ಸಾಮೂಹಿಕ ಊಟ ಎಂಬ ಸನ್ನಿ~ ವೀಣಾ ಬನ್ನಂಜೆ

ಸಮೂಹ, ಗುಂಪು, ಸಮಾಜ ಎಲ್ಲವೂ ಒಂದು ವ್ಯವಸ್ಥೆ. ಅದನ್ನು ಕಾಲಾಂತರದಲ್ಲಿ ಮನುಷ್ಯ ಬೆಳೆಸಿಕೊಂಡದ್ದು. ಅದು ವ್ಯಷ್ಟಿಯಿಂದ ಸಮಷ್ಟಿಗೆ ವಿಸ್ತರಿಸುವ ಕ್ರಮ. ನಾವು ನಿಮ್ಮವರು ಎಂಬ ಭಾವ ಮೂಡಬೇಕಾದರೆ ಹತ್ತಿರ ಬರಬೇಕು. ಕೇವಲ ಹತ್ತಿರ ಬರುವ, ಒಳ್ಳೆಯ ಮಾತು ಆಡುವುದರಿಂದ ಅದು ಗಾಢ ಆಗುವುದಿಲ್ಲ. ಇನ್ನಷ್ಟು ನಮ್ಮವರು ಎಂಬ ಭಾವ ಹುಟ್ಟಬೇಕಾದರೆ ಮನೆಗೆ ಕರೆಯಬೇಕು. ಮನೆಗೆ ಬಂದವನೂ ಅತಿಥಿ ಮಾತ್ರ ಆಗುತ್ತಾನೆ.

ನಮ್ಮ ನೀರು, ನಮ್ಮ ಮನೆಯ ತಿಂಡಿ ಕೊಟ್ಟರೂ ಒಂದು ಗೆರೆ ಒಳಗೆ ಬಂದೀತು ಮನಸು. ಯಾವಾಗ ನಾವು ಉಂಡ ಊಟ, ನಮ್ಮ ಜೊತೆಗೆ ಬಡಿಸಿದೆವೋ ಅಂದು ಗೆರೆಗಳು ಅಳಿಯುತ್ತವೆ. ಊಟ ಅಂಥದೊಂದು ಹೃದಯ ಪ್ರವೇಶ. ಅದನ್ನು ಕೂಡಿ ಮಾಡುವುದು ಎಂದರೆ ಅದಕ್ಕೆ ಬೇರೆಯದೇ ಒಂದು ಅರ್ಥ. ನಾನು ಉಂಡದ್ದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ ಎಂದರೆ ಮುಚ್ಚುಮರೆಯ ಹಲವು ಭಾಗ ಸರಿದಂತೆ. ಒಳಹೊರಗಿನ ಪರದೆಯನ್ನು ತೆರೆದಂತೆ. ಇದು ಆತ್ಮೀಯತೆಯ ಒಳಮಗ್ಗುಲು. ಕೂಡಿ ಊಟ ಮಾಡಿದವರು ನಮ್ಮವರೇ. ಅದಕ್ಕೆ ಗಾದೆಯ ಮಾತು ಬಂತು ‘ಉಂಡ ಮನೆಗೆ ದ್ರೋಹ ಬಗೆಯಬಾರದು’.

ಹಿಂದೊಂದು ದಿನವಿತ್ತು. ನಾವು ಒಂದು ರೈಲು ಬೋಗಿಯಲ್ಲಿ ಇದ್ದೇವೆ. ನಮ್ಮ ಜೊತೆಗೆ ಯಾರೋ ಪಯಣಿಸುತ್ತಾರೆ. ಎರಡೋ ಮೂರೋ ದಿನಗಳ ಪಯಣ. ಆ ಅಷ್ಟೂ ದಿನಗಳಲ್ಲಿ ನಾವು ಮನೆಯಿಂದ ಕಟ್ಟಿಕೊಂಡು ಬಂದ ಊಟ ಅವರಿಗೂ, ಅವರದ್ದು ನಮಗೂ. ಊಟ ಮಾಡುವಾಗ ಹೊರಗಿನವರು ಯಾರೂ ನೋಡಬಾರದು ಎಂದು ಒಂದು ನಂಬಿಕೆ. ಊಟ ಮಾಡುವಾಗ ಯಾರಾದರೂ ಇದ್ದರೆ ಅವರಿಗೂ ಊಟ ಕೊಡಬೇಕು ಎಂಬ ಮಾತು ಅದಕ್ಕೇ ಹುಟ್ಟಿ ಕೊಂಡಿತು. ಅಲ್ಲೊಂದು ತಾತ್ಕಾಲಿಕ ಸಂಬಂಧ. ಅವರು ಇಳಿದು ಹೋದ ಮೇಲೆ ಅವರು ಯಾರೋ, ನಾವು ಯಾರೋ. ಈಗೀಗ ನಂಬಿಕೆ ಮುರಿಯಿತು. ಬೇರೆಯವರು ಕೊಟ್ಟ ಊಟ ತೆಗೆದುಕೊಳ್ಳ ಬಾರದು ಎಂಬುದೇ ಗಟ್ಟಿ ನಂಬಿಕೆ ಆಯಿತು.

ಯಾವುದೋ ಮನೆ, ಯಾವುದೋ ಕುಲ ಕೂಡಿ ಒಂದು ಊರಿಂದ ಇನ್ನೊಂದು ಊರಿಗೆ ಗಾಡಿ ಮಾಡಿಕೊಂಡು ಪ್ರವಾಸ ಹೋಗುತ್ತೇವೆ. ಆಗಲೂ ಕಟ್ಟಿಕೊಂಡ ಬುತ್ತಿ ಊಟ. ಯಾವುದೋ ಮರದ ನೆರಳು, ಎಡಗೈಯೇ ಪ್ಲೇಟ್. ಖುಷಿ ಖುಷಿ ನಗು, ಯಾರದೋ ತೋಟದ ಮಣ್ಣೇ ಆಸನ… ಅದೊಂದು ಸೊಬಗು. ಅದರಲ್ಲಿ ಹತ್ತು ಮನೆಯ ತಾಯಿಯ ಊಟ ಒಂದಾಗುತ್ತದೆ. ಅದು ಭಾವವಿಸ್ತಾರದ ಪರಿಣಾಮ.

ದೇವಾಲಯವೂ ಅಂಥ ಊಟದ ತಾಣ. ಅದೂ ದಕ್ಷಿಣ ಭಾರತದ ದೇವಾಲಯಗಳಂತೂ ಪ್ರಸಾದಕ್ಕೆ ಬಲು ದೊಡ್ಡ ಹೆಸರು. ಬಂದವರ ಕುಲ ಗೋತ್ರ ಕೇಳದೆ, ಹೊತ್ತಿಗೆ ಬಂದವರಿಗೆ ತುತ್ತು. ಅದೂ ಸಾಮೂಹಿಕ ಊಟವೇ. ಎಲ್ಲರಿಗೂ ಒಂದೇ ವ್ಯವಸ್ಥೆ. ಕುಳಿತವರ ಊಟ ಅವರದು. ಪಕ್ಕದವರು ಏನು ಎಂತು ಅವರಿಗೆ ಸಂಬಂಧವಿಲ್ಲ. ತನ್ನ ಊಟ ತನ್ನ ತಟ್ಟೆ. ಪಕ್ಕದವನ ಮುಖ ಕೂಡ ಗುರುತು ಉಳಿದಿರಲಿಕ್ಕಿಲ್ಲ. ಆದರೂ ಅದು ಸಾಮೂಹಿಕ ಊಟ. ಸಂಖ್ಯೆಯಿಂದ ಸಮೂಹ ಹೊರತು ಭಾವದಿಂದ ಅಲ್ಲ. ಅದು ವ್ಯವಸ್ಥೆಯ ದೃಷ್ಟಿಯಿಂದ ಮಾಡಿದ ಒಂದು ಸರಳ ಕೂಡೂಟ.

ಅದಕ್ಕೂ ಭಾವನೆಗೂ ಸಂಬಂಧವೇ ಇಲ್ಲ. ದೂರದೂರಿನವರಿಗೆ ಅದು ಆಸರೆ. ಇನ್ನು ಕೆಲವರಿಗೆ ಅದು ಭಕ್ತಿಯ ಪ್ರಸಾದ. ದೇವಾಲಯದಲ್ಲಿ ದರ್ಶನ ಆದ ಬಳಿಕ ತೀರ್ಥ ಗಂಧ ತೆಗೆದುಕೊಳ್ಳುವುದಿಲ್ಲವೇ ಹಾಗೆ. ಅದರಲ್ಲಿ ಭಕ್ತಿ ಅಥವಾ ಪ್ರಸಾದ ಎಂಬ ಭಾವ ಬಿಟ್ಟರೆ ಇನ್ನೇನೂ ಇಲ್ಲ. ಅದು ಭಾವನಾವಲಯಕ್ಕೆ ಯಾರನ್ನಾದರೂ ಕರೆದುಕೊಂಡು ಮಾಡುವ ಊಟ ಅಲ್ಲ. ವ್ಯವಸ್ಥೆಯ ಅನುಕೂಲ ಮಾತ್ರ.

ಹೀಗೆ ಕೂಡಿ ಊಟ ಮಾಡುವ ಹಲವು ವಿಧಾನಗಳಿವೆ. ಮದುವೆ ಮೊದಲಾದ ಸಂಭ್ರಮಗಳಲ್ಲಿ ಕೂಡ ಸಹಭೋಜನ ಇದೆ. ಅಲ್ಲಿ ಸಂಬಂಧಿಗಳು, ಮನೆಯವರ ಮಿತ್ರರು ಎಲ್ಲರೂ ಕೂಡಿ ಊಟ ಮಾಡುತ್ತಾರೆ. ಅದೂ ಕೂಡ ಭಾವನಾ ವಲಯದ ಕೂಡೂಟವಲ್ಲ. ಅವರವರ ಗುರುತಿನವರನ್ನೇ ಕೂಡಿಕೊಂಡು ಊಟ ಮಾಡುವುದು ಹೆಚ್ಚು. ಹಾಗೊಮ್ಮೆ ಅಪರಿಚಿತರು ಕುಳಿತು ಊಟ ಮಾಡಿದರೆ ಮಾತಿಲ್ಲದೇ ಊಟ ಮಾಡುವ ಪ್ರಸಂಗವೂ ಉಂಟು.

ಅಪರೂಪಕ್ಕೆ ಮಾತಾಡಿ ಪರಿಚಯವಾಗಲಿಕ್ಕೂ ಸಾಕು. ಬುಫೆ ಊಟ ಅನ್ನುವ ಕೈಯಲ್ಲಿ ಹಿಡಿದು, ನಿಂತು ಊಟ ಮಾಡುವ ಅವಸರದ ಊಟವೂ ಉಂಟು. ಇಲ್ಲಿಯೂ ಅಷ್ಟೇ, ನಮ್ಮ ಊಟ ನಮ್ಮ ತಟ್ಟೆ. ಉಳಿದದ್ದೆಲ್ಲ ಲೊಳಲೊಟ್ಟೆ. ದರ್ಶಿನಿ ಹೋಟೆಲಿನಲ್ಲಿ ಉಣ್ಣುವುದಿಲ್ಲವೇ, ಅವರು ಯಾರೋ ನಾವು ಯಾರೋ.

ಹಿಂದೆ ಒಂದು ದೊಡ್ಡ ಕೂಗು ಎದ್ದಿತ್ತು. ನಮ್ಮ ಜೊತೆ ಊಟ ಮಾಡಬೇಕು ಆಗ ಅವರು ನಮ್ಮವರು. ಮೇಲಿನ ಊಟದ ಭಾವವಿವರಣೆ ನೋಡಿದರೇ ನಿಮಗೆ ಈ ಕೂಡೂಟದ ಮರ್ಮ ತಿಳಿದಿರುತ್ತದೆ. ತಿಳಿದ ಮೇಲೆ ಕೂಡಿ ಊಟ ಮಾಡಲು ಕರೆಯುವುದು ಎಷ್ಟು ಅಸಂಬದ್ಧ ಎಂದು ಅರ್ಥ ಆದೀತು.

ಇನ್ನೊಂದು ವಿಷಯ. ಒಬ್ಬರು ಕೂಡಿ ಊಟ ಮಾಡಿದ ಕೂಡಲೇ ನಮ್ಮವರಾಗುವುದಿಲ್ಲ. ನಮ್ಮವರೇ ಕೂಡಿ ಊಟ ಮಾಡಬೇಕು ಹೊರತು ಯಾರ್ಯಾರನ್ನೋ ಒತ್ತಾಯ ಮಾಡಿ ಊಟ ಮಾಡಿಸುವುದಲ್ಲ. ಊಟ ನಮ್ಮವರ ಭಾವ ಹಂಚುವಿಕೆ. ಅದು ಕ್ರಿಯೆಯಲ್ಲ, ಭಾವ.

ಪ್ರಧಾನಿ ನಮ್ಮ ಜೊತೆ ಊಟ ಮಾಡಬೇಕು ಎಂದರೆ….. ಅದಕ್ಕೆ ಅದರದೇ ಕಟ್ಟುಕಟ್ಟಳೆ ನಿಯಮವನ್ನು ಬೇಡುವ ವ್ಯವಸ್ಥೆ ಇದೆ. ಆ ವ್ಯವಸ್ಥೆಗೆ ಅದರ ನಿಯಮ. ನಮ್ಮ ಮನೆಯಲ್ಲಿ ಪ್ರಧಾನಿಯವರ ಕಟ್ಟುಕಟ್ಟಳೆ ಅನುಸರಿಸಲು ಸಾದ್ಯವೇ, ಹಾಗೇ ಅವರೂ ಕೂಡ.

ಇಂಥ ಸೂಕ್ಷ್ಮಗಳನ್ನೇ ತಿಳಿಯದೇ ಏನೇನೋ ಮಾತು. ‘ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ’ ಗಾದೆಯ ಮಾತು. ಜಗಳ ಮಾಡಿ ಊಟ ಮಾಡಿಸಿದರೆ ರೋಗ ಅಲ್ಲದೇ ಇನ್ನೇನು? ಒಂದು ಕೇರಿಗೆ ಪ್ರವೇಶಿಸಿ ಮಾಡಿದ ಸ್ವಚ್ಛತೆಯ ಕ್ರಾಂತಿಗಿಂತ ಊಟವೇ ದೊಡ್ಡದಾದರೆ…? ನಮಗೆ ಬೆಳವಣಿಗೆಯ ಅಭಿವೃದ್ಧಿಯ ವ್ಯಾಖ್ಯಾನ ಗೊತ್ತಿಲ್ಲ ಎಂದು ಅರ್ಥ.

ವೈಯಕ್ತಿಕ ವಲಯವೇ ಬೇರೆ. ಅದಕ್ಕೆ ಅದರದೇ ಸೊಬಗು. ಸಾಮಾಜಿಕ ಸಾಮೂಹಿಕ ಪರಿಧಿಯೇ ಬೇರೆ. ಎರಡನ್ನೂ ಒಂದು ಮಾಡುವುದು ಅಬದ್ಧ. ಅದು ಅಂತರಂಗ ಬಹಿರಂಗಗಳ ಗೆರೆ ಗೊತ್ತಿಲ್ಲದ ಅಜ್ಞಾನಿಯ ಅಪಲಾಪ. ಅವೆರಡೂ ಸುಂದರ ಅಂತರ ಕಾಯ್ದುಕೊಂಡಾಗಲೇ ಅದಕ್ಕೆ ಸೌಂದರ್ಯ. ಇಲ್ಲದೇ ಇದ್ದರೆ ಗಂಡ, ಮನೆ ಮಕ್ಕಳು- ಸಮಾಜ,ಲೋಕ, ಜನರು ಇದು ಒಂದಾದಂತೆ.

ಇತ್ತೀಚೆಗೆ ಯಾರೋ ಬರೆದಿದ್ದು ಓದಿದ್ದೆ. ನಮ್ಮ ದೇವಸ್ಥಾನಗಳಲ್ಲಿ ಊಟ ಮಾಡುವವರು ಅಲ್ಲಿ ಇರುವ ಭೇದದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಧರ್ಮದ ಊಟ ಉಂಡು ಇಷ್ಟು ಗಲಾಟೆ ಮಾಡುವವರಿಗೆ ಬುಫೆ ಊಟ ಕೊಟ್ಟು ಬಿಡಿ ಎಂಬುದು ಅವರ ಅಂಬೋಣ.

ಊಟದ ಮೇಲೆ ವಿವರಿಸಿದ ಎಲ್ಲ ಕ್ರಮ ನೋಡಿದರೆ ವಿಷಯ ಹೌದು. ಸಾಲಾಗಿ ಊಟ ಮಾಡಿ, ನಿಂತು ಊಟ ಮಾಡಿ, ಹೊಟ್ಟೆ ತುಂಬುವುದು ಮಾತ್ರ ಸತ್ಯ. ಯಾರೂ ಒಂದಾಗುವುದಿಲ್ಲ. ಭೇದವಂತೂ ಅಳಿಯುವುದೇ ಇಲ್ಲ. ನಿಂತು ಊಟ ಮಾಡುವವನಿಗೆ ಕುಳಿತು ಊಟ ಮಾಡುವವನಷ್ಟು ಪುರುಸೊತ್ತು ಇಲ್ಲ.

ನಿಂತಲ್ಲಿ ಊಟ ಮಾಡಿ ಕಳುಹಿಸಿದರೆ ಅವನ ಹೊಟ್ಟೆ ತುಂಬುತ್ತದೆ. ಪ್ರಸಾದ ತೆಗೆದುಕೊಂಡೆ ಎಂಬ ಭಾವಕ್ಕೂ ಏನೂ ತೊಂದರೆ ಇಲ್ಲ. ಈಗಿನ ಕಾಲದಲ್ಲಿ ಬಡಿಸುವವರ ಕೊರತೆ ಅದರ ದುಃಖ ವ್ಯವಸ್ಥೆ ಮಾಡುವವರಿಗೇ ಗೊತ್ತು. ಅದಕ್ಕೂ ಈ ಬುಫೆ ಊಟ ಒಳ್ಳೆಯ ಪರಿಹಾರ.

ಕೊನೆಯದಾಗಿ ಒಂದು ಮಾತು. ಊಟ ತೀರಾ ವೈಯಕ್ತಿಕ ವಿಚಾರ. ಊಟ, ಕಾಮ, ನಿದ್ರೆ ಯಾರಿಗಾಗಿಯೋ ಮಾಡಲು ಬರುವುದೇ ಇಲ್ಲ.
ಹಸಿವಾದೊಡುಂಬುದನು
ಸತಿಯ ಸಂಭೋಗವನು ಆನಾಗಿ ನೀ ಮಾಡು ಎಂಬುವರುಂಟೇ
ಮಾಡುವುದು ಮಾಡುವುದು ಮನ ಮುಟ್ಟಿ
ಮಾಡುವುದು ಮಾಡುವುದು ತನು ಮುಟ್ಟಿ
ತನು ಮುಟ್ಟಿ ಮನ ಮುಟ್ಟದಿರ್ದಡೆ ಕೂಡಲಸಂಗಮನೇತರಲ್ಲಿಯೂ ಮೆಚ್ಚ.

ಈ ತನು ಮುಟ್ಟಿ ಮನ ಮುಟ್ಟದ ವ್ಯತ್ಯಾಸವನ್ನೇ ನಾನು ಇದುವರೆಗೂ ಹೇಳಲು ಒದ್ದಾಡಿದ್ದು. ಬಸವಣ್ಣ ಎಷ್ಟು ಚೆನ್ನಾಗಿ ತಿಳಿಸಿದ್ದಾರೆ ನೋಡಿ.

ನಮಗೆ ನಾವೇ ಮಾಸ್ಟರ್. ನಮ್ಮ ಊಟ ನಮ್ಮ ಸುಖ. ಪರರನ್ನು ಉಣಿಸಿ ಸಂತೃಪ್ತಿ ಪಡಬಹುದು. ಅವರನ್ನು ಮನೆಯೊಳಗೆ ಕುಳ್ಳಿರಿಸಿ ಊಟ ಮಾಡಿಯೂ ಆನಂದಿಸಬಹುದು. ಅವರು ನಮ್ಮ ಭಾವನಾ ವಲಯ ಪ್ರವೇಶಿಸಿದರೆ ಮಾತ್ರ. ಅಂಥವರು ಎಂದಿಗೂ ನಮ್ಮವರೇ. ಒತ್ತಾಯಕ್ಕೆ ಒಟ್ಟಿಗೆ ಕೂಡಿಸಿ ಊಟ ಮಾಡಿದಾಕ್ಷಣ ನಮ್ಮವರಾಗುವುದಿಲ್ಲ.

ಊಟ ನಮ್ಮನ್ನು ಹತ್ತಿರ ತರುತ್ತದೆ ನಿಜ. ಅದೇ ಊಟವೇ ನಮ್ಮನ್ನು ದೂರ ಮಾಡುತ್ತದೆ ಕೂಡ. ಯಾಕೆಂದರೆ ಉಳಿದುದರ ಜೊತೆ ಒಪ್ಪಂದ ಮಾಡಬಹುದು. ಆಹಾರದಲ್ಲಿ ಸಾಧ್ಯವಿಲ್ಲ. ಒಬ್ಬರಿಗೆ ಬಾಡೂಟವೇ ಊಟ, ಇನ್ನೊಬ್ಬರಿಗೆ ಅದರ ವಾಸನೆಗೇ ವಾಂತಿ ಆದೀತು. ಅದು ಸಂಸ್ಕಾರ ಅಭ್ಯಾಸ. ಅದನ್ನೆಲ್ಲ ಬಿಡಿ ಅಂದರೆ…? ಮತ್ತೊಮ್ಮೆ ಹೇಳಬೇಕು- ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ.

ಒಟ್ಟಿನಲ್ಲಿ ಊಟ ನಮ್ಮ ಆಯ್ಕೆ, ನಮ್ಮ ತೃಪ್ತಿ. ಕೂಡಿ ಊಟ ಮಾಡುವುದು ಅಪರೂಪಕ್ಕೆ ಒದಗುವ ಭಾವಬಾಂಧವ್ಯ. ಒತ್ತಾಯದಲ್ಲಿ ಊಟ ಮಾಡಿಸುವುದು ಮತ್ತು ಇಷ್ಟವಿಲ್ಲದ ಹೆಣ್ಣನ್ನು ಎಳೆದಾಡುವ ಅತ್ಯಾಚಾರ ಎರಡಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ನಾವು ಸಾಮೂಹಿಕ ಸನ್ನಿಯಿಂದ ಹೊರಗೆ ಬರಬೇಕು. ಡಿ ವಿ ಗುಂಡಪ್ಪನವರು ಹೇಳುವ ಒಳ ಹೊರಗಣ ಕೋಣೆಯ ಭೇದ ತಿಳಿದು ನಡೆಯಬೇಕು. ಯಾಕೆಂದರೆ ಬದುಕು ಅಮೂಲ್ಯ ಮಾಣಿಕ್ಯ. ಬೀದಿ ಬದಿಯ ಬಿಕರಿಗೆ ಸಿಗುವ ವಸ್ತುವಲ್ಲ. ಊಟ ಅಂಥ ಬದುಕನ್ನು ಸುಂದರ ಮಾಡುವ ಅತ್ಯಮೂಲ್ಯ ಪ್ರಸಾದ.

ಅಹಂ ವೈಶ್ವಾನರೋಭೂತ್ವಾ
ಪ್ರಾಣಿನಾಂ ದೇಹಮಾಶ್ರಿತ:
ಪ್ರಾಣಾಪಾನ ಸಮಾಯುಕ್ತ:
ಪಚಾಮ್ಯನ್ನಂ ಚತುರ್ವಿಧಮ್

ಎಂದು ಶ್ರೀ ಕೃಷ್ಣನೇ ಹೇಳಿದ್ದಾನೆ ಎಂದರೆ ಆಹಾರದ ಆಳ ವಿಸ್ತಾರ ಅರ್ಥ ಆಗಬೇಕು. ಇನ್ನೂ ತಿಳಿಯದಿದ್ದವನು ಕನಿಷ್ಠ ಹತ್ತು ದಿನ ಉಪವಾಸ ಮಾಡಬೇಕು.

 
 
 
 
 
 
 
 
 
 
 

Leave a Reply