ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರು : ಐವರು ಆರೋಪಿಗಳ ಬಂಧನ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಗಸ್ಟ್ 24 ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ. ಏಳು ತಂಡಗಳಲ್ಲಿ ಪೊಲೀಸರು ಕಾರ್ಯನಿರ್ವಹಿಸಿ ಪ್ರಕರಣ ಬೇಧಿಸಿದ್ದಾರೆ ಎಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಬಂಧಿತರಲ್ಲಿ ಓರ್ವ ಬಾಲಾಪರಾಧಿಯಾಗಿದ್ದು, ಇವರ ವಿಚಾರಣೆ ಮುಂದುವರೆಸಲಾಗಿದೆ.

ತಾಂತ್ರಿಕ ಮಾಹಿತಿಯನ್ನಾಧರಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಐವರು ಆರೋಪಿಗಳಲ್ಲಿ ಓರ್ವ ಬಾಲಾಪರಾಧಿ. ಐವರು ಆರೋಪಿಗಳು ತಮಿಳುನಾಡಿನ ತಿರ್ಪುರದವರಾಗಿದ್ದು, ಮೈಸೂರಿಗೆ ಆಗಾಗ ಕೆಲಸ, ಪಾರ್ಟಿಗೆಂದು ಬಂದು ಹೋಗುತ್ತಿದ್ದರು. ಕೂಲಿ ಕಾರ್ಮಿಕರಾಗಿರುವ ಇವರು 7, 8ನೇ ತರಗತಿಯವರೆಗೆ ಓದಿದ್ದಾರೆ. ಆರೋಪಿಗಳ ಪೈಕಿ ಕೆಲವರ ಮೇಲೆ ಕ್ರಿಮಿನಲ್ ಕೇಸ್ ಇದೆ. ಪಾನಮತ್ತರಾಗಿದ್ದ ಆರೋಪಿಗಳು ಚಾಮುಂಡಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಅಡ್ಡಗಟ್ಟಿ ಮೂರು ಲಕ್ಷ ಹಣ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂದು ಪ್ರವೀಣ್ ಸೂದ್ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ ಪೊಲೀಸರ ತಂಡಕ್ಕೆ ಐದು ಲಕ್ಷ ನಗದು ಬಹುಮಾನವನ್ನು ಘೋಷಿಸಲಾಗಿದೆ.

ನಮ್ಮ ಪೊಲೀಸರ ಬಗ್ಗೆ ಹೆಮ್ಮೆ ಇದೆ. ಕಡಿಮೆ ಅವಧಿಯಲ್ಲಿ ಪೊಲೀಸರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply