ಉಡುಪಿ : ಜಿಲ್ಲೆಯಾದ್ಯಂತ ಸರಳವಾಗಿ ಬಕ್ರೀದ್ ಹಬ್ಬ ಆಚರಣೆ

ಉಡುಪಿ : ಕೋರೊನಾ ನಡುವೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಇಂದು ವಿಶೇಷ ನಮಾಝ್‌ ನಿರ್ವಹಿಸುವ ಮೂಲಕ  ಬಕ್ರೀದ್ ಹಬ್ಬ(ಈದುಲ್ ಅಝಾ) ಸರಳವಾಗಿ ಆಚರಿಸಲಾಯಿತು.ಮುಸ್ಲಿಂ ಬಾಂಧವರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಉಡುಪಿಯ ಜಾಮೀಯ ಮಸೀದಿಯಲ್ಲಿ ಖತೀಬ್ ವೌಲಾನ ರಶೀದ್ ಅಹ್ಮದ್ ನದ್ವಿ ಉಮ್ರಿ ಹಾಗೂ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಕಾಪು, ಬೈಂದೂರು ತಾಲೂಕುಗಳಲ್ಲಿ ವಕ್ಫ್ ನೋಂದಾಯಿತ 138 ಸೇರಿದಂತೆ ಜಿಲ್ಲೆಯ ಒಟ್ಟು 180ಕ್ಕೂ ಅಧಿಕ ಮಸೀದಿಗಳಲ್ಲಿ ಅಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಮಂದಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸಾಮೂಹಿಕ ಈದ್ ನಮಾಝ್ ನೆರವೇರಿಸಲಾಯಿತು.

ಉಡುಪಿ ಹಾಶಿಮಿ ಮಸೀದಿಯಲ್ಲಿ ರಾಜ್ಯ ಆಡಳಿತ ಹೊರಡಿಸಿದ ಮಾರ್ಗಸೂಚಿಗಳೊಂದಿಗೆ ಈದ್ ನಮಾಜ್ ನೆರವೇರಿಸಲಾಯಿತು. ಸಾಮೂಹಿಕ ಪ್ರಾರ್ಥನೆ ನಂತರ ಮೌಲಾನಾ ಹಾಶಿಮ್ ಉಮ್ರಿ ಈದ್ ಅಲ್ ಅಝಾದ ಮಹತ್ವವನ್ನು ತಿಳಿಸಿದರು.

ಸರಕಾರದ ನಿಯಮದಂತೆ 10 ವರ್ಷಕ್ಕಿಂತ ಕೆಳಗಿನ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಸೀದಿಗೆ ಪ್ರವೇಶಿಸುವ ಅವಕಾಶ ಈ ಬಾರಿ ನೀಡಲಾಗಿಲ್ಲ‌. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿರುವ ಮಸೀದಿ ವಠಾರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

 
 
 
 
 
 
 
 
 
 
 

Leave a Reply