ಶ್ರೀಮುಖ್ಯಪ್ರಾಣ ಸನ್ನಿಧಿಯಲ್ಲಿ​ ಶ್ರೀವಿಶ್ವೋತ್ತಮ ತೀರ್ಥರ ಮಹಿಮೆ​ ~ ಪಿ.ಲಾತವ್ಯ ಆಚಾರ್ಯ.​

 ​ಉಡುಪಿ. ನಮ್ಮ ಸನಾತನ ಪರಂಪರೆಯ ಮಹಾತ್ಮರ ಬದುಕಿನಲ್ಲಿ ಸಂಭವಿಸಿದ ಕೆಲ ಘಟನೆಗಳನ್ನು ಊಹಿ ಸಲೂ ಸಾದ್ಯವಿಲ್ಲ.​ ಕಲ್ಪನೆಗೂ ಮೀರಿದ್ದು.​ ಅಂದು ಕಣ್ಣೆದುರಲ್ಲೇ ನಡೆದ ಆ ಪವಾಡವನ್ನು ಇಲ್ಲಿ ತೆರೆದಿಡು ತ್ತಿದ್ದೇನೆ..​ 1990ನೇ ಇಸವಿ ರಾಮನವಮಿ ಉತ್ಸವದ ಸಂದರ್ಭ..

ಆ ಕ್ಷಣವನ್ನು ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ..​ ಹಿರಿಯಡಕ ಸಮೀಪದ ಶಿರೂರು ಮೂಲ ಮಠದಲ್ಲಿ ವರ್ಷಂಪ್ರತಿ ಜರಗುವ ಶ್ರೀರಾಮನವಮಿ ಪೂಜೆ ಮತ್ತು ರಥೋತ್ಸವ ಯಾವಾಗಲೂ​ ಶ್ರೀಸೋದೆವಾದಿರಾಜ ಮಠದ ಶ್ರೀವಿಶ್ವೋತ್ತಮತೀರ್ಥರ ಹಾಗೂ​ ಶ್ರೀಶಿರೂರುಮಠದ ಶ್ರೀ ಲಕ್ಷ್ಮೀವರತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಬಹು ವೈಭವದಿಂದ ಜರಗುತ್ತಿತ್ತು.

ಶ್ರೀರಾಮನವಮಿ ಉತ್ಸವದಂದು ರಾತ್ರಿ ಎರಡೂ ಮಠದ ಪಟ್ಟದದೇವರಿಗೆ ಹಾಗೂ ಶಿರೂರಿನ ಶ್ರೀಪಟ್ಟಾಭಿರಾಮ​ ದೇವರಿಗೆ,​ ​ಶ್ರೀಮುಖ್ಯಪ್ರಾಣ ವರಿಗೆ​ ​,​ ​ಶ್ರೀವಾದಿರಾಜರಿಗೆ,​ ​ಭೂತರಾಜರಿಗೆ ರಂಗಪೂಜೆ ಸಹಿತ ವಿಶೇಷ ಪೂಜೆ ಜರಗುತ್ತದೆ.​ ​ನಂತರ ರಾತ್ರಿಯ ರಥೋತ್ಸವಕ್ಕೆ ಮುಖ್ಯಪ್ರಾಣದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ರಥದ ಬಳಿ ಕೊಂಡೊಯ್ಯಲಾಗುತ್ತದೆ. ಶಿರೂರಿನಲ್ಲಿ ರಥೋತ್ಸವವನ್ನು ಮಠದ ಮುಂಭಾಗದಲ್ಲಿರುವ ಒಣಗದ್ದೆಯಲ್ಲಿ ನಡೆಸಲಾಗುವುದು.​

ಗದ್ದೆಯ ಆರಂಭದಿಂದ ಗದ್ದೆಯ ಕೊನೆಯವರೆಗೆ ಸುಮಾರು ಇನ್ನೂರು ಮೀಟರ್ ದೂರ ರಥವನ್ನು ಎಳೆದು ಕೊಂಡು ಹೋಗಿ ಮತ್ತೆ ಪುನಃ ಅಲ್ಲಿಂದ ತಿರುಗಿಸಿ ಯಥಾ ಸ್ಥಾನಕ್ಕೆ ತರುವುದು ಶಿರೂರಿನ ರಥೋತ್ಸವದ ಪದ್ಧತಿ.​ ​ಆ ದಿನಗಳಲ್ಲಿ ದೊಂದಿದೀಪ,​ ​ಇಲಾಲಿಯ ದೀಪ ಹಾಗೂ ಗ್ಯಾಸ್ ಲೈಟ್ ಗಳು ಉತ್ಸವದ ಬೀದಿಗೆ ಬೆಳಕು ನೀಡುತ್ತಿದ್ದವು.​ ​ರಥ ಸಾಗುವ ದಾರಿಯಲ್ಲಿ ವಿದ್ಯುಶ್ಶಕ್ತಿಯ ದಾರಿ ದೀಪಗಳು ಇರಲ್ಲಿಲ್ಲ.​

​ರಥ ಸಾಗುವ ಗದ್ದೆಯ ಮಣ್ಣಿನ ನೆಲವನ್ನು ಪೂರ್ಣ ಪ್ರಮಾಣದಲ್ಲಿ ಸಮತಟ್ಟು ಮಾಡಲು ಅಲ್ಲಿನ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದರು.​ ​ಆದರೂ ಅಲ್ಲಲ್ಲಿ ಪೈರಿನ ಗುತ್ತಿಗಳು ಸಣ್ಣಪುಟ್ಟ ಹೊಂಡಗಳು ಹಾಗೆಯೇ ಉಳಿದು ಬಿಡುತ್ತಿದ್ದವು.​ ​ಹೀಗಾಗಿ ಕೆಲವೊಮ್ಮೆ ರಥ ಸಾಗುವಾಗ ಅದರ ವೇಗವು ಹೆಚ್ಚು ಕಡಿಮೆಯಾಗುತ್ತಿತ್ತು. ಒಮ್ಮೊಮ್ಮೆ ರಥವು ಎಡವಿದಂತೆ ಬಾಸವಾಗುತ್ತಿತ್ತು.​ ​

ರಥದ ಹಗ್ಗ ಹಿಡಿದು ಗೋವಿಂದಾ ಎನ್ನುತ್ತಿರುವ ಮಂದಿಗೆ ಪೈರಿನ ಗುತ್ತಿಗಳು,​ ಮುರುಟಿದ ಒಣ ಮುಳ್ಳುಗಳು, ಕಲ್ಲುಗಳು ಕಾಲಿಗೆ ಚುಚ್ಚುತ್ತಿರುತ್ತವೆ.​ ​ಇದೆಲ್ಲಾ ಹಳ್ಳಿಯ ರಥೋತ್ಸವದಲ್ಲಿ ಮಾಮೂಲು.​ ​ಶಿರೂರಿನ ರಥೋತ್ಸವ ಕೂಡಾ ಇದಕ್ಕೇನು ಹೊರತಾಗಿರಲಿಲ್ಲ.​ ಅಂದು ರಾತ್ರಿ ರಥೋತ್ಸವಕ್ಕೆ ಪೂರ್ವದಲ್ಲಿ ಶ್ರೀವಿಶ್ವೋತ್ತಮತೀರ್ಥರು ಶಿರೂರು ಶ್ರೀಪಾದರನ್ನು ಬಳಿಗೆ ಕರೆದು”ಇನಿ ರಥೋತ್ಸವ ಆನಗ ಅಮಸರ ಅಂಪುಣ ಬೋತ್ರಿ ಮೆಲ್ಲಪೋಯಿ.

ಜಾದೋನಾ ಸ್ವಲ್ಪ ತೊಂದ್ರೆದೋ ಸೂಚನೆ ಉಂಡು​ ​”ಅಂತ ತುಳು ಭಾಷೆಯಲ್ಲಿ ಹೇಳಿದರು.(ಇಂದು ರಥೋತ್ಸ ವ ನಡೆಸುವಾಗ ಅವಸರ ಬೇಡ.ಏನೋ ತೊಂದರೆ ಆಗುವ ಅಶುಭ ಸೂಚನೆ, ಕಾಣ್ತಾ ಇದೆ ಎಂದು ಪಿಸುಗುಟ್ಟಿ ದರು.) ಗುರುಗಳ ಮಾತು ಕೇಳಿ ಶಿರೂರು ಶ್ರೀಪಾದರು ಬೆಚ್ಚಿಬಿದ್ದರು.​ ​ಒಂದಿಬ್ಬರು ಆತ್ಮೀಯರನ್ನು ಕರೆದು ಸೋದೆ ಶ್ರೀಯವರು ಹೇಳಿದ ವಿಷಯ ತಿಳಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.​

ಶ್ರೀಮುಖ್ಯಪ್ರಾಣದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಉತ್ಸವ ಬೀದಿಗೆ ತಂದು ರಥದಲ್ಲಿ ಕುಳ್ಳಿರಿಸಿದ ನಂತರಶ್ರೀಶಿರೂರು ಶ್ರೀಪಾದರು ಮಂಗಳಾರತಿ ಸಲ್ಲಿಸಿದರು.​ ಪೂಜ್ಯ ಶ್ರೀವಿಶ್ವೋತ್ತಮತೀರ್ಥರೂ ಕೂಡಾ ಆರತಿ ಬೆಳಗಿದರು. ಗದ್ದೆಯಲ್ಲಿ ಶಿರೂರಿನ ಧೀರ ಮುಖ್ಯಪ್ರಾಣದೇವರ ರಥೋತ್ಸವ ಆರಂಭವಾಯಿತು.​

ಹಳ್ಳಿಯ ಸಾಂಪ್ರದಾಯಿಕ ವಾದ್ಯ,​ ​ಡೋಲು,​ ​ಕೊಳಲುಗಂಟೆ ತಾಳ ಶಂಖನಾದವು ರಥೋತ್ಸವಕ್ಕೆ ಇನ್ನಷ್ಟು ಸಂಭ್ರಮ ನೀಡುತ್ತಿದ್ದವು.​ ಶ್ರೀವಿಶ್ವೋತ್ತಮ ಶ್ರೀಪಾದರು ರಥ ಸಾಗುತ್ತಿರುವಾಗ ಮಾತು ಮಾತಿಗೆ ಜಾಗೃತೆ,​ ​”ಮೆಲ್ಲ ಪೋಯಿ,​ ​ಅಮಸರ ಬೋತ್ರಿ”​ ​(ಮೆಲ್ಲನೆ ರಥ ಸಾಗಲಿ,​ ​ಅವಸರ ಮಾಡದಿರಿ)​ ​ಎಂದು ಸಾರಿ ಸಾರಿ ತುಳು ಭಾಷೆಯಲ್ಲಿ ಹೇಳುತ್ತಿದ್ದರು.

ಹೆಚ್ಚಾಗಿ ರಥೋತ್ಸವದ ಸಂದರ್ಭದಲ್ಲಿ ಸದಾ ಹರಿ ಸ್ಮರಣೆಯಲ್ಲೇ ನಿರತರಾಗಿರುತ್ತಿದ್ದ ಸೋದೆ ಶ್ರೀಪಾದರು ಅಂದು ರಥ ಸಾಗುತ್ತಿರುವಾಗ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.​ ​ರಥದ ಅಕ್ಕಪಕ್ಕ ಆಗ್ಗಾಗೆ ಇಣುಕಿ ನೋಡುತ್ತಿದ್ದರು.​ ಸುಮಾರು ನೂರುಮಂದಿ ಭಕ್ತರು ರಥದ ಹಗ್ಗವನ್ನು ಹಿಡಿದು ಗೋವಿಂದಾ,​ ​ಜೈ ಶ್ರೀರಾಮ,​ ​ಜೈಮುಖ್ಯಪ್ರಾಣ ಎಂದು ಭಕ್ತಿಪರವಶರಾಗಿ ಹರಿನಾಮ ಸ್ಮರಣೆಯಲ್ಲಿ ಮುಳುಗಿದ್ದರು.​ ​

ಆದರೆ​ ಶ್ರೀ​ ​ವಿಶ್ವೋತ್ತಮರಿಗೆ ಆತಂಕದ ಪೂರ್ವಸೂಚನೆ ದೊರಕಿತ್ತು.​ ​ಹಾಗಾಗಿ ಚಡಪಡಿಸುತ್ತಿದ್ದರು.​ ರಥವು ಸ್ವಲ್ಪ ವೇಗ ಪಡೆದುಕೊಂಡಿತು. ಇನ್ನೊಂದು ಕೊನೆಯನ್ನು ತಲುಪಲು ಐವತ್ತು​ ​ಅಡಿ ಬಾಕಿ ಇತ್ತು.​ ​ತಕ್ಷಣ ರಥದ ಹಗ್ಗತೊರೆದು ಬದಿಗೆ​ ​ಸರಿದ ಶ್ರೀವಿಶ್ವೋತ್ತಮತೀರ್ಥರು “ರಥವನ್ನು ನಿಲ್ಲಿಸಿ ನಿಲ್ಲಿಸಿ”ಎಂದು ಗಟ್ಟಿಯಾಗಿ ಹೇಳಲು ಆರಂಭಿಸಿದರು. ರಥದ ಹಗ್ಗ ಹಿಡಿದಿದ್ದ ಭಕ್ತರೆಲ್ಲರಿಗೂ ಶ್ರೀಪಾದರ ಆತಂಕ ಕಂಡು ಆಶ್ಚರ್ಯವಾಯಿತು.

ಶ್ರೀಪಾದರು ಪದೇಪದೇ ಹೇಳುವುದನ್ನು ಕಂಡು ಹೆದರಿದ ಮಂದಿ ಹಗ್ಗವನ್ನು ತೊರೆದು ರಥದಿಂದ ದೂರ ಸರಿದರು.​ ​ಆದರೆ ರಥ ವೇಗದಿಂದ ಸಾಗುತ್ತಲೇ ಇತ್ತು.​ ​ಕೆನಲಿ ಕೆಂಪಾಗಿದ್ದ ಶ್ರೀಪಾದರು ಎರಡೂ ಕೈಯನ್ನು ಮೇಲಕ್ಕೆತ್ತಿ ಏನನ್ನೋ ತೋರಿಸುತ್ತಿದ್ದರು. ರಾತ್ರಿಯ ಕತ್ತಲೆಗೆ ಶ್ರೀಪಾದರು ಏನನ್ನು ತೋರಿಸುತ್ತಿದ್ದಾರೆ ಎಂದು ಯಾರಿಗೂ ಅರಿವಾಗಲೇ ಇಲ್ಲ.

ರಥದ ಹಿಂಬದಿಯಿಂದ ರಥವನ್ನು ನಿಯಂತ್ರಿಸುತ್ತಿದ್ದ ಮಠದ ಸಿಬ್ಬಂದಿಗಳು ತಕ್ಷಣ ರಥ ನಿಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು.​ ​ಸಾದ್ಯವಾಗಲಿಲ್ಲ.​ ​ಆ ನಿಮಿಷದಲ್ಲೇ ರಥದ ಬಳಿ ಓಡಿ ಬಂದ ಶ್ರೀಶಿರೂರು​ ​ಶ್ರೀಪಾದರು ರಥದ ಚಕ್ರಕ್ಕೆ ಅಡ್ಡ ಇರಿಸುವ ದೊಡ್ಡ ಬಡಿಗೆಯನ್ನು ತಾವೇ ಎಳೆದುಕೊಂಡು ತಂದು ಚಕ್ರದ ಅಡ್ಡಕ್ಕೆ ಇರಿಸಿದರು.​ ​ರಥವು ಒಂದು ಹತ್ತು ಅಡಿ ಸಾಗಿ ಕಿರ್ರ್ ಎನ್ನುತ್ತಾ ನಿಂತಿತು.

ಒಂದೆರಡು ನಿಮಿಷ ಉತ್ಸವದ ಗದ್ದಲ ಸಂಪೂರ್ಣ ಮರೆಯಾಗಿ ಸೂಜಿ ಬಿದ್ದರೂ ಸದ್ದು ಕೇಳುವಂತಹ ಮೌನ ಅಲ್ಲಿ ನೆಲೆಸಿತ್ತು.​ ಎಲ್ಲರೂ ಸೋದೆ ಶ್ರೀಪಾದರನ್ನೇ ಕಣ್ಣಲಿ ಕಣ್ಣಿಟ್ಟು ನೋಡುತ್ತಿದ್ದರು.​ ಸೋದೆ ಶ್ರೀಪಾದರು ದೀಪದ ಬೆಳಕನ್ನು ಎತ್ತರಕ್ಕೆ ಹಿಡಿಯುವಂತೆ ಹೇಳಿದರು.​ ದೀಪದ ಬೆಳಕು ಎತ್ತರಕ್ಕೆ ಏರುತ್ತಿದ್ದಂತೆ ಸಂಭವನೀಯ ಆಪತ್ತಿನ ಸಂಗತಿ ಕಣ್ಣೆದುರಲ್ಲೇ ಇರುವುದನ್ನು ಕಂಡು ಎಲ್ಲರೂ ಒಂದುಕ್ಷಣ ದಿಗ್ಭ್ರಾಂತರಾದರು.

ಅದೇನಾಗಿತ್ತೆಂದರೆ ಹಿರಿಯಡಕ ವಿದ್ಯುತ್ ಕೇಂದ್ರದಿಂದ ಸರಬರಾಜಾಗುತ್ತಿದ್ದ ಹೈ ವೋಲ್ಟೇಜಿನ ಎರಡು​ (ಸರ್ವೀಸ್ ವಯರ್) ದಪ್ಪಗಿನ ದೊಡ್ಡ ತಂತಿಗಳು ರಥ ಸಾಗುತ್ತಿದ್ದ ಒಣಗದ್ದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹಾದು ಹೋಗಿದ್ದವು.​ ​ಭೂಮಿಯಿಂದ ಸುಮಾರು 18 ಅಡಿ ಎತ್ತರದಲ್ಲಿದ್ದ ಈ ತಂತಿಗಳು 30 ಅಡಿ ಎತ್ತರದ ರಥವನ್ನು ಸಂಪರ್ಕಿಸಲು ಕೇವಲ ಒಂದು ಅಡಿ ಮಾತ್ರ ಬಾಕಿ ಇತ್ತು.​

​ಕತ್ತಲೆಯಲ್ಲಿ ಅಷ್ಟೊಂದು ಎತ್ತರದಲ್ಲಿದ್ದ ಅಪಾಯಕಾರಿ ತಂತಿಗಳು​ ​ಇತರೇ ಯಾರ ದೃಷ್ಟಿಗೂ ಗೋಚರವಾಗಲಿಲ್ಲ.​ ​ ಸ್ಥಳೀಯರಿಗೂ ಕಾಣಲ್ಲಿಲ್ಲ.​ ​ಆದರೆ ಶ್ರೀವಿಶ್ವೋತ್ತಮರ ದಿವ್ಯದೃಷ್ಟಿಗೆ ಹೈ ವೋಲ್ಟಿನ ಜ್ವಾಲಾಸುರ ಕಂಡಿದ್ದ.​ ​ಆ ಜ್ವಾಲಾಸುರನ ಒಂದು ಎಳೆ ತಾಗಿದರೂ ಸಾಕು.​ ​ಉತ್ಸವಕ್ಕೆ ಬಂದಿದ್ದ ಅಷ್ಟೂ ಮಂದಿಯನ್ನು ಏಕಕಾಲದಲ್ಲಿ ಆಪೋಶನ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಅದಕ್ಕಿತ್ತು.​

​ಆತಂತಿಗಳಲ್ಲಿ ಗರಿಷ್ಠ ಮಟ್ಟದ ವಿದ್ಯುತ್ತಿನ ಪ್ರವಾಹವೇ ಹರಿಯುತ್ತಿತ್ತು. ಊಹಿಸಲೂ ​ ಸಾದ್ಯವಾಗದಂತಹ ಮಹಾ ದುರಂತವೊಂದು ಶ್ರೀಮುಖ್ಯಪ್ರಾಣದೇವರ ಪ್ರೇರಣೆಯಿಂದಾಗಿ ಪೂಜ್ಯ ಗುರುಗಳಾದ ​ ಶ್ರೀವಿಶ್ವೋತ್ತಮತೀರ್ಥರ ಕೃಪೆಯಿಂದ ದೂರ ಸರಿಯಿತು. ರಥದ ಮುಂಭಾಗದ ಒಂದಡಿ ದೂರದಲ್ಲಿದ್ದ​ ಹೈ ಟೆನ್ಷನ್ ಸರ್ವೀಸ್ ವಯರು ಗಳನ್ನು ಕಂಡಾಗ ಎಲ್ಲರ ದಿಗಿಲು ಹಾರಿ ಹೋಗಿತ್ತು.​ ​ರಥವನ್ನು ಬಹಳ ನಾಜೂಕಿನಿಂದ ಪಕ್ಕಕ್ಕೆ ಎಳೆದು ತಂದು ಪಚ್ಚೆಡ ಸೇವೆ ನಡೆಸಲಾಯಿತು.​

ನಂತರ ರಥೋತ್ಸವ ಮುಂದುವರಿದು ರಥವು ಮತ್ತೆ ಯಥಾಸ್ಥಾನಕ್ಕೆ ಮರಳಿತು. ಅಂದು ರಾತ್ರಿ ಉತ್ಸವದ ಕೊನೆಯಲ್ಲಿ ಗುರುಗಳಾದ ಪರಮಪೂಜ್ಯ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರಿಗೆ ಮಾಲಿಕಾ ಮಂಗಳಾರತಿ ಸಹಿತ ​ಫಲಪುಷ್ಪ ಕಾಣಿಕೆಗಳನ್ನು ಅರ್ಪಿಸಲಾಯಿತು.​ ಶಿರಸಾಷ್ಟಾಂಗ ದಂಡ ಪ್ರಣಾಮಗಳನ್ನು ಸಲ್ಲಿಸಿದ ಶ್ರೀಶಿರೂರು ಶ್ರೀಪಾದರು ಪೂಜ್ಯಗುರುಗಳ ಅಸದೃಶ ಮಹಿಮೆ ಕಂಡು ಆನಂದಭಾಷ್ಪ ಸುರಿಸಿದರು. ಗದ್ಗದಿತರಾಗಿದ್ದ ಶಿರೂರು ಶ್ರೀಯವರಿಗೆ ಗಂಟಲು ಕಟ್ಟಿದಂತಾಗಿ ಮಾತೇ ಹೊರಡಲಿಲ್ಲ.​

ಶ್ರೀಶಿರೂರುಶ್ರೀಪಾದರ ಪ್ರೀತಿ ಅಭಿಮಾನಕ್ಕೆ ಸಂತಸ ಪಟ್ಟ ಶ್ರೀವಿಶ್ವೋತ್ತಮತೀರ್ಥರು ಶಿರೂರು ಶ್ರೀಪಾದರನ್ನು ಅನುಗ್ರಹಿಸಿ ಹೇಳಿದರು. “ನೀವು ಶ್ರೀಮುಖ್ಯಪ್ರಾಣ ದೇವರ ನಿತ್ಯಆರಾಧಕರು, ಉಪಾಸನೆ ಮುಂದುವರಿಸಿ. ಶ್ರೀಮುಖ್ಯಪ್ರಾಣದೇವರು ಸದಾ ನಿಮ್ಮೊಡನೆಯೇ ಇರುತ್ತಾರೆ”​ ​ಎಂದು ಶಿರೂರು​ ​ಶ್ರೀಪಾದರ ಶಿರದಲ್ಲಿ ಮಂತ್ರಾ ಕ್ಷತೆ ಇಟ್ಟು ಅನುಗ್ರಹಿಸಿದ್ದರು.​ ಶ್ರೀವಿಶ್ವೋತ್ತಮರ ಅಂದಿನ ಅನುಗ್ರಹದ ಮಾತುಗಳು ನಿಜವಾಯಿತು..​ ಶ್ರೀಲಕ್ಷ್ಮೀವರತೀರ್ಥರು ತಮ್ಮ ಸನ್ಯಾಸ ಜೀವನದ ಕೊನೆಯ ಕೆಲವು ವರ್ಷ ಶಿರೂರಿನಲ್ಲೇ ನೆಲೆಸಿ ನಿರಂತರ ಪ್ರಾಣದೇವರ ಉಪಾಸನೆಯಲ್ಲೇ ​ ಕಾಲ​ ​ಕಳೆದರು.

ಇವರ ಪೂಜಾ ಪ್ರಸಾದದಿಂದ ನೂರಾರು ಮಂದಿ ಸಂಕಷ್ಟಗಳಿಂದ ಮುಕ್ತರಾಗಿದ್ದರು.​ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ನಿರ್ಮಲ ನಿರಪೇಕ್ಷ ಸೇವೆಗೆ ಶಿರೂರಿನ ಶ್ರೀಮುಖ್ಯಪ್ರಾಣ ದೇವರು ತಮ್ಮ ಪಕ್ಕದಲ್ಲೇ ವೃಂದಾವನ ವನ್ನು ಕರುಣಿಸಿ ಶಾಶ್ವತ​ ​ಸಖ್ಯವನ್ನು ಅನುಗ್ರಹಿಸಿದರು.​ ತನ್ಮೂಲಕ​ ಶ್ರೀವಿಶ್ವೋತ್ತಮ ತೀರ್ಥಶ್ರೀಪಾದರ ವಚನವೂ ನೆರವೇರಿತು. ಎಂತಹ ತಪಃಶಕ್ತಿ..​ ಏನೊಂದು ಸಿದ್ದಿ..

 
 
 
 
 
 
 
 
 
 
 

Leave a Reply