ರಾಮ ಕಥಾ ಚಿತ್ರ ಚಿತ್ತಾರದಿ ​ಕೊಡವೂರ ಶೃಂಗಾರ~ಪೂರ್ಣಿಮಾ ‌ಜನಾರ್ದನ್

ಅಲ್ಲಿ ನೋಡಿದರೂ ರಾಮ… ಇಲ್ಲಿ ನೋಡಿದರೂ ರಾಮ… ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀ ರಾಮ ಎಂಬ ಕೀರ್ತನೆಯ ಸಾಲುಗಳು ಬರಿಯ ಕರ್ಣಗಳಿಗೆ ಮಾತ್ರವಲ್ಲದೆ ಕಣ್ಣುಗಳಿಗೂ ಕೂಡ ತಲುಪಿ ಊರ ತುಂಬ ಶ್ರೀರಾಮಕಥೆ ಜೀವ ಕಳೆ ತಂದಿದೆ. ಹೌದು ನಮ್ಮೂರಿನ ರಸ್ತೆಯ ಇಕ್ಕೆಲಗಳ ಮನೆ, ಗೋಡೆ, ಆವರಣಗಳು ಪಾಗಾರದ ತುಂಬೆಲ್ಲ ರಾಮಾಯಣ ಸರಣಿಯ ಚಿತ್ರ ವೈಭವ. ರಾಮಾವತಾರದ ಕಥೆಯನ್ನು ಸಾರುವ ವಿಶಿಷ್ಟ ಚಿತ್ರಗಳು ದಾರಿಹೋಕರನ್ನು ಒಂದಷ್ಟು ಹೊತ್ತು ನಿಲ್ಲಿಸಿ ತಮ್ಮ ಸೌಂದರ್ಯವನ್ನು ಸವಿಯಲು ಕಲಾಭಿಮಾನಿಗಳನ್ನು, ಭಕ್ತ ಜನರನ್ನು ಆಹ್ವಾನಿಸುತ್ತಾ ಮನಮೋಹಕ ಚಿತ್ತ ಚಿತ್ತಾರಗಳಾಗಿ ಜನರನ್ನು ಆಕರ್ಷಿಸುತ್ತಲಿದೆ.

ಒಂದು ಗೋಡೆ ರಾಮ ಲಕ್ಷ್ಮಣ ಸೀತೆಯರಿಂದ ಅಲಂಕೃತವಾದರೆ ಪಾಗಾರವೊಂದು ಪಂಚವಟಿಯಲ್ಲಿ ಸೀತೆ ಮತ್ತು ಮೋಹಕ ಬಂಗಾರದ ಜಿಂಕೆಯ ಚಿತ್ರದಲ್ಲಿ ಶೋಭಿತ , ಮತ್ತೊಂದು ಗೋಡೆಯಲ್ಲಿ ರಾಮಭಕ್ತ ಹನುಮಂತ, ಮತ್ತಿನ್ನೊಂದು ಗೋಡೆಯಲ್ಲಿ ರಾಮನಿಗೆ ಹಣ್ಣು ತಿನ್ನಿಸುತ್ತಿರುವ ಶಬರಿಯ ಭಕ್ತಿ..ಮತ್ತೊಬ್ಬರ ಮನೆಯ ಆವರಣದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಕಥೆಯ ಪೂರ್ಣ ಚಿತ್ರಣ .

ಇನ್ನೂ ಒಂದು ಗೋಡೆಯ ತುಂಬಾ ಸಂಪೂರ್ಣ ಸರಳ ರಾಮಾಯಣದ ಕಥಾ ಸ್ವರೂಪ. ಎಲ್ಲಿ ನೋಡಿದರಲ್ಲಿ ಶ್ರೀರಾಮನ ಭವ್ಯ ಆಕರ್ಷಕ ಪ್ರಸನ್ನ ಮುಖಮುದ್ರೆ, ಸೀತಾಮಾತೆ, ಲಕ್ಷ್ಮಣನ ಕಾರುಣ್ಯಪೂರ್ಣ ವದನ, ದಾಸ ಶ್ರೇಷ್ಠ ಹನುಮಂತನ ಭಕ್ತಿ ಭಾವ, ಸ್ವರ್ಣ ಜಿಂಕೆಯ ಲಾಲಿತ್ಯ, ಶರಧಿ ಸೇತುವೆಯ ಕಟ್ಟುವ ಕಪಿ ಸೈನ್ಯದ ಸಡಗರ. ಅದರೊಂದಿಗೆ ಸೀತಾ ಕಲ್ಯಾಣ, ಗುಹನೊಂದಿಗೆ ಸರಯೂ ನದಿ ದಾಟುವ ರಾಮ ಲಕ್ಷ್ಮಣ ಸೀತಾ, ಪಂಚವಟಿ, ಜಟಾಯು ಮೋಕ್ಷ, ಅಶೋಕ ವನ, ರಾವಣ ಸಂಹಾರ, ಎಲ್ಲಕ್ಕಿಂತ ಹೆಚ್ಚು ಗಮನಸೆಳೆವ ಭವ್ಯ ಭಾರತದ ಶ್ರೇಷ್ಠ ಮಂದಿರ ಅಯೋಧ್ಯಾಮಂದಿರದ ಪ್ರತಿ ಕೃತಿ.

ಮನ ಸೆಳೆಯುವ ಮುದ್ದು ರಾಮಲಲ್ಲಾ ವಿಗ್ರಹದ ಆಕರ್ಷಕ ರೂಪದ ಚಿತ್ರಣ. ಅರೆ ಒಂದೇ ಎರಡೇ, ಎಲ್ಲಿ ನೋಡಿದರಲ್ಲಿ ಗೋಡೆ ತುಂಬಾ ರಾಮಾಯಣ ಮಹಾಕಾವ್ಯದ ವರ್ಣನೆ.ಮನದ ದುಗುಡ ಕಳೆದು ನಾಲಿಗೆಯ ತುಂಬಾ ಶ್ರೀ ರಾಮ ನಾಮ. ಕಣ್ಣುಗಳ ತುಂಬಾ ಶ್ರೀರಾಮ ರೂಪ. ಭವ ಸಾಗರದ ಬವಣೆ ನೀಗಿ ಭವದ ಮುಕ್ತಿಗೊಂದು ಭಾವ ಲಹರಿ .ಪುಟ್ಟ ಪುಟ್ಟ ಬಾಲ ಪ್ರತಿಭೆಗಳಿಂದ ಆರಂಭವಾದ ಈ ಚಿತ್ರ ಚಿತ್ತಾರದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿರಿಗೂ ಒಂದೇ ವೇದಿಕೆ. ಅವರವರ ಭಾವಕ್ಕೆ, ಅವರವರ ಭಕುತಿಗೆ, ಅವರವರ ಪ್ರತಿಭೆಗೆ, ಅವರವರ ಕಲ್ಪನೆಗೆ ಸಂದ ಅಪೂರ್ವ ಅವಕಾಶ.

ಒಂದಷ್ಟು ಪ್ರಾಯೋಜಕರನ್ನು ಒಟ್ಟುಗೂಡಿಸಿ ಅವರಿಂದ ಸಂಗ್ರಹಿತವಾದ ಧನದಿಂದ ಕಲಾ ಕೃತಿ ರಚಿಸಲು ಅಗತ್ಯವಾದ ಪರಿಕರಗಳನ್ನು ಕೊಂಡು ತಂದು ಆಸಕ್ತ ಕಲಾವಿದರಿಗೊಂದು ವೇದಿಕೆಯ ಸೃಷ್ಟಿ. ಕಲಾಕಾರರಲ್ಲಿ ಇನ್ನಷ್ಟು ಹುಮ್ಮಸ್ಸು ಹೆಚ್ಚಲು ಸ್ಪರ್ಧೆ ಹಾಗು ಬಹುಮಾನದ ಘೋಷಣೆ. ಮಾತ್ರವಲ್ಲದೆ ಹಳೆಯ ಗೋಡೆ, ಕಪ್ಪು ಕಟ್ಟಿದ ಆವರಣ ,ಪಾಚಿಹಿಡಿದ ಪಾಗಾರಗಳೆಲ್ಲ ಶುಚಿಗೊಂಡು ಅಲ್ಲೆಲ್ಲ ರಾಮಾವತಾರ ಕಥೆಯ ಕಲಾ ಶೃಂಗಾರ. 

ಇದು ಕೊಡವೂರಿನ ನಗರಸಭಾ ಸದಸ್ಯ ವಿಜಯ ಕೊಡವೂರುರವರ ವಿಶಿಷ್ಟ ಪರಿಕಲ್ಪನೆ. ಕೊಡವೂರಿನ ವಾರ್ಡ್ ಅಭಿವೃದ್ಧಿ ಸಮಿತಿ, ಸ್ನೇಹಿತ ಯುವ ಸಂಘ ಕಾನಂಗಿ  ಹಾಗು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಒಂದಷ್ಟು ರಾಮಭಕ್ತರ ಸಾಥ್. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಡಗರಕ್ಕೆ ಒಂದು ಪುಟ್ಟ ಕೊಡುಗೆ. ಆ ಮೂಲಕ ಮನೆಯ ಒಳಗೆ ಮಾತ್ರವಲ್ಲ ಮನೆಯ ಹೊರಗೂ ರಾಮಸ್ಮರಣೆಯ ಸಂಭ್ರಮ.

ಅಯೋಧ್ಯೆಯ ರಾಮ‌ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡು ನಮ್ಮನ್ನು ಅನುಗ್ರಹಿಸುವ ಶ್ರೀ ರಾಮ ನಮ್ಮೆಲ್ಲರ ಮನೋ ಮಂದಿರದಲ್ಲಿ ನೆಲೆಸಿ ನಮ್ಮನ್ನು ಉದ್ಧರಿಸಲಿ . ನಮ್ಮ ರಾಷ್ಟ್ರ ರಾಮನ ಆದರ್ಶ ಮೆರೆವ ಪವಿತ್ರ ತಾಣವಾಗಲಿ ,ನಮ್ಮ ಮಣ್ಣಿನ ಕಣ ಕಣದಲ್ಲಿ ರಾಮ‌ನಾಮ ಅನುರಣಿಸಲಿ ಎಂಬ ಆಶಯದೊಂದಿಗೆ ಲೋಕಾ ಸಮಸ್ತಾ ಸುಖಿನೋ ಭವಂತು.. ಸಮಸ್ತ ಸನ್ಮಂಗಳಾನಿ ಭವಂತು ಎಂದು ಪ್ರಾರ್ಥನೆ.

~ಪೂರ್ಣಿಮಾ ‌ಜನಾರ್ದನ್ ಕೊಡವೂರು\94812 14104

 
 
 
 
 
 
 
 
 
 
 

Leave a Reply