ಪೋಲಿಸರಲ್ಲಿ ಆತ್ಮ ಸ್ಥೈರ್ಯ ವೃದ್ಧಿಸುವ ಕಾರ್ಯ ಶ್ಲಾಘನೀಯ – ಶ್ರೀಶೈಲ

ಶಿರ್ವ: ಬಂಟಕಲ್ಲು ನಾಗರಿಕ ಸೇವಾ ಸಮಿತಿ(ರಿ) ವತಿಯಿಂದ ಮಂಗಳವಾರ ಶಿರ್ವ ಪೋಲಿಸ್ ಠಾಣಾಧಿಕಾರಿ ಶ್ರೀಶೈಲ ಹಾಗೂ ಅಪರಾಧ ವಿಭಾಗದ ಉಪ ನಿರೀಕ್ಷಕ ವೇದಾವತಿ, ಸಿಬ್ಬಂಧಿಗಳಾದ ರಘು, ಅಖಿಲ್ ಎಮ್.ಆರ್ ರವರನ್ನು ಸಾಂಕೇತಿಕವಾಗಿ ಗೌರವಿಸುವ ಮೂಲಕ ಠಾಣೆಯ ಎಲ್ಲಾ ಪೋಲಿಸ್ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.

 ಕಳೆದ ನವೆಂಬರ್ ತಿಂಗಳಲ್ಲಿ ಶಿರ್ವ ಪೋಲಿಸ್ ಠಾಣಾ ವ್ಯಾಪ್ತಿಯ ಬಂಟಕಲ್ಲು ದೇವಸ್ಥಾನದ ಕಂಪೌಂಡ್‌ನಲ್ಲಿ ವಾಸ್ತವ್ಯವಿರುವ ವೃದ್ಧ ಒಂಟಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ದರೋಡೆಗೈದ ಪ್ರಕರಣವನ್ನು ಭೇಧಿಸಿ ಮಹಿಳೆಗೆ ಸರವನ್ನು ಪುನ: ಸಿಗುವಂತೆ ಮಾಡಿದ ವಿಶೇಷ ಸಾಧನೆಗಾಗಿ ಊರಿನ ನಾಗರಿಕರ ಪರವಾಗಿ ಸಮಸ್ತ ಪೋಲಿಸ್ ವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸಲಾಯಿತು. 

 ಗೌರವವನ್ನು ಸ್ವೀಕರಿಸಿದ ಠಾಣಾಧಿಕಾರಿ ಶ್ರೀಶೈಲ ಮಾತನಾಡಿ ಬಂಟಕಲ್ಲು ನಾಗರಿಕ ಸೇವಾ ಸಮಿತಿ ಮಾದರಿಯಾಗಿ ಕಾರ್ಯಾಚರಿಸುತ್ತಿದೆ. ಪೋಲಿಸ್ ಇಲಾಖೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಬಂಟಕಲ್ಲು ಪರಿಸರದಲ್ಲಿ ಆಯಾಕಟ್ಟಿನ ಜಾಗದಲ್ಲಿ ನಾಲ್ಕು ಸಿಸಿ ಕ್ಯಾಮರಾಗಳ ಅಳವಡಿಕೆ, ಜನಸಂಪರ್ಕ ಸಭೆ, ಆಗಾಗ ಬೀಟ್ ಸಭೆಗಳನ್ನು ನಡೆಸುವ ಮೂಲಕ ಪೋಲಿಸ್ ಕಾರ್ಯಕ್ಕೆ ಸಹಕಾರ ನೀಡುತ್ತಿದೆ. ಕಳವು ಪ್ರಕರಣ ಪತ್ತೆ ಮಾಡಿದ ಕಾರ್ಯಕ್ಕೆ ಪೋಲಿಸ್‌ಠಾಣೆಗೆ ಬಂದು ಸನ್ಮಾನಿಸುವ ಮೂಲಕ ಪೋಲಿಸರಿಗೆ ನೈತಿಕ ಬೆಂಬಲ ನೀಡಿ, ಕರ್ತವ್ಯ ನಿರ್ವಹಿಸಲು, ಸ್ಪೂರ್ತಿ, ಆತ್ಮಸ್ಥೈರ್ಯ ತುಂಬುವಂತೆ ಮಾಡಿದ ಕಾರ್ಯ ಶ್ಲಾಘನೀಯ ಎಂದರು.

 ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್, ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸದಸ್ಯರಾದ ಡೇನಿಸ್ ಡಿಸೋಜ, ಹರೀಶ್ ಹೇರೂರು, ವೀರೇಂದ್ರ ಪಾಟ್ಕರ್, ಬಂಟಕಲ್ಲು ಆರ್‌ಎಸ್‌ಬಿ ಯುವವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply