Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಧೂಮಪಾನ ಬಿಡಿ, ಧೂಮಪಾನಿಗಳ ಹತ್ತಿರಕ್ಕೂ ಸುಳಿಯಬೇಡಿ~ಡಾ.ರಾಮಚಂದ್ರ ಕಾಮತ್,ಮಣಿಪಾಲ

ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಪ್ರತಿ ವರ್ಷ ಮೇ31 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ತಂಬಾಕು ಸೇವನೆ, ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಅರಿವು ಮೂಡಿಸುವುದು, ಮುಂದಿನ ದಿನಗಳಲ್ಲಿ ಈ ದುಷ್ಚಟಕ್ಕೆ ಬಲಿಯಾಗದೇ ಇರಲು ಯೋಜನೆಗಳನ್ನು ನಿರ್ಮಿಸಿ ಕಾರ್ಯರೂಪಕ್ಕೆ ತರುವುದು ಈ ದಿನದ ಉದ್ದೇಶ.
 
ತಂಬಾಕು ಸೇವನೆಯಿಂದ ಪ್ರತೀ ವರ್ಷ ವಿಶ್ವದಾದ್ಯಂತ ಸುಮಾರು 8 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಕೊನೆಯುಸಿರು ಎಳೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆಯತ್ತ ಒಲವು ತೋರಿಸುತ್ತಿರುವುದು ದುರಾದೃಷ್ಟಕರ ಸಂಗತಿ. ಆದ್ದರಿಂದ ಶಾಲಾ ಮಕ್ಕಳಿಗೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರೆ ಭವಿಷ್ಯದಲ್ಲಿ ಅವರು ಇದರಿಂದ ದೂರವಿರುವುದು ಖಂಡಿತ.
 ಸುಮಾರು 15 ರಿಂದ 19ನೇ ವರ್ಷದಲ್ಲಿ ಯುವ ಜನರು ಸ್ನೇಹಿತರ ಸಹವಾಸ, ನಟ-ನಟಿಯರ ಅನುಕರಣೆ, ಪೋಷಕರ ಪ್ರಭಾವದಿಂದ ದುರಾಭ್ಯಾಸಕ್ಕೆ ಒಳಗಾಗಿ ಕಡಿಮೆ ವಯಸ್ಸಿನಲ್ಲಿಯೇ ರೋಗ ರುಜಿನಗಳಿಂದ ಸಾವನ್ನಪ್ಪು ತ್ತಿದ್ದಾರೆ. ಧೂಮಪಾನವು ಒತ್ತಡವನ್ನು ಕಡಿಮೆ ಮಾಡುತ್ತದೆ. ಧೈರ್ಯ, ಸಂತೋಷವನ್ನು ನೀಡುತ್ತದೆ ಎಂಬ ತಪ್ಪು ಕಲ್ಪನೆಯಿಂದ ಧೂಮಪಾನವನ್ನು ಪ್ರಾರಂಭಿಸಿ ಜನ ಸಮಸ್ಯೆಗಳಿಗೆ ತುತ್ತಾಗುತ್ತಾರೆ. 
ತಂಬಾಕನ್ನು ಬೀಡಿ, ಸಿಗರೇಟ್ ಸಿಗಾರ್, ಗುಟುಕ, ಜರ್ದಾ, ನಶ್ಯದ ಪುಡಿ, ಹುಕ್ಕಾ ಸಿಗರೇಟ್ ಹೀಗೆ ನಾನಾ ರೀತಿಯಲ್ಲಿ ಸೇವನೆ ಮಾಡುತ್ತಾರೆ. ಧೂಮಪಾನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಧೂಮಪಾನ ಮಾಡುವವರಿದ್ದಾರೆ. ತಾವೇ ತಂಬಾಕು ಸೇವನೆ ಮಾಡಿ ಅವರವರ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಜೊತೆಗೆ ಸುತ್ತ ಮುತ್ತಲಿನ ಜನರ ಆರೋಗ್ಯವನ್ನೂ ಸಹ ಹಾಳು ಮಾಡುತ್ತಾರೆ. 
ನಾನು ಸುಡುತ್ತಿರುವ ಸಿಗರೇಟ್ ನನ್ನನು ಮತ್ತು ಸುತ್ತಲ ಪ್ರಪಂಚವನ್ನು ಒಟ್ಟಿಗೆ ಸುಡುತ್ತದೆ ಎಂಬ ಅರಿವು ಇರುವುದೇ ಇಲ್ಲ. ಸಿಗರೇಟ್ ಸೇವನೆಯಿಂದ ಬರುವ ಹೊಗೆಯು ಮನೆಯಲ್ಲಿ, ಕೆಲಸದ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿರುವ ಆರೋಗ್ಯವಂತ ಜನರ ಶ್ವಾಸಕೋಶವನ್ನು ಸೇರುತ್ತದೆ. ಇದನ್ನು ಪರೋಕ್ಷ ಧೂಮಪಾನ (ಸೆಕೆಂಡ್ ಹ್ಯಾಡ್ ಸ್ಮೋಕ್) ಎಂದು ಕರೆಯುತ್ತಾರೆ. ಪರೋಕ್ಷ ಧೂಮಪಾನಗಳೂ ಸಹ ಎಲ್ಲಾ ತರಹದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ.
 
ಸಿಗರೇಟಿನಲ್ಲಿ (1-2 ಮಿಲಿ ಗ್ರಾಂನಷ್ಟು) ನಿಕೋಟಿನ್ ಎಂಬ ರಾಸಾಯನಿಕ ವಸ್ತು ಉದ್ದೀಪನ ಹಾಗೂ ಖಿನ್ನತೆ ಯನ್ನು ಉಂಟು ಮಾಡುತ್ತದೆ. ನಿಕೋಟಿನ್ ಶ್ವಾಸಕೋಶವನ್ನು ಸೇರಿ ತದನಂತರ ರಕ್ತ ಸಂಚಾರದ ಮೂಲಕ ನರಮಂಡಲದ ಮೇಲೆ ಪರಿಣಾಮವನ್ನು ಬೀರಿ ದೈಹಿಕ ಅವಲಂಬನೆ ಹಾಗೂ ಮಾನಸಿಕ ಅವಲಂಬನೆಗೆ ಒಳಗಾಗುತ್ತಾರೆ. ಇವರನ್ನು ಧೂಮಪಾನದ ವ್ಯಸನಿಗಳೆಂದು ಕರೆಯುತ್ತಾರೆ.
ಧೂಮಪಾನಗಳಲ್ಲಿ ಪ್ರಮುಖವಾಗಿ ಕಂಡುಬರುವ ಇನ್ನೊಂದು ಲಕ್ಷಣವೆಂದರೆ ಧೂಮಪಾನಿಗಳ ಕೆಮ್ಮು (ನಿಲ್ಲದ ಕೆಮ್ಮು ಮತ್ತು ಕಫ) ಇದು ಮುಂದೆ ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತದೆ. ತಂಬಾಕಿನಲ್ಲಿ 700ಕ್ಕೂ ಮೀರಿದ ರಾಸಾಯನಿಕಗಳಿದ್ದು ಅದರಲ್ಲಿ 100ವಿಷಕಾರಕ ಹಾಗೂ 69 ಕ್ಯಾನ್ಸರ್ ವಿಷಕಾರಕಗಳಿವೆ.  ಈ ರಾಸಾಯನಿಕಗಳು (ಬೆನ್ಜೀನ್ ಕ್ಯಾಡ್‌ಮಿಯಂ, ಕಾರ್ಬನ್ ಮೊನಾಕ್ಸೆಡ್, ನಿಕೋಟಿನ್) ಶ್ವಾಸಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಜಠರದ ಕ್ಯಾನ್ಸರ್, ಹೃದಯಾಘಾತ, ರಕ್ತದೊತ್ತಡ, ಪಾರ್ಶ್ವವಾಯು, ಅನ್ನನಾಳದ ಕ್ಯಾನ್ಸರ್, ಶ್ವಾಸಕೋಶದ ಸೋಂಕು ಹೀಗೆ ಹಲವಾರು ಗುಣಪಡಿಸಲಾಗದ ರೋಗಗಳಿಗೆ ಕಾರಣವಾಗುತ್ತದೆ.
ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ 90% ರಷ್ಟು ಕಾರಣವಾಗಿದೆ ಎಂದು ಹಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಶೇ 37% ರಷ್ಟು ಜನರು ಸಾರ್ವಜನಿಕ ಸ್ಥಳಗಳಲ್ಲಿ ಅನ್ಯರು ಸೇವಿಸುವ ಧೂಮಪಾನದ ಹೊಗೆ ಸೇವಿಸುತ್ತಾರೆ. ಭಾರತದಲ್ಲಿ, ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ತಂಬಾಕಿನಿಂದ ಬರುವ ಕ್ಯಾನ್ಸರ್ ಪ್ರಮಾಣ ಕ್ರಮವಾಗಿ 56.4% ಹಾಗೂ 44.9%. ಮಹಿಳೆಯರಲ್ಲಿ ಬಂಜೆತನ, ಗರ್ಭಪಾತ, ಕಡಿಮೆ ತೂಕದ ಮಗುವಿನ ಜನನ, ಗರ್ಭಕೋಶದ ಕ್ಯಾನ್ಸರ್, ಮುಂತಾದ ತೊಂದರೆಗಳು ಕಂಡುಬರುತ್ತದೆ. ಧೂಮಪಾನವು ಆರ್ಥಿಕ ಸಮಸ್ಯೆ, ಆರೋಗ್ಯದ ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗೆ ಕಾರಣ.
 
ಸರಕಾರವು ಅನೇಕ ಕಾರ್ಯಕ್ರಮ-ಯೋಜನೆಗಳನ್ನು ಹಮ್ಮಿಕೊಂಡರೂ ಧೂಮಪಾನಗಳ ಸಂಖ್ಯೆ, ಅನಾರೋಗ್ಯದ ಸಮಸ್ಯೆ ಹೆಚ್ಚಳವಾಗಿದೆಯೇ ವಿನ: ಕಡಿಮೆಯಾಗಲಿಲ್ಲ.
*ಸಿಗರೇಟ್ ಬೆಲೆಯನ್ನು ಹೆಚ್ಚಿಸಿದ್ದರಿಂದ ಸಿಗರೇಟ್ ಬಳಕೆಯನ್ನು ಕಡಿಮೆಗೊಳಿಸಲು ಹಾಗೂ ತ್ಯಜಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ. * ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧದಿಂದ ಯುವ ಜನರು ಆಕರ್ಷಿಸ ಲಾಗದೇ ಇರಲು ಸಾಧ್ಯ. *ಸಿಗರೇಟ್ ಪ್ಯಾಕ್‌ನಲ್ಲಿ ಆರೋಗ್ಯ ಹಾನಿಗಳ ಬಗ್ಗೆ ಎಚ್ಚರಿಕೆಯ ಸಂದೇಶ ಹಾಗೂ ಚಿತ್ರಗಳು ಧೂಮಪಾನಗಳನ್ನು ಎಚ್ಚತ್ತುಕೊಳ್ಳುವಂತೆ ಮಾಡುತ್ತದೆ.
*೧೮ ವರ್ಷ ಕೆಳಗಿನವರಿಗೆ ಸಿಗರೇಟ್ ಮಾರಾಟ ಮಾಡಲು ನಿಷೇಧವಿರುವುದರಿಂದ ಯುವಜನರು ಸಿಗರೇಟ್ ಪಡೆಯಲು ಅಸಾಧ್ಯ. *ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧ- ಇದು ಪರೋಕ್ಷ ಧೂಮಪಾನವನ್ನು ಕಡಿಮೆಮಾಡುತ್ತದೆ. *ಶಾಲಾ ಕಾಲೇಜು ವಿಧ್ಯಾ ಸಂಸ್ಥೆಗಳು ವಠಾರಗಳಲ್ಲಿ ತಂಬಾಕು ಸೇವನೆ ಮಾರಾಟ ನಿಷೇಧದಿಂದ ಯುವಜನರನ್ನು ರಕ್ಷಿಸಬಹುದು.
*ಧೂಮಪಾನದ ದುಷ್ಚಟದಿಂದ ಹೊರಬರಲು ಪ್ರತಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಘಟಕವನ್ನು ಪ್ರಾರಂಭಿಸ ಲಾಗಿದೆ. ಸ್ವಯಂ ಪ್ರೇರಣೆಯಿಂದ ಅಥವಾ ಕುಟುಂಬದವರ ಸಲಹೆಯ ಮೇರೆಗೆ ಧೂಮಪಾನಿಗಳು ತಂಬಾಕು ನಿಯಂತ್ರಣ ಘಟಕದಿಂದ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಸಹಾಯವನ್ನು ಪಡೆಯಬಹುದು.
*ಸರ್ಕಾರ, ಸರಕಾರೇತರ ಹಾಗೂ ಇತರ ಸಂಸ್ಥೆಗಳು ಯುವ ಜನರು ಪರಿಣತರು ಎಲ್ಲರೂ ಒಟ್ಟಾಗಿ ಪ್ರತೀ ಜಿಲ್ಲೆ, ಪಟ್ಟಣ, ಗ್ರಾಮ, ಶಾಲೆ ಹಾಗೂ ಮನೆಯನ್ನು ತಂಬಾಕು ಮುಕ್ತ ಮಾಡಲು ಸಹಕರಿಸಿದರೆ. ತಂಬಾಕು ಮುಕ್ತ ದೇಶವನ್ನು ಕಾಣಲು ಸಾಧ್ಯ. 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!