“ಚಂಡ ವಾನರನ ಹುಡುಗಾಟ”~ರಚನೆ : ರಾರಾ.

ಸುತ್ತ ಮುತ್ತ ಹಸಿರು ಕಾಡು
ನಡುವೆ ತೊರೆಯ ಬೆಡಗಿಯು/
ಹರ್ಷತಳೆಯೆ ಕಣ್ಗಳೆರಡು
ಬಿಳಿಯ ನೊರೆಯ ಉಡುಗೆಯು//1//

ಸೃಷ್ಟಿ ಸೊಬಗಿಗೊಲಿದು ಬಂದ
ಶುದ್ಧ ಚಿತ್ತದ ಧನಿಕನು/
ತೊರೆಯ ದಡದ ಬಯಲೆ ಚಂದ!
ಭವನ ರಚಿಸುವೆನೆಂದನು//2//

ಗೃಹದ ಕರ್ಮಕೆ ಜೀವ ತುಂಬಲು
ಕರ್ಮಕಾರರು ಬಂದರು/
ಒಡ್ಡನಂದದಿ ಶಿಲೆಯ ಕಡೆಯಲು
ನೆಲವನಗೆದರು ಭೃತ್ಯರು//3//

ಕುಶಲ ಬಡಗಿಯ ಹಸ್ತಚಳಕಕೆ
ಕೊರಡು ರೂಪವ ತಳೆಯಿತು/
ಗೋಡೆ ಕಂಡಿಹ ವರ್ಣಲೇಪಕೆ
ಬೆರಳು ನಾಸಿಕಕೆಳಸಿತು//4//

ಭರದಿ ಕೆಲಸದಿ ನಿರತರಾಗಲು
ಸೂರ್ಯ ನೆತ್ತಿಯ ಸೇರಿದ/
ಹಬ್ಬದಡುಗೆಯ ಉಂಡು ತೇಗಲು
ಧನಿಕ ಭೃತ್ಯರ ಕೋರಿದ//5//

ಮಾತ ಮನ್ನಿಸಿ ಭೃತ್ಯರೆಲ್ಲರು
ಊರ ದಾರಿಯ ಹಿಡಿದರು/
ಯಾರು ಇರದಿರೆ, ವಾನರೇಂದ್ರರು
ಹಾರುತ್ಹಾರುತ ಬಂದರು//6//

ಭವನಭೂಮಿಯ ಸುತ್ತಿ ಅಲೆದು
ವಸ್ತುವೆಲ್ಲವ ಕಂಡರು/
ಕೊಡಲಿ ಗುದ್ದಲಿ ಹಿಡಿದು ಎಳೆದು
ಮನದಿ ಮುದವನು ತಳೆದರು//7//

ಅಲ್ಲಿ ಇಲ್ಲಿ ಹಾರುತಿಳಿಯುತ
ತಮ್ಮ ತಾವೇ ಮರೆತರು/
ಮೇಲೆ ಕೆಳಗೆ ವಸ್ತುವೆಸೆಯುತ
ಮಂಗಚೇಷ್ಟೆಯ ಮೆರೆದರು//8//

ಕಂಡನಾಗಲೆ ಚಂಡ ವಾನರ
ದಾರುಖಂಡದಿ ಕೀಲವ/
ಮನದ ನಡುವಲಿ ಏನೊ ಕಾತರ!
ಹೊಸೆದನಾಗಲೆ ಜಾಲವ //9//

ಸೇರಿತೇತಕೆ!? ಕ್ಷುದ್ರ ಕೀಲವು
ಮರದ ತುಂಡಿನ ನಡುವಲಿ/
ಕಿತ್ತು ತೆಗೆಯಲು ಎನ್ನ ಬಲವು
ವಾನರೇಂದ್ರರು ಪೊಗಳಲಿ//10//

ತಡವ ಮಾಡದೆ ಭಂಡತನದಲಿ
ಕೊರಡ ಮೇಗಡೆ ಕುಳಿತನು/
ಕೀಲ ಹಿಡಿದು ಬಲದ ಮದದಲಿ
ಪುಂಡರಂದದಿ ಸೆಳೆದನು//11//

ವಾನರೇಶರು ಹಾಡಿ ಪೊಗಳಲು
ಕಪಿಯು ಪುಲಕದಿ ನಲಿದನು/
ಬೇಗ ಬೇಗದಿ ವೇಗವೇರಲು
ಕೀಲ ಕಿತ್ತು ತೆಗೆದನು//12//

ಅರ್ಧ ಕೊರೆದ ಮರದ ತುಂಡಲಿ
ಉದ್ದ ಬಾಲವು ಸೇರಿತು/
ಛಿದ್ರವಾದ ಅಂಗದುರಿಯಲಿ
ಕಪಿಯು ಲೋಕವ ತೊರೆಯಿತು//13//

ಆರ್ತನಾದಕೆ ವಾನರೇಂದ್ರರು
ಬೆದರಿ ವಿಪಿನಕೆ ಪೋದರು/
ಹಬ್ಬದೂಟವ ಮುಗಿಸಿ ಭೃತ್ಯರು
ಕಾರ್ಯಕ್ಷೇತ್ರಕೆ ಬಂದರು//14//

ಮಡಿದ ಮಂಗನ ದೇಹ ಕಾಣಲು
ಮರುಗಿ ಈ ತೆರ ನುಡಿದರು/
ಮಾಡಬಾರದ ಕಾರ್ಯ ಮಾಡಲು
ಕಪಿಯ ಬಗೆಯಲಿ ಮಡಿವರು//15//

( ಡಾ. ರಾಘವೇಂದ್ರ ರಾವ್)
ಮೂಲಕಥೆ : ವಿಷ್ಣುಶರ್ಮನ ಪಂಚತಂತ್ರ ( ಸಂಸ್ಕೃತ)

 
 
 
 
 
 
 
 
 
 
 

Leave a Reply