ಬಂಟಕಲ್ಲು: ಅಂಚೆ ಕಛೇರಿ ಸ್ಥಳಾಂತರ

ಶಿರ್ವ:- ಬಂಟಕಲ್ಲು ಶಕ್ತಿಬಾರ್ ಕಟ್ಟಡದ ಸಮೀಪ ಕಾರ್ಯಾಚರಿಸುತ್ತಿದ್ದ ಬಂಟಕಲ್ಲು ಅಂಚೆ ಕಛೇರಿ ಬಂಟಕಲ್ಲು ಕೆಳಪೇಟೆ ಮೈತ್ರಿ ಕಾಂಪ್ಲೆಕ್ಸ್ ನೂತನ ಕಟ್ಟಡಕ್ಕೆ ಗುರುವಾರ ಸ್ಥಳಾಂತರಗೊಂಡಿದೆ.ಕಛೇರಿಯ ಉದ್ಘಾಟನೆಯನ್ನು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಜ್ಯೋತಿ ಪ್ರಜ್ವಲನದ ಮೂಲಕ ನೆರವೇರಿಸಿ ಮಾತನಾಡಿದರು.

ಮೊದಲಿನ ಕಛೇರಿಯಲ್ಲಿ ಸ್ಥಳಾವಕಾಶ ಕಡಿಮೆಯಿದ್ದು,ಹಿರಿಯ ನಾಗರಿಕರಿಗೆ, ಹಾಗೂ ಜನಸಾಮಾನ್ಯರಿಗೆ ವಿದ್ಯುತ್‌ಬಿಲ್ ಸಹಿತ ಇನ್ನಿತರ ಸೇವಾ ಸೌಲಭ್ಯ ಪಡೆದುಕೊಳ್ಳಲು ರಸ್ತೆಯಲ್ಲಿಯೇ ಮಳೆ,ಬಿಸಿಲಿನಲ್ಲಿ ನಿಲ್ಲುವ ಪರಿಸ್ಥಿತಿ ಹಾಗೂ ಕೋವಿಡ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾದ ಸನ್ನಿವೇಶದಲ್ಲಿ ಅಂಚೆ ಕಾರ್ಯನಿರ್ವಾಹಕರ ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಸಹಕಾರದೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ವಿಶೇಷ ಅಹ್ವಾನಿತರಾಗಿದ್ದ ಉಡುಪಿ ದಕ್ಷಿಣ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ನವೀನ್ ವಿ.ಎಲ್.ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಂಚೆಕಛೇರಿಗಳು ಸೀಮಿತ ಅವಕಾಶದೊಂದಿಗೆ ಕಾರ್ಯಾಚರಿಸುತ್ತಿದ್ದು, ಹೆಚ್ಚಿನ ಸೌಲಭ್ಯ ನೀಡಲು ನಿಯಮಾನುಸಾರ ಅವಕಾಶವಿರುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಸ್ಥಳೀಯ ಸಮಸ್ಯೆಗೆ ಸ್ಪಂದಿಸಿ, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಮುತುವರ್ಜಿ ವಹಿಸಿ ನೀಡಿದ ಉತ್ತಮ ಸಹಕಾರಕ್ಕೆ ಇಲಾಖಾ ವತಿಯಿಂದ ಅಭಿನಂದಿಸಿ, ನೂತನ ಕಛೇರಿಗೆ ಹೊಸ ಪೀಠೋಪಕರಣಗಳನ್ನು 15 ದಿನಗಳ ಒಳಗೆ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ನಾಗರಿಕ ಸೇವಾ ಸಮಿತಿ ಉಪಾಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ ವಿಶಾಲಪ್ರದೇಶಕ್ಕೆ ಕಛೇರಿಯ ಸ್ಥಳಾಂತರಕ್ಕೆ ಸ್ಪಂದಿಸಿದ ಕಟ್ಟಡದ ಮಾಲಿಕ ಮಾಧವ ಕಾಮತ್ ಹಾಗೂ ಹೊಸ ಪೀಠೋಪಕರಣಗಳನ್ನು ಇಲಾಖೆ ವತಿಯಿಂದ ಒದಗಿಸುವ ಭರವಸೆ ನೀಡಿದ ಸಹಾಯಕ ಅಂಚೆ ಅಧೀಕ್ಷಕರಿಗೆ ಅಭಿನಂದಿಸಿದರು.

ಅಂಚೆ ಮೇಲ್ವಿಚಾರಕ ವಾಸುದೇವ ತೊಟ್ಟಂ ಶುಭ ಹಾರೈಸಿದರು. ಕಟ್ಟಡದ ಮಾಲಿಕ ಮಾಧವ ಕಾಮತ್, ತಾ.ಪಂ.ಸದಸ್ಯೆ ಗೀತಾ ವಾಗ್ಲೆ, ಉದ್ಯಮಿ ರಾಮ ಶೆಟ್ಟಿ, ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ್ ಧೀರಜ್, ಉಮೇಶ್ ರಾವ್, ಡೇನಿಸ್ ಡಿಸೋಜ,ಉಪಸ್ಥಿತರಿದ್ದರು. ಅಂಚೆ ಪಾಲಕಿ ಯಮುನಾ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ನಾಗರಿಕ ಸೇವಾ ಸಮಿತಿ ಕಾರ್ಯದರ್ಶಿ ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply