ಉಡುಪಿಯಲ್ಲಿ ಹಾಸ್ಟೆಲ್ ಮಂಜೂರಿಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ: ಭರವಸೆ ನೀಡಿದ ಬೊಮ್ಮಾಯಿ

ಉಡುಪಿ: ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನೇರವೆರಿಸಿದರು. ರಘುಪತಿ ಭಟ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭಾಧ್ಯಕ್ಷತೆ ವಹಿಸಿದ್ದ ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಗೆ ಶಿಕ್ಷಣಕ್ಕಾಗಿ ಆಗಮಿಸುವ ವಿದ್ಯಾರ್ಥಿನಿಯರು ಪಿಜಿ ಅಥವಾ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ.ಇದು ಆರ್ಥಿಕವಾಗಿ ಅವರಿಗೆ ಹೊರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಉಡುಪಿ ಮಹಿಳಾ ಹಾಸ್ಟೆಲ್ ಆವಶ್ಯಕತೆ ಇದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ, ಹಾಗೆ ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟ ಜಿಲ್ಲೆಯಾಗಿದೆ. ಇಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣ ಹೊಂದಿದ್ದು, ಇಲ್ಲಿಗೆ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದಾರೆ. ಇವರು ತಂಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಗೆ ಮಹಿಳಾ ಹಾಸ್ಟೆಲ್ ಮಂಜೂರು ಮಾಡಿ ಎಂದು ಜಿಲ್ಲಾ ಉಸುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಶಾಸಕರು ಮನವಿ ಮಾಡಿದರು.ಕಟ್ಟಡ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿಯ ಕೊಡುಗೆ ಅಪಾರವಾಗಿದ್ದು ಶಾಸಕರ ಬೇಡಿಕೆಯಂತೆ ಮಹಿಳಾ ಹಾಸ್ಟೆಲ್ ಮಂಜೂರು ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವ ಭರವಸೆ ಒದಗಿಸಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷ ಶೀಲಾ ಕೆ. ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸ್ಥಳೀಯ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ., ಕಾಲೇಜು ಪ್ರಾಂಶುಪಾಲ ರುದ್ರ ಗೌಡ ಎಸ್. ಮತ್ತು ಕಾಲೇಜಿನ ಉಪನ್ಯಾಸಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಸ್ವಾಗತಿಸಿದರು. ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ವಂದಿಸಿದರು. ಉಪನ್ಯಾಸಕ ದಯಾನಂದ್ ಕಾರ್ಯಕ್ರಮ ನಿರೂಪಿಸಿದರು. 
 
 
 
 
 
 
 
 
 
 
 

Leave a Reply