ಯತಿಗಳ ಹಾಡಿಗೆ ಉಡುಪಿಯ ಕೃಷ್ಣ ಹೆಜ್ಜೆ ಹಾಕುತ್ತಿದ್ದ~ ಪಿ.ಲಾತವ್ಯ ಆಚಾರ್ಯ ಉಡುಪಿ.

ನಮ್ಮ ಉಡುಪಿಯ ಬಾಲಕೃಷ್ಣಗೆ ಉಷಃಕಾಲದ ಪೂಜೆಯಿಂದ ರಾತ್ರಿಸಲ್ಲುವ ಶಯನೋತ್ಸವದವರೆಗೆ ಮಂತ್ರ-ಪೂಜೆ-ಪುರಸ್ಕಾರದ ಜೊತೆಗೆ ಸುಮಧುರವಾದ ಸಂಗೀತಸೇವೆಯೂ ಬೇಕು. ಅಂದು ಮಲ್ಪೆ ಕಡಲತೀರದಲ್ಲಿ ದ್ವಾರಕೆಯ ಹಡಗಿನಲ್ಲಿ ಗೋಪಿಹೆಂಟೆಯ ಒಳಗೆ ಹುದುಗಿದ್ದ ಶ್ರೀಕೃಷ್ಣನಪ್ರತಿಮೆಯು ಶ್ರೀಮದಾಚಾರ್ಯರಿಗೆ ದಿವ್ಯಶಕ್ತಿಯಿಂದ ಲಭಿಸಿತು.ಆ ಸಂದರ್ಭದಲ್ಲಿ ಶ್ರೀಮಧ್ವರು ಕಿನಾರೆಯಿಂದ ದ್ವಾದಶಸ್ತೋತ್ರವನ್ನು ಸುಶ್ರಾವ್ಯವಾಗಿ ಹಾಡುತ್ತಾ ಮುದ್ದುಮುಖದ ಮೂರುಜಡೆಯ ಈ ಪುಟ್ಟಕೃಷ್ಣನನ್ನು ತನ್ನ ಒಡಲಲ್ಲಿ ಇರಿಸಿಕೊಂಡು ಉಡುಪಿಗೆ ತಂದು ಪ್ರತಿಷ್ಠಾಪಿಸಿದ ವಿಚಾರ ತಿಳಿದೇ ಇದೆ. ತದನಂತರ ಪ್ರತಿನಿತ್ಯ ಶ್ರೀಕೃಷ್ಣನಿಗೆ ಸಲ್ಲುವ ಹದಿನಾಲ್ಕು ಪೂಜೆಗಳ ಸಂದರ್ಭದಲ್ಲಿ ಕೆಲವೊಂದು ಪೂಜೆಗಳಿಗೆ ಸಂಗೀತ ಸೇವೆಯು ಕೂಡಾ ಶಾಸನವಾಯಿತು.

ಹೀಗೇ ಆರಂಭವಾದ ಸಂಗೀತ ಸೇವೆಯ ಪರಂಪರೆಯು ಮುಂದುವರಿಯಿತು.ಕೆಲವು ಯತಿಗಳುಪೂಜೆ-ಪುರಸ್ಕಾರಗಳ ಜೊತೆಗೆ ಸ್ವಸಂಗೀತ ಸೇವೆಯಿಂದಲೂ ಸಾಮಗಾನಪ್ರಿಯ ಶ್ರೀಕೃಷ್ಣನನ್ನು ಆರಾಧಿಸುತ್ತಾ ಸಾಗಿ ಗಾನಲೋಲನಿಂದ ವಿಶೇಷವಾಗಿ ಅನುಗ್ರಹಿತರಾಗಿದ್ದರು.

ಅಂದರೆ ಶ್ರದ್ಧೆ-ಭಕ್ತಿ-ಭಾವಪೂರ್ಣವಾದ ಸುಶ್ರಾವ್ಯ ಸಂಗೀತಕ್ಕೆ ಉಡುಪಿಯ ಕಡೆಗೋಲು ಕೃಷ್ಣನು ಒಲಿಯುತ್ತಿದ್ದನೆ..?
ಹೌದು..ಸನಾತನ ಪರಂಪರೆಯ ಅನೇಕ ಘಟನೆಗಳು ಉಡುಪಿಶ್ರೀಕೃಷ್ಣನ ಅಪ್ಪಟಸಂಗೀತಪ್ರೇಮಕ್ಕೆ ಸಾಕ್ಷಿಯಾಗಿದೆ.
ಪುರಾಣ,ಉಪನಿಷದ್ ಧರ್ಮಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯಹೊಂದಿದ್ದ ಅನೇಕ ಸಂತರು,ಯತಿಗಳು ಸುಮಧುರವಾದ ಸಂಗೀತ ಸೇವೆಯಿಂದ ಉಡುಪಿಯ ಶ್ರೀಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿದ್ದರು.

ಶ್ರೀಶಿರೂರುಮಠದ ಶ್ರೀವಾಮನತೀರ್ಥ ಪರಂಪರೆಯ 5ನೇ ಯತಿಗಳಾದ ಶ್ರೀಕೃಷ್ಣತೀರ್ಥರು ಮಹಾತಪಸ್ವಿ ಎಂದು ಪ್ರಸಿದ್ಧರಾಗಿದ್ದರು.ಸಕಲವೇದ-ಉಪನಿಷದ್,ಧರ್ಮಶಾಸ್ತ್ರಗಳ ಜೊತೆಗೆಯೇ ಸಂಗೀತಶಾಸ್ತ್ರದಲ್ಲೂ ಅಪಾರ ಸಿದ್ದಿ-ಸಾಧಕರೆನಿಸಿದ್ದರು. ವಿಶೇಷವೆಂದರೆ ಯತಿಗಳು ಪೂಜೆಗೆ ಕುಳಿತರೆಂದರೆ ವೇದಮಂತ್ರಗಳ ಜೊತೆಗೆ ಇಂಪಾದ ರಾಗದಲ್ಲಿ ಭಗವಂತನಿಗೆ ಅನೇಕ ಸ್ತುತಿಗಳಿಂದ ಅರ್ಚನೆ ಸಲ್ಲಿಸುತ್ತಿದ್ದರು.

ನೈವೇದ್ಯ ಸಲ್ಲಿಸುವ ಸಮಯದಲ್ಲಿ ಗರ್ಭಗೃಹದ ಬಾಗಿಲು ಮುಚ್ಚಿರುತ್ತದೆ.ಈ ಸಂದರ್ಭದಲ್ಲಂತೂ ಬಹಳ ಹೊತ್ತಿನತನಕ ಶ್ರೀಪಾದರ ಸುಮಧುರ ಕಂಠದ ಹೃದಯಂಗಮ ಗಾನವೈಭವವು ಶ್ರೀಕೃಷ್ಣನಿಗೆ ಅರ್ಪಣೆಯಾಗುತ್ತಿರುತ್ತದೆ.ಸಂಗೀತ ಸಂಭ್ರಮದಲ್ಲಿ ಯತಿಗಳು ತಲ್ಲೀನರಾಗಿದ್ದರೆ ಶ್ರೀಕೃಷ್ಣನು ಯತಿಗಳ ಗಾನಲಹರಿಗೆ ಹೆಜ್ಜೆ ಹಾಕಿ ನಲಿಯುತ್ತಿದ್ದನಂತೆ.ಗರ್ಭಗುಡಿಯ ಒಳಗಿನಿಂದ ಹರಿದುಬರುತ್ತಿದ್ದ ಶ್ರೀಕೃಷ್ಣನ ಗೆಜ್ಜೆ ಕಾಲ್ಗಳ ಮಧುರವಾದ ಧ್ವನಿಗೆ ಗರ್ಭಗುಡಿಯ ಹೊರಭಾಗದಲ್ಲಿ ಕಿವಿ ನಿಮಿರಿಸಿ ನಿಂತಿರುತ್ತಿದ್ದ ಮಠದ ಸಿಬ್ಬಂದಿಗಳು ಮೂಕವಿಸ್ಮಿತರಾಗುತ್ತಿದ್ದರು.

ಗರ್ಭಗೃಹದಲ್ಲಿ ತಾಸುಗಟ್ಟಲೆ ಜರಗುತ್ತಿದ್ದ ಇವರೀರ್ವರ ಗಾನ-ನರ್ತನದ ವೈಭವವು ಅಗಾಗೇ ಜರಗುತ್ತಲೇ ಇರುತ್ತಿತ್ತು.ಶ್ರೀಕೃಷ್ಣನ ಗೆಜ್ಜೆಕಾಲ್ಗಳ ನಾದವನು ಕಿವಿತುಂಬಿಸಿಕೊಂಡು ಕೃತಾರ್ಥರಾಗಲು ಜ್ಞಾನಿಗಳ ದಂಡು ಶ್ರೀಕೃಷ್ಣತೀರ್ಥರ ಬೆನ್ನುಬಿದ್ದಿದ್ದರು. ಅಖಂಡತಪೋಬಲ ಹಾಗೂ ಸಂಗೀತಸೇವೆಯ ಮೌಲ್ಯಗಳನ್ನು ಉತ್ತುಂಗಕ್ಕೇರಿಸುವ ಈ ಅಪೂರ್ವ ನೈಜಘಟನೆಗಳು ನಮ್ಮ ಸತ್ಪರಂಪರೆಯ ಕೀರ್ತಿಕಲಶಕ್ಕೆ ಮುತ್ತಿನಕಿರೀಟ.

ಆತ್ಮೀಯ ಓದುಗಮಿತ್ರರೇ, ಜ್ಞಾನ-ಸಿದ್ದಿ-ಸಾಧನೆಯ ಜೊತೆಗೆ ಭಕ್ತಿಪೂರ್ವಕವಾಗಿ ಮನತುಂಬಿ ಹಾಡಿ ಭಗವಂತನನ್ನು ಒಲಿಸಿಕೊಂಡ ಅನೇಕ ಮಹಾತ್ಮರ ಕಥೆಗಳು ನಮ್ಮ ಸನಾತನ ಪರಂಪರೆಯ ಪುಟಗಳಲ್ಲಿ ದಾಖಲಾಗಿವೆ.ತ್ರಿಕರಣಪೂರ್ವಕವಾಗಿ ಸಲ್ಲಿಸುವ ನಿರ್ಮಲ ನಿರಪೇಕ್ಷ ಪ್ರಾರ್ಥನೆ ಯಾವುದೇ ರೂಪದಲ್ಲಿದ್ದರೂ ಭಗವಂತನ ಕೃಪೆ ಇದ್ದೇ ಇರುತ್ತದೆ.ಸಮಸ್ತರಿಗೂ ಸಂಗೀತಪ್ರಿಯ ಉಡುಪಿ ಶ್ರೀಕೃಷ್ಣದೇವರ ಹಾಗೂ ಶ್ರೀಶಿರೂರುಮಠ ಪರಂಪರೆಯ ಶ್ರೀಕೃಷ್ಣತೀರ್ಥರ ಪರಿಪೂರ್ಣ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ ಇನ್ನೊಂದು ಪುಣ್ಯಕಥೆಯೊಂದಿಗೆ ಮತ್ತೆ ಸೇರೋಣ. ಪ್ರೀತೋಸ್ತು ಕೃಷ್ಣಪ್ರಭುಃ

ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.

 
 
 
 
 
 
 
 
 
 
 

Leave a Reply