ನಿಟ್ಟೂರು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಭತ್ತದ ಕೃಷಿ

ಉಡುಪಿಯಲ್ಲಿ ನಡೆಸಿದ ಕ್ರಾಂತಿಕಾರಿ ಕಾರ್ಯಕ್ರಮ ಹಡಿಲು ಭೂಮಿ ಕೃಷಿ ಆಂದೋಲನದ ಮೂಲ ಪ್ರೇರಣೆಯಾದ ನಿಟ್ಟೂರು ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ನಡೆಸುವ ಭತ್ತದ ಕೃಷಿಯ ನಾಟಿ ಕಾರ್ಯ ಇಂದು ದಿನಾಂಕ 16-07-2023 ರಂದು ನಡೆಯಿತು. ಈ ನಾಟಿ ಕಾರ್ಯದಲ್ಲಿ ಉಡುಪಿಯ ನಿಕಟಪೂರ್ವ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ನಾಟಿ ಮಾಡಿದರು.
2020 ರಲ್ಲಿ ನಿಟ್ಟೂರು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಆಚರಿಸಲು ಕೋವಿಡ್ ನಿಯಂತ್ರಣದ ನಿಯಮಾವಳಿಯಿಂದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಸಾಧ್ಯವಾಗಿತ್ತು. ಸುವರ್ಣಮಹೋತ್ಸವವನ್ನು ಮಾದರಿಯಾಗಿ ನಡೆಸಬೇಕು ಎನ್ನುವ ಉದ್ದೇಶದಿಂದ ಶಾಲೆಯ ಸುತ್ತಮುತ್ತಲಿನ 50 ಎಕರೆ ಹಡಿಲು ಬಿಟ್ಟ ಕೃಷಿ ಭೂಮಿಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಸೇರಿ ಭತ್ತದ ಕೃಷಿ ಮಾಡಿ ಯಶಸ್ವಿಯಾದರು. ಇದರ ಪ್ರೇರಣೆಯಿಂದ ಈ ಶಾಲೆಯ ಗೌರವಾಧ್ಯಕ್ಷರಾಗಿರುವ ಶ್ರೀ ಕೆ ರಘುಪತಿ ಭಟ್ ಅವರು ಕೇದಾರೋತ್ಥಾನ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 1,500 ಎಕರೆ ಹಡಿಲು ಬಿಟ್ಟ ಕೃಷಿ ಭೂಮಿಗಳಲ್ಲಿ ಭತ್ತದ ಕೃಷಿ ಮಾಡಿ ಯಶಸ್ವಿಯಾದರು. ಈ ಕೃಷಿ ಆಂದೋಲನದಲ್ಲಿ ಉಡುಪಿ ಕ್ಷೇತ್ರದಾದ್ಯಂತ ಎಲ್ಲಾ ಸಂಘ ಸಂಸ್ಥೆಗಳು, ಯುವಕ  ಯುವತಿ ಮಂಡಳಗಳ ಸದಸ್ಯರು ಹಾಗೂ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಕೃಷಿಯ ಅರಿವನ್ನು ಪಡೆದರು.
ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲಿ ನಡೆಯಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಕೃಷಿಯ ಶಿಕ್ಷಣವನ್ನು ನೀಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಜ್ಞಾನವಿರುತ್ತದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಮೂಲಕ ಭತ್ತದ ಕೃಷಿ ಮಾಡುತ್ತಿರುವ ನಿಟ್ಟೂರು ಪ್ರೌಢಶಾಲೆಯ ಕಾರ್ಯ ಶ್ಲಾಘನೀಯ ಎಂದು ರಘುಪತಿ ಭಟ್ ಅವರು ಹೇಳಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
 
 
 
 
 
 
 
 
 
 
 

Leave a Reply