ಗೋಸ್ವಾಲ್ ಮೈತ್ರ್ರೇಯ ಆಶ್ರಮದಲ್ಲಿ ಧನ್ವಂತರಿ ಜಯಂತಿ-ರಾಷ್ಟ್ರೀಯ ಆಯುರ್ವೇದ ದಿನಾಚರಣೆ:

ಪಾರಂಪರಿಕ ಶುಶ್ರೂಷಾ ಪದ್ಧತಿಯ ವೈದ್ಯರಿಗೆ ಪ್ರತಿಷ್ಠಿತ ಗೋಸ್ವಾಲ್ ಪ್ರಶಸ್ತಿ ಪ್ರದಾನ.
ಗೋಸ್ವಾಲ್ (ಗ್ಲೋಬಲ್ ಆರ್ಗನೈಸೇಷನ್ ಫಾರ್ ಸೈಂಟಿಫಿಕ್ ವ್ಯಾಲಿಡೇಷನ್ ಆಫ್ ಆಯುರ್ವೇದಿಕ್ ಲೈಫ್ ಸೈನ್ಸಸ್) ಸಂಸ್ಥೆಯು, ವಿಶ್ವ ಆಯುರ್ವೇದ ಪರಿಷತ್ ನ ಸಹಯೋಗದೊಂದಿಗೆ ‘ಸಮುದ್ರಮಂಥನ ಮಹೋತ್ಸವ’ವನ್ನು ಅಕ್ಟೋಬರ್ 23, 2022 ರವಿವಾರ ಸಂಜೆ 5 ಗಂಟೆಗೆ ಕುಂದಾಪುರ- ತೆಕ್ಕಟ್ಟೆಯ,  ಮೈತ್ರೇಯ ಆಯುರ್ವೇದ ಆಶ್ರಮ ದಲ್ಲಿ, “ಧನ್ವಂತರಿ ಜಯಂತಿ- ರಾಷ್ಟ್ರೀಯ ಆಯುರ್ವೇದ ದಿನ” ದಂದು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಹಿರಿಯ ಸಾಧಕ ವೈದ್ಯರಿಗೆ ಪ್ರತಿಷ್ಠಿತ ‘ಗೋಸ್ವಾಲ್ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಗುತ್ತಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ  ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ನೆರವೇರಿಸಲಿದ್ದು, ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಇವರ ಘನ ಉಪಸ್ಥಿತಿಯಲ್ಲಿ ಭಾರತದ ಪ್ರಸಿದ್ಧ ಆಯುರ್ವೇದ ವಿದ್ವಾಂಸ, ವೈದ್ಯ, ಸಾಧಕ, ಲೇಖಕ ಪ್ರೊ ಬನ್ವಾರಿ ಲಾಲ್ ಗೌರ್, ವಿಶ್ರಾಂತ ವೈದ್ಯಾಧಿಕಾರಿ ಪಾರಂಪರಿಕ ವೈದ್ಯ ಪದ್ಧತಿ ಪಾರಂಗತೆ ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ ದೈತೋಟ, ನಾಟಿವೈದ್ಯ ಮುಲ್ಕಿ ಗಂಗಾಧರ್ ಶೆಟ್ಟಿ ಹಾಗೂ ಯೋಗ ಚಿಕಿತ್ಸಾ ತಜ್ಞೆ  ಝರುಬಿನಾ ರೆಜಿನಾ ನಿಕೋಲಾವ್ನಾ ಅವರುಗಳನ್ನು “ಗೋಸ್ವಾಲ್ ಕಿರಣ್” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ದೇವ ವೈದ್ಯ ಧನ್ವಂತರಿ’ ಎಂಬ ಯಕ್ಷಗಾನ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಮಹಾವಿಷ್ಣುವೇ ಧನ್ವಂತರಿ ಯಾಗಿ ಆವಿರ್ಭವಿಸಿ, ಮುಂದೆ ಚ್ಯವನ ಮಹರ್ಷಿಯ ಮೂಲಕ ಆಯುರ್ವೇದ ವೈದ್ಯ ಪದ್ಧತಿಯನ್ನು ಭೂಲೋಕಕ್ಕೆ ನೀಡಿದ ಕಥಾನಕ ಇದು. ಯಕ್ಷಗಾನ ಕಲಾವರಣ ಭಂಗವಾಗದಂತೆ ಸಮಕಾಲಿನ ಸಂದರ್ಭಕ್ಕೆ ಅನುಗುಣವಾಗಿ ಕಥನವನ್ನು ಪ್ರಸ್ತುತಿ ಪಡಿಸಲಾಗುತ್ತದೆ.

ಭಾರತದಲ್ಲಿ ವಿಫುಲವಾದ ಶುಶ್ರೂಷಾ ಪರಂಪರೆಯಿದ್ದು, ಭಾರತದ ಆಯುರ್ವೇದ ಜ್ಞಾನವನ್ನು ಇಡೀ ಜಗತ್ತಿಗೆ ಪಸರಿಸುವ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಆಶಯಕ್ಕೆ ಪೂರಕವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ‘ಪಿಎಂ ಸಮಗ್ರ ಶಾಸ್ತ್ರ ಮಿಷನ್’ ಮೂಲಕ ‘ಹೀಲ್ ಇನ್ ಇಂಡಿಯಾ’ ಮತ್ತು ‘ಹೀಲ್ ಬೈ ಇಂಡಿಯಾ’ ಎಂಬ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಆಯುರ್ವೇದದ ಮೂಲಕ ವಿಶ್ವವನ್ನು ಭಾರತದತ್ತ ಆಕರ್ಷಿಸಿ, ವಿಶ್ವವಿಖ್ಯಾತ ಭಾರತೀಯ ಪಾರಂಪರಿಕ ಜ್ಞಾನ ಪರಂಪರೆಗೆ ಜಾಗತಿಕ ಮಟ್ಟದ ಮನ್ನಣೆಯನ್ನು ಕೊಡಿಸುವ ಪ್ರಧಾನ ಮಂತ್ರಿಗಳ ಧ್ಯೇಯವನ್ನು ಕೂಡ ಈ ಕಾರ್ಯಕ್ರಮವು ಬೆಂಬಲಿಸುತ್ತದೆ. ‘ದೇವ ವೈದ್ಯ ಧನವಂತರಿ’ ಯಕ್ಷಗಾನ ಪ್ರಸಂಗದ ಆಶಯವೂ ಇದೇ ಆಗಿದೆ, ಎಂದು ಸಂಸ್ಥೆಯ ನಿರ್ದೇಶಕ ಡಾ.ತನ್ಮಯ ಗೋಸ್ವಾಮಿ ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.

Leave a Reply