ತೆಂಕನಿಡಿಯೂರಿನಲ್ಲಿ ರಕ್ತದಾನ ಶಿಬಿರ

ತೆಂಕನಿಡಿಯೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ, ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾಸ್ಪತ್ರೆ ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಮಾ.23 ರಂದು ಆಯೋಜಿಸಲಾಯಿತು.

ತಲ್ಲೂರು ಶಿವರಾಮ ಶೆಟ್ಟಿ, ಸಭಾಪತಿಗಳು, ಭಾರತೀಯ ರೆಡ್‌ಕ್ರಾಸ್, ಉಡುಪಿ ಜಿಲ್ಲಾ ಘಟಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ – ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಡಾ. ವೀಣಾ ವೈದ್ಯಾಧಿಕಾರಿಗಳು ಬ್ಲಡ್ ಬ್ಯಾಂಕ್ ಜಿಲ್ಲಾಸ್ಪತ್ರೆ ಉಡುಪಿ, ರಕ್ತದಾನದ ಮಹತ್ವವನ್ನು ಕುರಿತು ಮಾತನಾಡಿ “ರಕ್ತಕ್ಕೆ ಪರ್ಯಾಯವಿಲ್ಲ. ತುರ್ತು
ಪರಿಸ್ಥಿತಿಯ ಸಂದರ್ಭದಲ್ಲಿ ರಕ್ತದಾನಿಗಳು ಮಾತ್ರ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ. ಕೊರೋನಾದಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ
ರಕ್ತ ನಿಧಿಗಳಲ್ಲಿ ಅಗತ್ಯವಿರುವಷ್ಟು ರಕ್ತದ ಸಂಗ್ರಹವಿಲ್ಲದೆ ಸಮಸ್ಯೆಗಳೊಳಗಾಗಿರುವ
ಪರಿಸ್ಥಿತಿಯನ್ನು ಗಮನಿಸಿಕೊಂಡು ಹೆಚ್ಚು ಸಂಖ್ಯೆಯಲ್ಲಿ ಯುವ ಜನರು ರಕ್ತದಾನದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು” ಎಂದರು.

ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅವರು ಅಧ್ಯಕ್ಷೀಯ ನುಡಿಗಳನ್ನು
ನುಡಿದರು. ಶ್ರೀ ಜಯರಾಮ ಆಚಾರ್ಯ ಸಾಲಿಗ್ರಾಮ, ಕಾರ್ಯದರ್ಶಿಗಳು, ಭಾರತೀಯ ರೆಡ್‌ಕ್ರಾಸ್, ಉಡುಪಿ ಜಿಲ್ಲಾ ಘಟಕ ಉಪಸ್ಥಿತರಿದ್ದರು. ಯೂತ್ ರೆಡ್‌ಕ್ರಾಸ್ ಘಟಕದ ಸಂಚಾಲಕ ಶ್ರೀ ಉದಯ ಶೆಟ್ಟಿ ಕೆ. ಪ್ರಸ್ತಾವಿಸಿ, ಸ್ವಾಗತಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀಮತಿ ಮಮತಾ ವಂದಿಸಿದರು.

ಈ ರಕ್ತದಾನ ಶಿಬಿರದಲ್ಲಿ 68 ಯೂನಿಟ್ ರಕ್ತದಾನ ಮಾಡಲಾಯಿತು. ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ
ಪಾಲ್ಗೊಂಡರು.

 
 
 
 
 
 
 
 
 
 
 

Leave a Reply