​​ ಮೋದಕ ಪ್ರಿಯನ ತರಹೇವಾರು ತಿನಿಸುಗಳು

​​ಗೌರೀಗಣೇಶ ಹಬ್ಬ ಬಂತು ಎಂದಲ್ಲಿ ಮನೆಯಲ್ಲಿ-ಮನದಲ್ಲಿ ಏನೋ ಸಂತೋಷ, ಸಡಗರ ಮನೆಮಾಡಿ ಬಿಡುತ್ತದೆ‌. ಅದಂತೂ ಈ ವರ್ಷ ಹೊರಗೆ ಹೋಗದೇ ಮನೆಯಲ್ಲೇ ಕುಳಿತು ಗಣಪತಿ ಹಬ್ಬವನ್ನು ಆಚರಿಸೋ ಕಾಲ ಬಂದಿದೆ. “ಉಳ್ಳವರು ತುಂಬಾ ಕೊಂಡು ತಿನ್ನುವುವರಯ್ಯ, ನಾನೇನು ಮಾಡಲಿ ಬಡವನಯ್ಯ, ಮನೆಯಲ್ಲೇ ಇರೋ ದಿನಸಿಯಿಂದ ತರಹೇವಾರು ತಯಾರಿಸುವನಯ್ಯ” ಎನ್ನೋರಿಗೆ ಕೆಲವೊಂದು ಗಣೇಶ ಚೌತಿಯ ವಿಶೇಷ ಖಾದ್ಯಗಳ ಬಗ್ಗೆ ಗಮನ ಕೊಡೋಣ 

1. ಮೋದಕ: ಮೈದಾ 2 ಲೋಟ, ಸಕ್ಕರೆ 1ವರೆ ಲೋಟ, ಒಣಕೊಬ್ಬರಿ ಒಂದು, ಸ್ವಲ್ಪ ಏಲಕ್ಕಿ ಪೌಡರ್, ತುಪ್ಪ ಅಥವಾ ಎಣ್ಣೆ ಅರ್ಧ ಲೀಟರ್. .ದು ಪಾತ್ರೆಗೆ ಮೈದಾಹಿಟ್ಟು, ಚೂರು ಉಪ್ಪು, ತುಪ್ಪ ಎರಡು ಚಮಚಹಾಕಿ ಮೊದಲು ಕಲಸಿ, ನಂತರ ಚೂರು ಚೂರು ನೀರು ಹಾಕಿ ಮೃದುವಾದ ಉಂಡೆ ಮಾಡಿ, ನಂತರ ಮತ್ತೊಂದು ಬಾಣಲಿಯಲ್ಲಿ ಕೊಬ್ಬರಿ ತುರಿದು, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ ಹೂರಣ ತಯಾರಿ ಮಾಡಿ, ಆಗ ಕಲಸಿದ ಮೈದಾದಿಂದ ಸಣ್ಣಸಣ್ಣ ಉಂಡೆಯಾಗಿ ಮಾಡಿ ಅದನ್ನು ಪೂರಿಯ ತರ ರತ್ತೆಮಾಡಿ ಹೂರಣ ಒಂದೊಂದು ಚಮಚ ತುಂಬಿ ಅದನ್ನು ‘ಮೋದಕ’ ಆಕೃತಿ ಎಂದರೆ ಪಿರಮಿಡ್ ಆಕೃತಿಯಲ್ಲಿ ಲಾಕ್ ಮಾಡಿ, ಎಣ್ಣೆ ಅಥವಾ ತುಪ್ಪ ಬಿಸಿಮಾಡಿದ ಎಣ್ಣೆ ಬಾಣಲೆಯಲ್ಲಿ ಹದವಾಗಿ ಕರಿಯಿರಿ. 
2. ಕರಿಗಡಬು:-  ಇದಕ್ಕೂ ಸಹಾ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬಳಸಿ, ರತ್ತೆಯನ್ನು ಪೂರಿಯ ಸೈಜ್ ಗೆ ಮಾಡಿ, ಹೂರಣಹಾಕಿ ಒಂದು ಕಡೆ ಮಡಚಿ(ಉದ್ದಿನ ದೋಸೆ ಮಡಚಿದಂತೆ) ನಂತರ ಎರಡೂ ಮಡಿಕೆಗಳು ಪರಸ್ಪರ ಬರುತ್ತದೆ ಆಗ ಲಾಕ್ ಮಾಡಲು ಮೃದುವಾಗಿ ಒತ್ತಿ, ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯಿರಿ. 
3. ಪಂಚಕಜ್ಜಾಯ:- ಕಡಲೇಬೇಳೆ, ಸಕ್ಕರೆ, ಎಳ್ಳು, ಏಲಕ್ಕಿ..  ಒಂದು ಲೋಟ ಕಡಲೇ ಬೇಳೆ ಗರಿಗರಿಯಾಗಿ ಹುರಿಯಬೇಕು, ಮಿಕ್ಸಿಯಲ್ಲಿ ಪುಡಿಮಾಡಿ, ಪುಡಿಮಾಡೋವಾಗ ಅರ್ಧ ಲೋಟ ಸಕ್ಕರೆ, ಹುರಿದ ಕಡಲೇಬೇಳೆ, ಏಲಕ್ಕಿ ಹಾಕಿ ಮಿಕ್ಸರ್ ಲಿ ತರಿತರಿ ಪುಡಿಮಾಡಿ, ಅದಕ್ಕೆ ಎರಡು ಚಮಚ ಕರಿಎಳ್ಳು ಹುರಿದು ಹಾಕಿ, ಒಣಕೊಬ್ಬರಿ ತುರಿದು ಹಾಕಿ. (ಬೆಲ್ಲದ್ದೂ ಮಾಡಬಹುದು)
4.  ತಂಬಿಟ್ಟು ಉಂಡೆ:- ಹೆಸರು ಬೇಳೆ, ಏಲಕ್ಕಿ, ಬೆಲ್ಲ, ಕಾಯಿತುರಿ.. ಹೆಸರು ಬೇಳೆ ಕೆಂಪಗೆ ಹುರಿಯಬೇಕು, ನಂತರ ಏಲಕ್ಕಿಯ ಜೊತೆಗೆ ಇದನ್ನು ಮಿಕ್ಸಿಲಿ ಪುಡಿಮಾಡಿ, ಆಮೇಲೆ ಎರಡು ಉಂಡೆ ಬೆಲ್ಲ ಏರು ಪಾಕ (ಲೋಟದಲ್ಲಿ ನೀರು ಇಟ್ಟು, ಅದಕ್ಕೆ ಒಂದು ಹನಿ ಈ ಪಾಕ ಬಿಟ್ಟಲ್ಲಿ ಉಂಡೆಕಟ್ಟಲು ಬರಬೇಕು), ನಂತರ ಆ ಹಿಟ್ಟನ್ನು ಈ ಪಾಕಕ್ಕೆ ಸೇರಿಸಿ, ತುಪ್ಪ ಎರಡು ಚಮಚ ಹಾಕಿ, ಕೊಬ್ಬರಿ ತುರಿ ಹಾಕಿ ಬಿಸಿಬಿಸಿ ಉಂಡೆಯಾಗಿ ಕಟ್ಟಬೇಕು.

5. ಅರಳು ಉಂಡೆ:- ಅರಳು, ಬೆಲ್ಲ, ತುಪ್ಪ, ಏಲಕ್ಕಿ.. ತರಿತರಿ ಮಾಡಿದ ಅರಳು ಮತ್ತು ಬೆಲ್ಲದ ಪಾಕ ಮೇಲೆ ತಿಳಿಸಿದಂತೆ.
6. ನೆಲಗಡಲೇ ಉಂಡೆ:- ಕಡಲೇ ಬೀಜ, ತುಪ್ಪ , ಬೆಲ್ಲ. – ಕಡಲೆ ಬೀಜ ಕೆಂಪಗೆ ಹುರಿದು, ಸಣ್ಣಗೆ ಪುಡಿಮಾಡಿ, ಬೆಲ್ಲದ ಪಾಕ ಮೇಲಿನ ತರ ಮಾಡಿ, ಏಲಕ್ಕಿ ಪುಡಿಯೊಂದಿಗೆ ಈ ಪಾಕಕ್ಕೆ ಮಿಕ್ಸ್ ಮಾಡಿ ಬಿಸಿಬಿಸಿ ಕಟ್ಟಬೇಕು. 
7. ಗೇರು ಬೀಜದ ಉಂಡೆ:- ಗೇರುಬೀಜ, ತುಪ್ಪ, ಬೆಲ್ಲ, ಏಲಕ್ಕಿ ಪೌಡರ್. ಗೇರು ಬೀಜ ಸಣ್ಣ ಚೂರು ಮಾಡಿ, ನಂತರ ಶೇಂಗಾ ಉಂಡೆಯ ವಿಧಾನವನ್ನು ಪಾಲಿಸಬೇಕು.
8. ಎಳ್ಳು ಉಂಡೆ:- ಕರಿ ಅಥವಾ ಬಿಳಿ ಎಳ್ಳು, ಬೆಲ್ಲ, ಏಲಕ್ಕಿ ಪುಡಿ, ತುಪ್ಪ.. ಎಳ್ಳನ್ನು ಹುರಿದು ಅದು ಪಟಪಟ ಹೊಟ್ಟುತ್ತದೆ, ನಂತರ ಒಂದು ಕಲ್ಲಿನಿಂದ ಚೂರು ಜಜ್ಜಿದಲ್ಲಿ ಅದರ ಹೊಟ್ಟು ಹೋಗಿ ಶುಭ್ರವಾಗಿ ನಂತರ ಬೆಲ್ಲದ ಪಾಕಮಾಡಿ, ಅದಕ್ಕೆ ಈ ಎಳ್ಳು, ತುಪ್ಪ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಬಿಸಿಬಿಸಿ ಕಟ್ಟಬೇಕು.
9. ಚಕ್ಕುಲಿ:-  ಮೈದಾಹಿಟ್ಟು, ಅಕ್ಕಿ ಹಿಟ್ಟು, ಜೀರ್ಗೆ, ಉದ್ದಿನಬೇಳೆ..  ಒಂದು ಮೈದಾ ಎರಡು ಲೋಟ ಅಕ್ಕಿ ಹಿಟ್ಟನ್ನು ಇಪ್ಪತ್ತು ನಿಮಿಷಗಳ ಕಾಲ ಇಡ್ಲಿ ಅಟ್ಟದಲ್ಲಿ ಡ್ರೈ ಬೇಯಿಸಬೇಕು. ಇಪ್ಪತ್ತು ನಿಮಿಷಗಳ ನಂತರ ಅದನ್ನು ಕೆಳಗಿಳಿಸಿ ಅದಕ್ಕೆ ಸಣ್ಣ ಅಳತೆ ಲೋಟದಲ್ಲಿ  ಹುರಿದ ಉದ್ದಿನ ಬೇಳೆಯ ಹಿಟ್ಟನ್ನು ಹಾಕಿ, ಜೀರ್ಗೆ ಸಣ್ಣಗೆ ಪುಡಿಮಾಡಿ ಒಟ್ಟಿಗೆ ಮಿಕ್ಸ್ ಮಾಡಿ ಅದಕ್ಕೆ ಐದು ಚಮಚ ಕಾದ ಎಣ್ಣೆಯನ್ನು ಹಾಕಿ, ಸ್ವಲ್ಪ ಬೆಣ್ಣೆ ಸೇರಿಸಿ ಚೂರು ಚೂರು ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕಲಸಿ, ಹತ್ತು ನಿಮಿಷಗಳ ಕಾಲ ಬಿಟ್ಟು ನಂತರ ಚಕ್ಕುಲಿ ಅಚ್ಚಿನಲ್ಲಿ ಚಕ್ಕುಲಿ ಮಾಡಿ ಎಣ್ಣೆಯಲ್ಲಿ ಹದವಾಗಿ ಕರಿಯಬೇಕು.
ಹೀಗೆ.. ಹೇಳುತ್ತಾ, ಬರೆಯುತ್ತಾ ಹೋದರೆ ಅಪ್ಪಕಜ್ಜಾಯ, ಅತ್ರಾಸ, ಒಂದೇ ಎರಡೇ, ಎಲ್ಲವೂ ಗಜವದನನಿಗೆ ಅರ್ಪಣೆ.
ಜೈ ಗಣೇಶ..

ರಾಘವೇಂದ್ರ ಜಿ.ಜಿ, ವಾಣಿಜ್ಯ ಉಪನ್ಯಾಸಕರು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಕುಂಜಿಬೆಟ್ಟು, ಉಡುಪಿ

 

 
 
 
 
 
 
 
 
 
 
 

Leave a Reply