ನೃತ್ಯ ಸಾಧನೆಯ ಒಡತಿ ಕೃತಿ ಆರ್ ಸನಿಲ್…

ಉಡುಪಿಯ ಕೃತಿ ಆರ್. ಸನಿಲ್ ನೃತ್ಯ ಜಗತ್ತಿನ ಉದಯೋನ್ಮುಖ ಪ್ರತಿಭೆ. ಹಲವು
ರಿಯಾಲಿಟಿ ಶೋಗಳ ಮೂಲಕ ತನ್ನ ಪ್ರತಿಭೆ ಅನಾವರಣ ಮಾಡಿರುವ ಈ ನೃತ್ಯಪಟು ಹಲವು ಸ್ಪರ್ಧೆಗಳನ್ನು ಗೆಲ್ಲುತ್ತ, ಸನ್ಮಾನ- ಗೌರವಗಳಿಗೆ ಪಾತ್ರಳಾಗುತ್ತ ಸಾಧನೆಯ ಮಿಂಚು ಹರಿಸಿದ್ದಾಳೆ.

ರೂಪೇಶ್ ಹಾಗೂ ರೋಹಿಣಿ ಅವರ ಪುತ್ರಿ ಕೃತಿ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಗುರುಗಳಾದ ವಸಂತ್ ಉಡುಪಿ ಅವರಲ್ಲಿ ನೃತ್ಯ ತರಬೇತಿ ಪಡೆದುಕೊಂಡ ಅವರು ಉಡುಪಿ ಹಾಗೂ ರಾಜ್ಯದ ಅನೇಕ ಕಡೆ ನಡೆಯುವ
ಹಲವು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತ ಬಂದರು.

ನೃತ್ಯ ವಿದ್ಯೆಯನ್ನು ಎಲ್ಲರಿಗೂ ಕಲಿಸಬೇಕು ಎಂಬ
ಉದ್ದೇಶದಿಂದ ಗುರುಗಳಾದ ವಸಂತ್ ಅವರ ಜೊತೆಗೂಡಿ ಉಡುಪಿಯಲ್ಲಿ ವಿ ರಾಕ್ಸ್ ಡ್ಯಾನ್ಸ್ ಕಂಪನಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಕೆಲವೇ ಸಂಖ್ಯೆ ಮಕ್ಕಳಿಂದ ಶುರುವಾದ ಸಂಸ್ಥೆ ಇಂದು ಅನೇಕ ಮಕ್ಕಳಿಗೆ ನೃತ್ಯ ಶಿಕ್ಷಣ ನೀಡುವ
ಹೆಮ್ಮರವಾಗಿ ಬೆಳೆದಿದೆ. ಡ್ಯಾನ್ಸ್ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ
ತುಡಿತ ಇರುವ ಮಕ್ಕಳಿಗೆ ಈ ಸಂಸ್ಥೆ ಅವಕಾಶಗಳನ್ನು ಮಾಡಿ ಕೊಡುತ್ತಿದೆ.
ನೃತ್ಯದಲ್ಲಿ ಮಾತ್ರವಲ್ಲದೆ ಯಕ್ಷಗಾನ, ಚಿತ್ರಕಲೆ, ಅಭಿನಯ, ಸಂಗೀತದಲ್ಲೂ ಆಸಕ್ತಿ ಇರುವ ಇವರಿಗೆ ಅತೀ ಹೆಚ್ಚು ಪ್ರೀತಿ ನೃತ್ಯ. ರಿಯಾಲಿಟಿ ಶೋಗಳಾದ
ಈ ಟಿವಿ ತೆಲುಗು ಡಿ ಜ್ಯೂನಿಯರ್ ಸೀಸನ್-2ನಲ್ಲಿ ನೃತ್ಯ ಪ್ರದರ್ಶನ ನೀಡಿದ್ದು ಇವರ ಸ್ಮರಣಾರ್ಹ ಪ್ರದರ್ಶನಗಳಲ್ಲಿ ಒಂದು. ಕನ್ನಡ ರಿಯಾಲಿಟಿ ಶೋಗಳಾದ ಪುಟಾಣಿ ಫ್ರೆಂಡ್ ಫೈನಲ್‌ನಲ್ಲಿ ಪ್ರದರ್ಶನವನ್ನು ನೀಡಿರುವ ಕೃತಿ, ವಿವಿಧ ಕನ್ನಡ ಚಾನಲ್‌ಗಳಲ್ಲಿ
ಪ್ರದರ್ಶನಗೊಳ್ಳುವ ಮಾಸ್ಟರ್ ಡ್ಯಾನ್ಸರ್, ಡ್ಯಾನ್ಸ್ ಧಮಾಕಾದಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ. ಡಿಡಿ ಚಂದನ ವಾಹಿನಿಯಲ್ಲೂ ನೃತ್ಯ ಪ್ರದರ್ಶನ ನೀಡಿದ್ದಾರೆ.
ಇವರ ನೃತ್ಯ ಪ್ರದರ್ಶನಕ್ಕೆ ಕರುನಾಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಪ್ರತಿಭಾ ರತ್ನ
ಪ್ರಶಸ್ತಿ, ರಾಷ್ಟ್ರೀಯ ನೃತ್ಯಕಲಾ ಪ್ರಶಸ್ತಿ, ಕರ್ನಾಟಕ ಪ್ರತಿಭಾ ರತ್ನ, ಅಬ್ಬನಡ್ಡ ಸೌರಭ ಪ್ರಶಸ್ತಿ, ಮಡಿಲು ಸನ್ಮಾನ್‌ ಪುರಸ್ಕಾರಗಳ ಜೊತೆ ಕರಾವಳಿ ಸಿರಿ, ವಿದ್ಯಾರ್ಥಿ ಶ್ರೀ ಎಂಬ ಬಿರುದುಗಳು ಲಭಿಸಿವೆ. ಹ್ಯಾಪಿ ಉಡುಪಿ, ಹೆಜ್ಜೆನಾದ ಮತ್ತಿತರ ಆಲ್ಬಮ್ ಸಾಂಗ್‌ಗಳಲ್ಲೂ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. 1500ಕ್ಕೂ ಅಧಿಕ ನೃತ್ಯ ಪ್ರದರ್ಶನ ನೀಡಿದ್ದಕ್ಕೆ ಇವರ ಹೆಸರು ಫ್ಯುಚರ್ ಕಮಲ್ಸ್ ಬುಕ್ ಆಫ್ ರಿಕಾರ್ಡ್ಸ್, ಯುನಿವರ್ಸಲ್ ಅಚಿವರ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಸಾಧನೆಯ ಹಾದಿಯಲ್ಲಿ ಕೃತಿ ಇನ್ನಷ್ಟು ದೂರ
ಸಾಗಲಿ ಎನ್ನವುದು ನೃತ್ಯ ಪ್ರೇಮಿಗಳ ಹಾರೈಕೆ.

 
 
 
 
 
 
 
 
 
 
 

Leave a Reply