Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

101 ವರ್ಷ ಹಳೆಯ ‘ಯೆಲ್ಲೂರು ಮಹಾತ್ಮ್ಯಂ’~ಕೆ.ಎಲ್.ಕುಂಡಂತಾಯ

ಉಡುಪಿ ಜಿಲ್ಲೆ , ಕಾಪು ತಾಲೂಕಿನ‌ ಎಲ್ಲೂರಿನಲ್ಲಿರುವ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ಕುರಿತಂತೆ ವಿಶೇಷ ಆಸಕ್ತಿಯಿಂದ ನಿರಂತರ ಶೋಧನೆಗಳು ನಡೆಯುತ್ತಿದ್ದು ಹೊಸಹೊಸ ವಿಚಾರಗಳು , ಪ್ರಸ್ತುತ ರೂಢಿಯಲ್ಲಿರುವ ಸಂಪ್ರದಾಯ – ಶಿಷ್ಟಾಚಾರಗಳಿಗೆ ಹಾಗೂ ನಂಬಿಕೊಂಡು ಬಂದಿರುವ ಒಡಂಬಡಿಕೆಗಳಿಗೆ ಪೂರಕವಾದ ಅಂಶಗಳು ಬೆಳಕಿಗೆ ಬರುತ್ತಲೇ ಇವೆ .ಈಗಾಗಲೇ ದಾಖಲೆಯಾಗಿರುವ ದೇವಾಲಯದ ಇತಿಹಾಸ ,ಪೌರಾಣಿಕ ಹಿನ್ನೆಲೆಗಳು ಮತ್ತಷ್ಟು ಹೆಚ್ಚು ಆಧಾರಗಳೊಂದಿಗೆ ದೃಢವಾಗುತ್ತಿವೆ.

ಹಿರಿಯ ಶಿಕ್ಷಕ – ವೈದಿಕ ವಿದ್ವಾಂಸರಾಗಿದ್ದ ಮಾಣಿಯೂರು ಮಠದ ಮುಖ್ಯಪ್ರಾಣಾಚಾರ್ಯರು 1918ರಲ್ಲಿ ದೇವಾಲಯದ ಆಗ ಮ್ಯಾನೇಜರ್ ಆಗಿದ್ದ ರಾಘವೇಂದ್ರರಾಯರ ಮೂಲಕ‌ ಒಂದು ಸಣ್ಣ ಪುಸ್ತಕವನ್ನು ನನಗೆ ಕಳುಹಿಸಿದ್ದರು. “ಈ ಪುಸ್ತಕ ಅವನಿಗೆ ಬೇಕಾದೀತು‌ , ಹೊಸ ವಿಷಯ ಏನಾದರೂ ಸಿಗಬಹುದು” ಎಂದೂ ಸೂಚಿಸಿದ್ದರು .

ಸಂಸ್ಕೃತ ಶ್ಲೋಕಗಳಿರುವ ಪುಸ್ತಕವು ಹಳೆಯ ಮಗ್ಗಿ ಪುಸ್ತಕದ ಅಳತೆಯಲ್ಲಿದ್ದು ಇದರ ಹೆಸರು‌ “ಯೆಲ್ಲೂರು ಮಹಾತ್ಮ್ಯಂ‌”. ಕೇವಲ ೨೦+೨ ಹಾಗೂ ಹೊದಿಕೆಯ ನಾಲ್ಕು ಪುಟಗಳನ್ನು ಹೊಂದಿದೆ .11- 2- 1919 ರಂದು ಪ್ರಕಟವಾಗಿತ್ತು .ಆಗ ಪುಸ್ತಕದ ಬೆಲೆ ಎರಡಾಣೆ. 2020 ನೇ ಇಸವಿಯ ಫೆಬ್ರವರಿ ಎರಡನೇ ತಾರೀಕಿಗೆ ಈ ಪುಸ್ತಕಕ್ಕೆ 101 (ನೂರ ಒಂದು) ವರ್ಷವಾಯಿತು.

‌’ಯೆಲ್ಲೂರು ಮಹಾತ್ಮ್ಯಂ’: ಒಟ್ಟು ನಾಲ್ಕು ಅಧ್ಯಾಯಗಳಾಗಿ ಯೆಲ್ಲೂರು ಮಹಾತ್ಮ್ಯೆಯನ್ನು ವಿವರಿಸಲಾಗಿದೆ .೧೪೩ ಶ್ಲೋಕಗಳಿವೆ. ಈ ಪುಸ್ತಕಕ್ಕೆ ಸಂಗ್ರಾಹಕರು ಬರೆದ ‘ಪ್ರಸ್ತಾವನೆ’ಯಲ್ಲಿ ಕ್ಷೇತ್ರ ಮಹಾತ್ಮೆಯ ಕತೆಯ ಸಂಕ್ಷಿಪ್ತ ವಿವರಣೆ ಇದೆ . ” ದೇವಾಲಯದ ಗರ್ಭಗುಡಿಯ ದೀಪದಳಿಯ ಮೇಲಿನ ಹಂತದಲ್ಲಿ ಜೀರ್ಣೋದ್ಧಾರದ ವೇಳೆ ಅಳವಡಿಸಿರುವ ಕ್ಷೇತ್ರ ಪರಿಚಯದ ದೃಶ್ಯಗಳ ಕಥೆಯನ್ನು ಈ ಪುಸ್ತಕ ದೃಢೀಕರಿಸುತ್ತದೆ”. 

ಕಥಾಸಾರ : ಕುಂದಕುಲೋತ್ಪನ್ನನಾದ ರಾಜನು ಗ್ರಾಮಸಮೀಪಕ್ಕೆ ಬಂದ ಭಾರ್ಗವ ಮುನಿಯನ್ನು ತನ್ನ ಗ್ರಾಮಕ್ಕೆ ಬರಬೇಕೆಂದು‌ ಬೇಡಿದನು. ಆಮುನಿಯು ದೇವಾಲಯ ಶೂನ್ಯವಾದ ನಿನ್ನ ದೇಶಕ್ಕೆ ಬರಲಾರೆನೆಂದು‌ ಹೇಳಿಹೋದನು. ರಾಜನು ದುಃಖದಿಂದ ಕಡಂಬಳಿತ್ತಾಯ ಕುಲಜನಾದ ವಿಪ್ರನಿಂದ ಕೂಡಿ ಕಾಶಿಗೆ ಹೋಗಿ ರುದ್ರನನ್ನು ಸೇವಿಸಿ ಪ್ರಸನ್ನನಾದ ದೇವನಿಂದ ಹುಲಿ – ದನ ಕೂಡಿ ವೈರವಿಲ್ಲದೆ ವಾಸಿಸುವ ಮೈಲಾರನೆಂಬ ಶಿವಾರ್ಚಕ ಬ್ರಾಹ್ಮಣನ ಶುದ್ಧ ಸ್ಥಳದಲ್ಲಿ‌ ಉದ್ಭವಿಸುವೆನೆಂದು ವರವನ್ನು ಪಡೆದು ತನ್ನ ದೇಶಕ್ಕೆ ಹಿಂದಿರುಗಿ ಬಂದನು.

ಹಾಗೆಯೇ ಅಲ್ಲಿ ಮಹಾದೇವನು‌ ಉದ್ಭವಿಸುತ್ತಿರುವಾಗ ಬುಡಕಟ್ಟು ಮಹಿಳೆಯೊಬ್ಬಳು ಗಡ್ಡೆಯನ್ನು ಕೀಳುವುದಕ್ಕೆ ಕತ್ತಿಯನ್ನು ಭೂಮಿಗೆ ಹೊಡೆಯಲು ಅಲ್ಲಿ ರಕ್ತವು ತೋರಿತು‌.ಆಗ ಅವಳು ಹೆದರಿ ತನ್ನ ಮೃತ ಪುತ್ರನ ರಕ್ತವೆಂದು ಭಾವಿಸಿ “ಯೆಲ್ಲೋ …” ಎಂದು ಕೂಗುತ್ತಾ ಓಡಿದಳು .ಆ ದೇವನು ತಲೆಯಲ್ಲಿ ಆ ಗಾಯವನ್ನು ಧರಿಸಿ ಮೇಲಕ್ಕೆ ಬಂದನಾದುದರಿಂದ ಆಸ್ಥಳಕ್ಕೆ “ಯೆಲ್ಲೂರು” ಎಂಬ ಹೆಸರಾಯಿತು .ಈ ರೀತಿ ಅರಸನಿಗೆ ಪ್ರಸನ್ನನಾದ ಮಹಾದೇವನು ಆ ಸ್ಥಳದಲ್ಲಿ ಭಕ್ತ ಜನರಿಗೆ ಸರ್ಮಾಭೀಷ್ಟವನ್ನು ಕೊಡುತ್ತಿರುವನು. (ಕತೆ ಇನ್ನೂ ವಿಸ್ತಾರವಾಗಿ ಮಹಾತ್ಮ್ಯೆಯಲ್ಲಿದೆ)

ಇದೇ ಪುಸ್ತಕದ ಕೊನೆಯ ಪುಟದಲ್ಲಿ (ಹೊದಿಕೆಯ ಪುಟ) ಮುದ್ರಿತವಾದ ‘ಸೂಚನೆ” : ಇಂತಹ ಪ್ರಸಿದ್ಧವಾದ ಕ್ಷೇತ್ರದ ಮಹಿಮೆಯನ್ನು ಪ್ರಕಟಿಸಬೇಕಾಗಿ ಈ ಕ್ಷೇತ್ರದ ಸಂದರ್ಶನಾರ್ಥಿಗಳಾಗಿ‌ ಬಂದಿದ್ದ ಮದರಾಸು ಸಂಸ್ಥಾನದ ಸಂಸ್ಕೃತ ಶಾಲೆಗಳ ಸೂಪರಿಂಟೆಂಡೆಂಟ್ ಆದ ಮ.ರಾ.ರಾ. ಸೇಲಂ‌ ಸುಬ್ರಾವ್ ಎಂ.ಎ. ಇವರ ಸೂಚನಾನುಸಾರ ದೇವಸ್ಥಾನದ ಅರ್ಚಕರೊಬ್ಬರಲ್ಲಿದ್ದ ಅತಿ ಜೀರ್ಣ “ತಾಲಪ್ರತಿ”ಯಿಂದ ಸಂಗ್ರಹಿಸಿ‌ ಶ್ರೀ ಅದಮಾರು ಮಠದ ಶ್ರೀ ವಿಬುಧಪ್ರಿಯ ಶ್ರೀ ಪಾದಂಗಳವರ ಆಜ್ಞೆಯಂತೆ ಛಾಪಿಸಿ ಪ್ರಕಟಿಸಲ್ಪಟ್ಟಿತು. ಕುಂಜೂರು ವ್ಯಾಸರಾವ್ಆ, ಡಳಿತೆದಾರ, ಎಲ್ಲೂರು ದೇವಸ್ಥಾನ .

(ಈಗಾಗಲೇ ಜನಪ್ರಿಯವಾಗಿದ್ದು, ಬಹು ಸಂಖ್ಯೆಯ ಭಕ್ತರು ಒಪ್ಪಿರುವ ಕಥೆ ಹಾಗೂ 1996 ರಲ್ಲಿ ದೇವಸ್ಥಾನದ ವತಿಯಲ್ಲಿ ಪ್ರಕಟವಾಗಿ‌, ಈಗ ಮೂರನೇ ಅವೃತ್ತಿಯಾಗಿ‌ ಲಭ್ಯವಿರುವ “ಮಹತೋಭಾರ ಯೆಲ್ಲೂರು ವಿಶ್ವನಾಥ” ಪುಸ್ತಕದಲ್ಲಿ ದಾಖಲೆಯಾಗಿರುವ ಮೂರು ಕತೆಗಳಲ್ಲಿ ವಿಸ್ತಾರವಾದ ಒಂದು ಕತೆಗೆ ಈ ‘ನೂರ ಒಂದು’ ವರ್ಷ ಹಳೆಯ ಪುಸ್ತಕ ಕತೆ ಸಮರ್ಥನೆಯನ್ನು ನೀಡುತ್ತದೆ.) ಅನುವಾದ ಸಹಿತ ಪ್ರಕಟವಾಗುತ್ತದೆ

ಬಳಿಕ ಎರಡುಬಾರಿ ಈ “ಯೆಲ್ಲೂರು ಮಹಾತ್ಮ್ಯಂ” ಪುಸ್ತಕದಲ್ಲಿರುವ ಸಂಸ್ಕೃತ ಶ್ಲೋಕಗಳ ಅನುವಾದ ಸಹಿತದ ‘ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡ’ದಲ್ಲಿರುವ “ಯೆಲ್ಲೂರು ಮಹಾತ್ಮೆ” ಎಂದು ಕನ್ನಡ ತಾತ್ಪರ್ಯ ಸಹಿತದ ಪುಸ್ತಕವು ದೇವಾಲಯದ ವತಿಯಲ್ಲಿ ಮುದ್ರಣವಾಗುತ್ತದೆ(ಭಕ್ತರ ಪ್ರಯೋಜನಾರ್ಥವಾಗಿ ಎಲ್ .ನರಸಿಂಗರಾಯರು ಕನ್ನಡ ತಾತ್ಪರ್ಯ ಸಹಿತವಾದ ಈ ಪುಸ್ತಕವನ್ನು ಮುದ್ರಿಸಿಕೊಟ್ಟರು ಎಂದು ಒಂದನೇಯ ಅಥವಾ ಎರಡನೇ ಆವೃತ್ತಿಯ ಪ್ರಸ್ತಾವನೆಯಲ್ಲಿದೆ.)ಆ ಎರಡು ಆವೃತ್ತಿಗಳು ಲಭ್ಯವಿಲ್ಲ .ಮುದ್ರಣವಾದ ವರ್ಷ ತಿಳಿದು ಬರುವುದಿಲ್ಲ.

ಆದರೆ 1974ರ ವೇಳೆ ದ್ವಿತೀಯ ಮುದ್ರಣದ ಪ್ರತಿಗಳು ಲಭ್ಯವಿತ್ತು ಎಂಬುದಕ್ಕೆ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಆ ದ್ವಿತೀಯ ಆವೃತ್ತಿಯನ್ನು ಆಧರಿಸಿ “ಕುಂಜೂರು ಶ್ರೀ ದುರ್ಗಾ ದೇವಸ್ಥಾನ”  ಎಂಬ ಒಂದು ಸಣ್ಣ ಕೈಪಿಡಿಯನ್ನು ಕುಂಜೂರು ದೇವಸ್ಥಾನಕ್ಕಾಗಿ ಬರೆದು ಕೊಡುತ್ತಾರೆ. ಈಗ ಹಲವೆಡೆ ಲಭ್ಯವಿರುವ “ಎಲ್ಲೂರು ಮಹಾತ್ಮೆ” ಅದು 1976 ರಲ್ಲಿ ಮುದ್ರಣವಾದ ಮೂರನೇ ಆವೃತ್ತಿಯ ಪ್ರತಿಗಳು ದೇವಾಲಯದ ಕಚೇರಿಯಲ್ಲಿ ಇರಬೇಕು. ಕನ್ನಡ ತಾತ್ಪರ್ಯ ಸಹಿತದ ಈ ಪುಸ್ತಕದ ಒಂದು ಮೂಲ ಪ್ರತಿ (ಸಂಸ್ಕೃತ ಶ್ಕೋಕಗಳು ಮಾತ್ರ ಇರುವ. ಪುಸ್ತಕ ಸಂಗ್ರಹಿಸುವವರಲ್ಲಿ‌ ಈ ಪ್ರತಿಗಳು ಇರಬಹುದು) ಈಗ ಲಭ್ಯವಾಗಿದೆ. ಈ ಪುಸ್ತಕ ಈ ವರೆಗೆ ದಾಖಲಿಸಿದ ಕತೆಗಳಿಗೆ ನೂರೊಂದು ವರ್ಷ ಪುರಾತನ ಆಧಾರವಾಗುತ್ತದೆ.

1996 ನೇ ಇಸವಿ ಏಪ್ರಿಲ್13 ನೇ ತಾರೀಕಿನಂದು ಪ್ರಸ್ತುತ ಲಭ್ಯವಿರುವ ಕ್ಷೇತ್ರ ಪರಿಚಯ ಪುಸ್ತಕ ‘ಮಹತೋಭಾರ ಎಲ್ಲೂರು ವಿಶ್ವನಾಥ’ ದೇವಾಲಯದ‌ ವತಿಯಲ್ಲಿ ಮುದ್ರಿಸಲ್ಪಟ್ಟು ಬಿಡುಗಡೆಯಾಗುತ್ತದೆ. ಕಳೆದ 24 ವರ್ಷಗಳಲ್ಲಿ ಇದೇ ಪುಸ್ತಕ ದೇವಾಲಯದ ವತಿಯಲ್ಲಿ ಮತ್ತೆರಡು ಬಾರಿ ಮುದ್ರಣಗೊಳ್ಳುತ್ತದೆ. ಈಗ ದೇವಾಲಯದಲ್ಲಿ ಮಾರಾಟಕ್ಕೆ ಲಭ್ಯವಿರುವ ಪುಸ್ತಕ, ಮೂರನೇ  ಆವೃತ್ತಿಯದ್ದು.

ಎಲ್ಲೂರು ಮಹಾತ್ಮ್ಯೆ: ತಾನು ಎಲ್ಲೂರಿಗೆ ಹೇಗೆ ,ಯಾಕೆ ಹೋದೆನು , ಎಲ್ಲಿ ,ಯಾವ ಸುಸ್ಥಳದಲ್ಲಿ ಆವಿರ್ಭವಿಸಿದೆ ಎಂಬುದನ್ನು ಮಹಾದೇವನು ಪಾರ್ವತಿಗೆ ಹೇಳುತ್ತಾ : “ಪಿಲಾರುಕಾನ , ಸಾಂತೂರು , ನಂದಿಕೂರು , ಪಾದೆಬೆಟ್ಟು ,ಕುಂಜೂರು ,ಉಳಿಯಾರು , ಕಾಪು ಸಮೀಪದ‌ ಪಾಂಗಾಳ‌ , ಕಳತ್ತೂರು ,ಪೇರೂರು , ಶಿರ್ವ , ಮುಂತಾದ ಹತ್ತು ಪುಣ್ಯ ಕ್ಷೇತ್ರಗಳನ್ನು ಪಿಲಾರಕಾನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಭಾರ್ಗವನೆಂಬ ಮಹರ್ಷಿಯು ಸಂಕಲ್ಪಸಿದ್ದನು.

ಆ‌ ಹತ್ತು ಕ್ಷೇತ್ರಗಳ ಮಧ್ಯೆ ನಾನು ಆವಿರ್ಭವಿಸಿದೆ ಅದೇ ‘ಯೆಲ್ಲಾಪುರ’ ಅಥವಾ ಯೆಲ್ಲೂರು” ಎಂದು ಈಶ್ವರನು ಹೇಳುತ್ತಾನೆ . ಈ ಹತ್ತು ಕ್ಷೇತ್ರಗಳಲ್ಲಿ “ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ” ಎಂದೂ ಉದ್ಗರಿಸುತ್ತಾನೆ .
ಹೀಗೆ ಕುಂಜಪುರ – ಕುಂಜೂರು ಕ್ಷೇತ್ರ ಸಂಕಲ್ಪದ ಕತೆಯನ್ನು ಹೇಳುತ್ತಾ ಹರಿಯುತ್ತಿರುವ ವಾರುಣಿ ಎಂಬ ನದಿಯನ್ನು ಮುಚ್ಚಿ ಬದಿಯಲ್ಲಿ ಭೂಮಿಯನ್ನು ಪವಿತ್ರವಾಗಿಸಲು ಯಾಗವೊಂದನ್ನು ಮಾಡಲು‌ ಸಂಕಲ್ಪಿಸುತ್ತಾನೆ (ಈ ಕುರಿತ ವಿಸ್ತಾರವಾದ ವಿವರಣೆ ಇದೆ , ಪ್ರಮಾಣಗಳಿವೆ.

ಯಾಗ ನೆರವೇರಿಸಿದ ಕ್ರಮವಿದೆ , ಸಹಕರಿಸಿದ ವಂಶಸ್ಥರ , ವಂಶಗಳ ಹೆಸರುಗಳಿವೆ). ಯಾಗ ಪೂರೈಸಿದ ಬಳಿಕ ದುರ್ಗಾ ಶಕ್ತಿಯನ್ನು ಸಂಕಲ್ಪಿಸುತ್ತಾನೆ. ಈ ವಿವರಗಳು ಈಗಾಗಲೇ ನಮೂದಾಗಿದೆಯಾದರೂ ಆ ವಿವರಣೆಗೆ ನೂರೊಂದು ವರ್ಷ ಪುರಾತನ ದಾಖಲೆಯೊಂದು ಸಿಕ್ಕಿದೆ (ಇನ್ನಷ್ಟು ಹೊಸ ವಿಷಯಗಳು ಇತ್ತೀಚೆಗೆ ಲಭ್ಯವಾಗಿದ್ದು ಮುಂದೆ ವಿವರಿಸುವ).

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!