Janardhan Kodavoor/ Team KaravaliXpress
26.6 C
Udupi
Saturday, June 12, 2021

ಒಂದು ಹೆಬ್ಬಲಸಿನ ಸುತ್ತ…~ಪೂರ್ಣಿಮಾ ಜನಾರ್ದನ್

ಎಲ್ಲರಿಗೂ ಅವರವರ ಬಾಲ್ಯದ ದಿನಗಳು ಅಚ್ಚುಮೆಚ್ಚು.. ಸ್ವಲ್ಪ ನಮಗೇನಾದರೂ ಪುರುಸೊತ್ತು ಸಿಕ್ಕಿತೋ ನಮ್ಮ ಮನ ಓಡುವುದು ನಮ್ಮ ಎಳವೆಯ ಗತ ಕಾಲದ ವೈಭವದತ್ತ.. ಹೀಗೇ ಒಮ್ಮೆ ಈ‌ ಲಾಕ್ ಡೌನ್ ಸಮಯದಲ್ಲಿ ಮಾತಾಡ್ತಾ ಮಾತಾಡ್ತಾ ಹೆಬ್ಬಲಸಿನ ವಿಷಯ ಬರುತ್ತಲೇ ನನ್ನ ಸಣ್ಣ ಮಗಳ ಕುತೂಹಲ ಜಾಸ್ತಿ ಆಯ್ತು.. ಅದಕ್ಕೆ ದೊಡ್ಡವಳು ಅಂದಳು.”.ಅದೇ ಮಾರಾಯ್ತಿ.. ಕುಜ್ಜೆಯಲ್ಲೇ ತುಂಬ ಸಣ್ಣ ಕುಜ್ಜೆ.. ನ್ಯಾನೋ ಕುಜ್ಜೆ ಅಷ್ಟೇ ” ಅಂದಾಗ ಇವಳ ಕುತೂಹಲ ಇನ್ನೂ ಜಾಸ್ತಿ ಆಯ್ತು..

ಅದರಲ್ಲೂ ನಾನು ಬಾಲ್ಯದಲ್ಲಿ ಅದನ್ನು ಹೆಚ್ಚಾಗಿ ಈ ಸೀಸನ್ ನಲ್ಲಿ ತಿಂತಾ ಇದ್ದೆ..ಹುಳಿ ಸಿಹಿ ತುಂಬ ರುಚಿ ಅಂದಾಗಲಂತೂ ಅವಳು ಅಮ್ಮಾ ಎಲ್ಲಿ ಸಿಗ್ತದೆ ನಂಗೆ ತಂದು ಕೊಡು ಅಂತ ಒಂದೇ ಸಮನೆ ವರಾತ ಶುರುಮಾಡಿದಳು. ಈ ಲಾಕ್ ಡೌನ್ ಸಮಯದಲ್ಲಿ ಅದನ್ನು ಹುಡುಕಿಕೊಂಡು ಎಲ್ಲಿ ಹೋಗಲಿ ನಾನು ಅಂತ ಸ್ವಲ್ಪ ಯೋಚನೆ ಆದ್ರೂ ಆಯ್ತು ತಂದು ಕೊಡುವೆ ಎಂಬ ಭರವಸೆ ಕೊಟ್ಟೆ.

ಹೀಗೇ ನಮ್ಮ ಕೆಲಸ ಮಾಡ್ತಾ ನಮ್ ಆಫೀಸ್ ನಲ್ಲಿ ಮಾತಾಡ್ತಾ ಇದ್ದಾಗ ನನ್ನ ಸಹೋದ್ಯೋಗಿ ಒಬ್ಬರು ನಮ್ಮ ಅತ್ತೆ ಮನೆಲಿ ತುಂಬ ಇದೆ ತಂದು ಕೊಡುವೆ ಅಂದರು. ಮಾತಿಗೆ ತಪ್ಪದೆ ಮಾರನೇ ದಿನ ಅವರು ಅದನ್ನು ಆಫೀಸಿಗೆ ತಂದರೂ ಅದನ್ನು ಇನ್ನೊಬ್ಬ ಸಹೋದ್ಯೋಗಿ ಹತ್ತಿರ ಕೊಟ್ಟಿದ್ದು ಅವರಿಗೆ ಅದನ್ನು ನನಗೆ ಕೊಡಲು ಮರೆತು ಹೋಗಿತ್ತು.

ನಾನು ನನ್ನ ಐರಾವತ ಏರಿ ಮನೆಗೆ ಬಂದು ಇಳಿಯುವ ಹೊತ್ತಲ್ಲಿ ‌ನನ್ನ ಮೊಬೈಲ್ ಒಂದೇ ಸಮನೆ ಹೊಡೆದುಕೊಳ್ಳುತ್ತಲಿತ್ತು.. ಏನಾಯಿತು.. ಯಾರಿಂದ ಇಷ್ಟು ‌ಕರೆ ಎಂದು ನೋಡಿದರೆ ನಮ್ಮ ಸಹೋದ್ಯೋಗಿ ಮೇಡಮ್ ನಿಮ್ಮ ಪೆಜಕಾಯಿ( ಹೆಬ್ಬಲಸು ) ಇಲ್ಲೇ ಇದೆ.

ನಾಳೆಗೆ ಪೂರ್ತಿ ಹಣ್ಣಾಗಿ ಹಾಳಾಗಬಹುದು ಅಂತ ಭಾರೀ ಆತಂಕದಿಂದ ಮಾತಾಡಿದರು. ಅವರಿಗೆ ಅದನ್ನೆಲ್ಲ ನೀವೇ ತಗೊಂಡು ಮನೆಗೆ ಹೋಗಿ, ನನಗೆ ಇನ್ನೊಮ್ಮೆ ತಂದಾಗ ಕೊಟ್ಟರಾಯ್ತು ಅಂತ ಸಮಾಧಾನ ಮಾಡಿದೆ. ಮತ್ತೆ ನಮ್ಮ ಪೆಜಕಾಯಿ ಬೇಟೆಯ ಆರಂಭ.

ಮೊದಲೆಲ್ಲ ಹಾದಿ‌ಬದಿ ತೋಟಬದಿ ಸಿಗ್ತಾ ಇದ್ದ ಈ ಹಣ್ಣು ಈಗ ಅಪರೂಪ ಆಗಿ ಬಿಟ್ಟಿತ್ತು. ಒಂದೆರಡು ಕಡೆ ಮರದಲ್ಲಿ ನೋಡಿದ್ದರೂ ಅಷ್ಟು ಎತ್ತರದ ಮರದಿಂದ ಅದಕ್ಕೆಚೂರೂ ಪೆಟ್ಟಾಗದ ಹಾಗೆ ಕೆಳಗಿಳಿಸಲು ನನ್ನಿಂದ ಅಂತೂ ಕಷ್ಟಸಾಧ್ಯ, ನಮ್ಮವರಂತೂ ಇಂತಹವುದಕ್ಕೆಲ್ಲ ತಲೆ ಹಾಕುವವರಲ್ಲ ಎಂದು ಖಂಡಿತವಾಗಿ ಗೊತ್ತಿದ್ದರಿಂದ ಇನ್ನೇನು ಮಾಡಬಹುದು ಎಂದು ಯೋಚಿಸಲಾರಂಭಿಸಿದೆ.

ಮೊದಲೆಲ್ಲ ಇಂತಹ ಅಪರೂಪದ ಊರ ಹಣ್ಣು ಗಳು ಉಡುಪಿ ಅದಮಾರು ಮಠದ ಹತ್ತಿರದ ಓಣಿಯಲ್ಲಿ ಸಿಗುತ್ತಲಿತ್ತು. ಈಗ ಲಾಕ್ ಡೌನ್ ಆದ ಕಾರಣ ಅದೆಲ್ಲ ಅಲ್ಲಿರಬಹುದಾದ ಬಗ್ಗೆ ಮಾಹಿತಿಯೂ ಇಲ್ಲ ಮತ್ತೆ ನಮ್ಮ ಆಫೀಸಿನ ಸಮಯದಲ್ಲಿ ಅಲ್ಲಿ‌ ಹೋಗುವ ಹಾಗೂ ಇಲ್ಲದ ಕಾರಣ ಆ ಆಸೆ ಬಿಟ್ಟಿದ್ದೆ.

ಈಗ ನಮಗೆ ಮಧ್ಯಾಹ್ನ ಎರಡು ಗಂಟೆ ತನಕ‌ ಮಾತ್ರ ಆಫೀಸ್ ಇದ್ದ ಕಾರಣ ಸಂಜೆ ಐದು ಗಂಟೆಗೆ ಒಂದು ಒಳ್ಳೆ ಕಥೆ ಪುಸ್ತಕ ಹಿಡಿದು ಹೊರಗೆ ಅಂಗಳದಲ್ಲಿ ಕುರ್ಚಿ ಹಾಕಿ ಓದುತ್ತಾ ಇದ್ದೆ. ಅಷ್ಟು ಹೊತ್ತಿಗೆ ನಮ್ಮ ಆತ್ಮೀಯರಾದ ರಾಜಣ್ಣ ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಮ್ಮ ಸೈಕಲ್ ಏರಿ ನಮ್ಮ ಮನೆಗೆ ಬಂದು ಗೇಟಿನ ಬಳಿ ನಿಂತು ಮಾತನಾಡತೊಡಗಿದರು.

ಅವರು ಪ್ರಗತಿಪರ ಕೃಷಿಕರಾಗಿದ್ದು ನಮಗೆ ಹೆಚ್ಚಾಗಿ ತಾವು ಬೆಳೆದ ಹರಿವೆ,ಸೌತೆ,ತೊಂಡೆಕಾಯಿ ಹೀಗೆಲ್ಲ ಸಾವಯವ ಆರೋಗ್ಯದಾಯಕ ಬೆಳೆ ಆಗಾಗ ತಂದು ಕೊಡುತ್ತಲಿದ್ದರು‌.. ಹೀಗೇ ಅದೂ ಇದೂ ಮಾತಾಡ್ತಾ ಇರುವಾಗ ನನ್ನ ಮಗಳು ಮೆಲ್ಲನೆ ಹೊರಬಂದು ಅಂಕಲ್… ಅದೇನೋ ಪೆಜಕಾಯಿ ಅಂತ ಇದೆ ಅಲ್ವಾ.. ಅದು ನಿಮಗೆ ಗೊತ್ತಾ ಅಂತ ಕೇಳಿದಳು.

ಅವರಿಗೆ ಪಕ್ಕನೆ ಅರ್ಥ ಆಗಲಿಲ್ಲ ಮತ್ತೆ ನಾನು ಹೆಬ್ಬಲಿಸಿನ ಬಗ್ಗೆ ಹೇಳ್ತಾ ಇದ್ದಾಳೆ ಅವಳು ಅಂದೆ. ಅಷ್ಟುಹೇಳಿದ್ದೇ ತಡ ರಾಜಣ್ಣ ಪುನಃ ತಮ್ಮ ಸೈಕಲ್ ಏರಿ ಭಾರೀ ರುಚಿ ರುಚಿಯಾದ ಒಳ್ಳೇ ಬಲಿತು ಹಣ್ಣಾದ ಐದಾರು ಹೆಬ್ಬಲಸು ತಂದು ನನ್ನ ಮಗಳ ಕೈಗಿತ್ತರು.ಅವೆಲ್ಲ ಸ್ವಲ್ಪ ಹುಳಿ, ತುಂಬ ಸಿಹಿ ಯಾಗಿದ್ದು ನನ್ನ ಮಗಳ ಆನಂದಕ್ಕೆ ಪಾರವೇ ಇಲ್ಲ.

ಅವರ ತೋಟದಲ್ಲಿ ಒಂದಷ್ಟು ಆ ಹಣ್ಣು ಆಗಿದ್ದರೂ ಅದನ್ನು ಕೊಯ್ಯುವ ಕೆಲಸ ಮಾತ್ರ ಸ್ವಲ್ಪ ಕಷ್ಟ. ಎತ್ತರದ ಮರದಲ್ಲಿ ಆಗುವ ಮಾಗಿದ ಹೆಬ್ಬಲಸು ತುಂಬ ರುಚಿಯಾಗಿದ್ದರೂ ಕೆಳಗೆ ಬಿದ್ದ ಕೂಡಲೇ ಒಡೆದು ಚಲ್ಲಾಪಿಲ್ಲಿಯಾಗುವ ಸಾಧ್ಯತೆಯೇ ಹೆಚ್ಚು.

ಅಂತೂ ಅದನ್ನು ಜೋಪಾನವಾಗಿ‌ ಕೊಯ್ದು ಅಷ್ಟೇ ಜತನದಿಂದ ತಂದ ಆ ಹಣ್ಣುಗಳನ್ನು ನಿಧಾನ ವಾಗಿ ನಾವು ಬಾಲ್ಯದಲ್ಲಿ ಅದನ್ನು ಬಿಡಿಸುತ್ತಿದ್ದ ರೀತಿಯಲ್ಲಿ ಬಿಡಿಸಿ ಮನೆ‌ಮಂದಿಗೆ ಕೊಟ್ಟಾಗ ಮತ್ತೊಮ್ಮೆ ಬಾಲ್ಯದ ದಿನಗಳತ್ತ ಹೋದ ಸಂತಸ…ಅಂತೂ ಇಂತೂ ಹೆಬ್ಬಲಸಿನ ಸುತ್ತ ನಮ್ಮ ನೆನಪಿನ‌ ಪಥ ಇಲ್ಲಿಗೆ ಮುಗಿಯಿತು.

 

- Advertisement -

ಸಂಬಂಧಿತ ಸುದ್ದಿ

1 COMMENT

  1. ಹಲೋ,
    ಕಿಙಿಪ್ಪುನಗ ಪೆಜಕಾಯಿ ತಿಂತ್ನೊ ನೆನಪಾತ್, ಬಾಯಿಡ್ ನೀರ್ ಅರಿನ್….😋

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!