ಪೋಲಿಸ್ ಇಲಾಖೆ ಮತ್ತು ಬಸ್ ಮಾಲಕರು,ಏಜಂಟರುಗಳ ಸಭೆ

ಉಡುಪಿ: ಉಡುಪಿ ನಗರದೊಳಗೆ ಸರ್ವೀಸ್ ಬಸ್, ಸಿಟಿ ಬಸ್ ಗಳು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಸೆ.30 ರವರೆಗೆ ಬದಲಾವಣೆಗೆ ಅವಕಾಶ ನೀಡುತ್ತೇವೆ. ಅ.1 ರಿಂದ ಕಠಿಣ ಕ್ರಮ ಜರುಗಿಸುವುದಾಗಿ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರು ಮಂಗಳವಾರ ನಗರದ ಜಗನ್ನಾಥ ಸಭಾಭವನದಲ್ಲಿ ನಡೆದ ಪೋಲಿಸ್ ಇಲಾಖೆ ಮತ್ತು ಬಸ್ ಮಾಲಕರು,ಏಜಂಟರುಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಗರದೊಳಗೆ ಬಸ್ ಗಳು ಸಂಚಾರ ನಿಯಮವನ್ನು ಉಲ್ಲಂಘಿಸುತ್ತಿರುವುದನ್ನು ಕಳೆದ 15 ದಿನಗಳಿಂದ ಪೋಲಿಸ್ ವರಿಷ್ಠಾಧಿಕಾರಿಯವರ ಸೂಚನೆಯ ಮೇರೆಗೆ ಟ್ರಾಫಿಕ್ ಪೋಲಿಸರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಖಾಸಗಿ ಬಸ್ ಮಾಲಕರು ತಮ್ಮ ಬಸ್ಸಿನ ಚಾಲಕರು ಮತ್ತು ನಿವಾರ್ಹಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಜೊತೆಗೆ ಪರವಾನಿಗೆಯನ್ನು ಹೊಂದಿರುವಂತೆ ನೋಡಿಕೊಳ್ಳಬೇಕು. ಮದ್ಯಪಾನ ಮಾಡುವ ಚಾಲಕರಿಗೆ ಕರ್ತವ್ಯ ನಿರ್ವಹಿಸಲು ಬಿಡಬಾರದು ಎಂದು ತಿಳಿಸಿದರು

ಉಡುಪಿ ಬಸ್ ನಿಲ್ದಾಣದಿಂದ ಕುಂದಾಪುರ, ಕಾರ್ಕಳ ಕಡೆಗೆ ತೆರಳುವ ಬಸ್ ಗಳು ನಿಲ್ದಾಣದಿಂದ ಹೊರಟ ನಂತರ ಅಲ್ಲಲ್ಲಿ ಬಸ್ ಅನ್ನು ನಿಲ್ಲಿಸದೇ, ನೇರವಾಗಿ ಮುಂದಿನ ನಿಲ್ದಾಣದಲ್ಲೇ ನಿಲ್ಲಿಸಬೇಕು, ಕುಂದಾಪುರದಿಂದ ಉಡುಪಿಗೆ ಬರುವ ಬಸ್ ಗಳು ಕರಾವಳಿ ಜಂಕ್ಷನ್ ನ ಸರ್ವೀಸ್ ರಸ್ತೆಯಲ್ಲೇ ನಿಲ್ಲಿಸಬೇಕು, ಬನ್ನಂಜೆ ರಸ್ತೆಗೆ ತಿರುಗಿದ ನಂತರ ನಿಲ್ಲಿಸಬಾರದು ಎಂದು ಸೂಚಿಸಿದರು. ಜೊತೆಗೆ ಎಲ್ಲಾ ಬಸ್ ಗಳು ಹೈಡ್ರೋಲಿಕ್ ಡೋರ್ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಬಸ್ ನ ಚಾಲಕರು ಚಾಲನೆ ವೇಳೆ ಮೊಬೈಲ್ ಬಳಸುವುದು ಗಮನಕ್ಕೆ ಬಂದಿದೆ. ಇಯರ್ ಪೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಚಾಲನೆ ಮಾಡುವವರನ್ನು ಗುರುತು ಮಾಡಿದ್ದು ಮುಂದಿನ ದಿನಗಳಲ್ಲಿ ಇದು ಪುನಾರವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಜೊತೆಗೆ ಕರ್ಕಶ ಹಾರ್ನ್ ಗಳನ್ನು ತೆಗೆದು ಹಾಕಬೇಕು ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್, ಉಡುಪಿ ಸಂಚಾರಿ ಠಾಣಾ ನಿರೀಕ್ಷಕ ಅಬ್ದುಲ್ ಖಾದರ್, ಆರ್.ಟಿ.ಓ ಶಾಂತರಾಜು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply