ್ರಕರಣದಲ್ಲಿ‌ ಪ್ರಭಾವಿ ಮುಖಂಡರ ಕೈವಾಡ ಇರುವ ಬಗ್ಗೆಯೂ ಅನುಮಾನ‌ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆಲ್ಲಾ ಹತ್ಯೆ ಪ್ರಕರಣಗಳು ನಡೆದಾಗ ಸಿಬಿಐ ತನಿಖೆಗೆ ನೀಡಿರುವ ದೃಷ್ಟಾಂತಗಳಿರುವುದರಿಂದ‌ ಸರ್ಕಾರ ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಮಾಜಿ‌ ಸಚಿವ‌ ವಿನಯ್ ಕುಮಾರ್ ಸೊರಕೆ ಮಾತನಾಡಿ ಬಿಜೆಪಿ‌ ಪಕ್ಷದ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಈ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವರೇ ಆಗಿರುವುದರಿಂದ ತನಿಖೆಯ ಮೇಲೆ ಪರಿಣಾಮ‌ ಬೀರುವ ಸಾಧ್ಯತೆಗಳಿರುವುದೆ. ಹೀಗಾಗಿ ಸರ್ಕಾರ ಕೂಡಲೇ‌ ಸಿಬಿಐ ತನಿಖೆಗೆ ನೀಡಬೇಕು ಹಾಗೂ ಉದಯ್ ಗಾಣಿಗ ಅವರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಘಟನೆ ನಡೆದು ಇಂದಿನವರೆಗೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿವೈ ರಾಘವೇಂದ್ರ ಮೃತರ ಮನೆಗೆ ಭೇಟಿ ನೀಡದೆ ಇರುವುದನ್ನು ಬೊಟ್ಟು ಮಾಡಿದ ಸ್ಥಳೀಯರು ಹಾಗೂ ಗಾಣಿಗ ಸಮಾಜದ ಪ್ರಮುಖರು ಅಮಾನುಷವಾಗಿ ಹತ್ಯೆಯಾದ ಉದಯ ಗಾಣಿಗರ ಕುಟುಂಬದ ಬಗ್ಗೆ ಇವರಿಗೆ ಅನುಕಂಪವಿಲ್ಲವೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ವತಿಯಿಂದ 1.25 ಲಕ್ಷ ರೂ.‌ಚೆಕ್ ಅನ್ನು ಮೃತ ಉದಯ್ ಗಾಣಿಗ ಪತ್ನಿಗೆ ಹಸ್ತಾಂತರಿಸಿದರು.

ಮಾಜಿ ‌ಶಾಸಕ‌ ಕೆ.‌ಗೋಪಾಲ ಪೂಜಾರಿ, ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಪ್ರಮುಖರಾದ ಮಿಥುನ್‌ ಕುಮಾರ್ ರೈ, ಕಿಶನ್ ಹಗ್ಡೆ ಕೊಳ್ಕೆಬೈಲ್, ಎಸ್ ರಾಜು ಪೂಜಾರಿ, ಗೌರಿ‌ ದೇವಾಡಿಗ, ಹರಿಪ್ರಸಾದ್ ಶೆಟ್ಟಿ ಬಿದ್ಕಲ್‌ಕಟ್ಟೆ, ಟಿಎಂ ಶಹೀದ್ ಸುಳ್ಯ, ಪಿವಿ ಮೋಹನ್, ಪ್ರದೀಪ್‌ ಕುಮಾರ್ ಶೆಟ್ಟಿ ಗುಡಿಬೆಟ್ಟು ಇದ್ದರು.

 
 
 
 
 
 
 
 
 
 
 

Leave a Reply