ಕಡಿಯಾಳಿ: ಸೆ. 26ರಿಂದ ಅ. 5 ಸಂಭ್ರಮದ ನವರಾತ್ರಿ ಮಹೋತ್ಸವ

ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ. 26ರಿಂದ ಅ. 5ರ ವರೆಗೆ ಶರನ್ನವರಾತ್ರಿ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 5.30ರಿಂದ ಸುಪ್ರಭಾತದಿಂದ ಆರಂಭಗೊಂಡು ಗಣಯಾಗ, ಚಂಡಿಕಾಯಾಗ, ಮಹಾಪೂಜೆ, ಹೂವಿನ ಪೂಜೆ, ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ತಿಳಿಸಿದರು.

ಶುಕ್ರವಾರ ದೇವಸ್ಥಾನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹೋತ್ಸವದ ಪೂರ್ವದಲ್ಲಿ ಸೆ. 26ರಂದು ಸಂಜೆ 5.30ಕ್ಕೆ ಶರ್ವಾಣಿ ಕಲ್ಯಾಣ ಮಂಟಪ ಉದ್ಘಾಟನೆಗೊಳ್ಳಲಿದೆ. ಜೀರ್ಣಾವಸ್ಥೆಯಲ್ಲಿದ್ದ ಶರ್ವಾಣಿ ಕಲ್ಯಾಣ ಮಂಟಪವನ್ನು ಪ್ರಸ್ತುತ ಸುಮಾರು 10 ಸಾವಿರ ಚದರ ವಿಸ್ತೀರ್ಣದಲ್ಲಿ ಅನ್ನಛತ್ರ, ಪಾಕಶಾಲೆ ಸೇರಿದಂತೆ ವಿಸ್ತೃತಗೊಳಿಸಲಾಗಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ 25 ಲಕ್ಷ ರೂ. ಅನುದಾನದೊಂದಿಗೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಿಸಲಾಗಿದೆ.

ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭೆ ಸದಸ್ಯೆ ಗೀತಾ ಶೇಟ್ ಅಭ್ಯಾಗತರಾಗಿರುವರು. ಈ ಕಲ್ಯಾಣ ಮಂಟಪವನ್ನು ಯಾವುದೇ ಬಾಡಿಗೆ ಪಡೆಯದೇ ಧಾರ್ಮಿಕ ಶುಭ ಸಮಾರಂಭಗಳಿಗೆ ಉಚಿತವಾಗಿ ನೀಡಲಾಗುವುದು ಎಂದರು.

27ರಂದು ಬೆಳಗ್ಗೆ 7 ಗಂಟೆಗೆ ಕದಿರು ಕಟ್ಟುವ ಪೂಜೆ, 30ರಂದು ಶುಕ್ರವಾರ ಲಲಿತಾ ಪಂಚಮಿ, ಅ. 2ರಂದು ಶಾರದಾ ಪೂಜೆ, ಅ. 3ರಂದು ದುರ್ಗಾಷ್ಟಮಿ, ಮಹಾಚಂಡಿಕಾ ಹೋಮ, ಅ. 4 ಮತ್ತು 5ರಂದು ಕನ್ನಿಕಾಪೂಜೆ, ಮಹಾಮಂತ್ರಾಕ್ಷತೆ, ವಿಜಯದಶಮಿ, ಶಾರದಾ ವಿಸರ್ಜನೆ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಸುಮಾರು 10 ಮಂದಿಗೆ ಅನ್ನಸಂತರ್ಪಣೆ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವ ಸಂದರ್ಭದಲ್ಲಿ ಸುಮಾರು 2 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಮಾತನಾಡಿ, ನವರಾತ್ರಿ ಅಂಗವಾಗಿ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಅ. 1ರಂದು ಸಂಜೆ 5.30 ರಿಂದ 10.30ರ ವರೆಗೆ ಕಮಲಾ ಬಾಯಿ ಹೈಸ್ಕೂಲ್ ಮೈದಾನದಲ್ಲಿ ಸಾಂಪ್ರದಾಯಿಕ ಶೈಲಿಯ ದಾಂಡಿಯಾ ನೃತ್ಯ ಆಯೋಜಿಸಲಾಗಿದೆ. 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾಗರಾಜ ಶೆಟ್ಟಿ, ಮಂಜುನಾಥ ಹೆಬ್ಬಾರ್, ರಮೇಶ್ ಸೇರಿಗಾರ್, ಕಿಶೋರ್ ಸಾಲಿಯಾನ್ ಮತ್ತು ಗಣೇಶ್ ನಾಯ್ಕ್, ಕಚೇರಿ ನಿರ್ವಾಹಕ ಗಂಗಾಧರ ಹೆಗ್ಡೆ ಇದ್ದರು.

 
 
 
 
 
 
 
 
 
 
 

Leave a Reply